ಧಾರವಾಡ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯು ನ್ಯಾಯಾಧೀಶರ ಭೇಟಿಗೆ ಪಟ್ಟು ಹಿಡಿದು ಮೊಬೈಲ್ ಟವರ್ ಏರಿದ್ದವನನ್ನು ಸಾಹಸ ಅಕಾಡೆಮಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾವೇದ್ ದಲಾಯತ್ (40) ಎಂಬಾತ ಸಣ್ಣಪುಟ್ಟ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾನೆ. ಮದ್ಯ ಸೇವಿಸಿ ಬಂದಿದ್ದ ಈತ ಪೊಲೀಸರು ತನಗೆ ಹೊಡೆದಿದ್ದಾರೆ ಎಂದು ಆರೋಪಿಸಿ ಮಂಗಳವಾರ ಸಂಜೆ ಇಲ್ಲಿನ ಜ್ಯುಬಿಲಿ ವೃತ್ತದಲ್ಲಿರುವ ಸುಮಾರು 100 ಅಡಿ ಎತ್ತರದ ಮೊಬೈಲ್ ಟವರ್ ಏರಿ ಕುಳಿತಿದ್ದ.
ಇದನ್ನು ಗಮನಿಸಿದ ಹಲವರು ಪೊಲೀಸರಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಈತನ ಮನವೊಲಿಸಲು ಪ್ರಯತ್ನಿಸಿದರು. ನ್ಯಾಯಾಧೀಶರು ಬಂದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಈತ ಪಟ್ಟು ಹಿಡಿದಿದ್ದ.
ಇದೇ ಸಂದರ್ಭದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಮುಗಿಸಿಕೊಂಡು ಊರಿನತ್ತ ತೆರಳುತ್ತಿದ್ದ ಜನರಲ್ ತಿಮ್ಮಯ್ಯ ಸ್ಮಾರಕ ಸಾಹಸ ಅಕಾಡೆಮಿ ತಂಡ ಈ ದೃಶ್ಯವನ್ನು ನೋಡಿ ಟವರ್ ಏರಿದ ವ್ಯಕ್ತಿಯನ್ನು ಕೆಳಗಿಳಿಸಲು ಮುಂದಾದರು. ಈ ತಂಡದ ಶಬ್ಬೀರ್ ಅಹ್ಮದ್ ಹಾಗೂ ಅಗ್ನಿ ಶಾಮಕ ತಂಡದ ಮಹಮ್ಮದ್ ಸಾಧಿಕ್ ಟವರ್ ಏರಿ ವ್ಯಕ್ತಿಯ ಮನವೊಲಿಸುವ ಪ್ರಯತ್ನ ನಡೆಸಿದರು.
‘ಸುಮಾರು ಎರಡೂವರೆ ಗಂಟೆಗಳ ಕಾಲ ಟವರ್ ಏರಿದವನನ್ನು ಕೆಳಗಿಳಿಸಲು ಪ್ರಯತ್ನ ನಡೆಸಲಾಯಿತು. ಆರಂಭದಲ್ಲಿ ಮಾತನಾಡಲು ಸಿದ್ಧನಿರಲಿಲ್ಲ. ನೀರು ಕೊಟ್ಟರೂ ಕುಡಿಯಲಿಲ್ಲ. ಹಲವು ಸುತ್ತಿನ ಮಾತುಕತೆಯ ನಂತರ ಆತ ಹಸಿವಾಗಿದ್ದು, ಬಿರಿಯಾನಿ ಬೇಕು ಎಂದ. ಅದನ್ನು ತರಿಸಿಕೊಟ್ಟರೂ ತಿನ್ನಲಿಲ್ಲ. ನಂತರ ಆತ್ನ ಪತ್ನಿಗೆ ಕರೆ ಮಾಡಿ ಫೋನ್ ಕೊಟ್ಟ ನಂತರ ಮನಸ್ಸು ಬದಲಿಸಿದ. ಅಂತಿಮವಾಗಿ ಸಿಗರೇಟು ಬೇಕು ಎಂದ. ಅದನ್ನು ಕೊಡುವ ಪ್ರಯತ್ನ ಯಶಸ್ಸು ತಂದಿತು. ಸಿಬ್ಬಂದಿಯೊಂದಿಗೆ ಕೆಳಗಿಳಿದ’ ಎಂದು ಅಕಾಡೆಮಿಯ ವ್ಯವಸ್ಥಾಪಕ ರಾಜೇಂದ್ರ ಘಟನೆ ವಿವರಿಸಿದರು.
ಈ ಇಡೀ ಪ್ರಕರಣ ನೋಡಲು ವೃತ್ತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಇವರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಕೆಳಗಿಳಿದ ಜಾವೇದ್‌ನನ್ನು ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಈ ಕುರಿತು ಮಾಹಿತಿ ನೀಡಿದ ಶಹರ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ, ‘ಮದ್ಯ ಸೇವಿಸಿ ಜಾವೀದ್ ದಲಾಯತ್ ಟವರ್ ಏರಿದ್ದ. ಈತನ ಮೇಲೆ ವಿದ್ಯಾಗಿರಿ, ಶಹರ ಹಾಗೂ ಉಪನಗರ ಠಾಣೆಯಲ್ಲಿ ಈತನ ಮೇಲೆ ಕೆಲ ಪ್ರಕರಣಗಳಿವೆ. ಕೆಳಗಿಳಿದ ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಮುಚ್ಚಳಿಕೆ ಬರೆಯಿಸಿಕೊಂಡು ಮದಾರಮಡ್ಡಿಯಲ್ಲಿರುವ ಆತನ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.