ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಗೆ ಸುತ್ತಲಿನ ಜಿಲ್ಲೆಗಳಿಂದ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಅವರ ಅನುಕೂಲಕ್ಕೆ ನಗರದಲ್ಲಿ ನಾಲ್ಕು ಪ್ರಮುಖ ಬಸ್ ನಿಲ್ದಾಣಗಳಿವೆ. ಅವು ತಮ್ಮ ಮೂಲ ಉದ್ದೇಶವನ್ನು ಈಡೇರಿಸಿವೆಯೇ, ಸುಗಮ ಸಂಚಾರಕ್ಕೆ ಅನುಕೂಲವಾಗಿವೆಯೇ, ಪ್ರಯಾಣಿಕರಿಗೆ ಸಮಸ್ಯೆಗಳಿವೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟ ‘ಪ್ರಜಾವಾಣಿ’ಗೆ ಕಂಡ ಚಿತ್ರಣ ಇದು.
ವಾಣಿಜ್ಯ ದೃಷ್ಟಿಯಿಂದ ಹುಬ್ಬಳ್ಳಿಯು ಕೂಡ ಪ್ರಮುಖ ನಗರ. ಅಂದಾಜಿನ ಪ್ರಕಾರ, ನಿತ್ಯ ಎಂಟು ಲಕ್ಷ ಜನರು ಹುಬ್ಬಳ್ಳಿಗೆ ಬಂದು ಹೋಗುತ್ತಾರೆ. ಇಷ್ಟು ಪ್ರಯಾಣಿಕರನ್ನು ನಿರ್ವಹಿಸಲು ಸಿಟಿ ಬಸ್ ನಿಲ್ದಾಣ (ಸಿಬಿಟಿ), ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಈ ಯಾವ ನಿಲ್ದಾಣಗಳೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಹಳೆಯ ಬಸ್ ನಿಲ್ದಾಣ ಕೆಡವಿ, ಹೊಸದಾಗಿ ನಿರ್ಮಿಸುವ ಕಾಮಗಾರಿ ಅಂತಿಮ ಹಂತದಲ್ಲಿದೆ.
ಸಿಬಿಟಿ: ಹುಬ್ಬಳ್ಳಿ ಸುತ್ತಲಿನ ಹಳ್ಳಿ, ಧಾರವಾಡ ಮುಂತಾದ ಸ್ಥಳೀಯ ಮಾರ್ಗಗಳ ಬಸ್‌ಗಳು ಹಾಗೂ ಬಿಆರ್‌ಟಿಎಸ್ ಬಸ್‌ಗಳು ಇಲ್ಲಿಂದ ಕಾರ್ಯಾಚರಣೆ ನಡೆಸುತ್ತವೆ. ಇಲ್ಲಿ ಐದು ಅಂತಸ್ತುಗಳ ಕಟ್ಟಡ ನಿರ್ಮಿಸಲಾಗಿದ್ದು, ವಾಣಿಜ್ಯ ಮಳಿಗೆಗಳಿಗೂ ಅವಕಾಶ ಇದೆ. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ಇರುವ ಸ್ಥಳಾವಕಾಶ ಚಿಕ್ಕದು.
ಬಿಆರ್‌ಟಿಎಸ್ ಬಸ್‌ಗಳಿಗಾಗಿ ಹೆಚ್ಚಿನ ಜಾಗ ಮೀಸಲಿಟ್ಟು, ಸ್ಥಳೀಯ ಬಸ್‌ಗಳಿಗೆ ಕೇವಲ ಎರಡು ಪ್ಲಾಟ್‌ಫಾರ್ಮ್ ನೀಡಲಾಗಿದೆ. ನಿತ್ಯ ಇಲ್ಲಿಂದ 950ಕ್ಕೂ ಅಧಿಕ ಬಸ್ ಕಾರ್ಯಾಚರಣೆ ನಡೆಸುವ ಕಾರಣ, ಸದಾ ದಟ್ಟಣೆ ಇರುತ್ತದೆ. ಪ್ರಯಾಣಿಕರಿಗೆ ಕೂರಲು ಸಾಕಷ್ಟು ಬೆಂಚುಗಳಿಲ್ಲ. ಇರುವ ಕಲ್ಲು ಬೆಂಚುಗಳಲ್ಲಿ ಕುಡುಕರು, ಭಿಕ್ಷುಕರು ಇರುತ್ತಾರೆ. ಕಸದ ಡಬ್ಬಿಗಳಿದ್ದರೂ ಜನರು ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಬಿಡಾಡಿ ದನಗಳು ಪ್ಲಾಟ್‌ಫಾರ್ಮ್‌ಗಳಲ್ಲಿ ಮಲಗುವುದು, ಸಗಣಿ ಹಾಕುವುದು ತಪ್ಪುತ್ತಿಲ್ಲ.
‘ಶಕ್ತಿ ಯೋಜನೆಯ ನಂತರ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಬಸ್‌ಗಳ ಸಂಖ್ಯೆ ಹೆಚ್ಚಾಗದಿದ್ದರಿಂದ ಪ್ರಯಾಣಿಕರಿಗೆ ಅನಾನುಕೂಲ ಆಗಿದೆ. ಹೆಚ್ಚಿನ ಬಸ್‌ಗಳ ಬಾಗಿಲು ಮುಚ್ಚಿಕೊಳ್ಳುವುದಿಲ್ಲ. ದಟ್ಟಣೆ ಅವಧಿಯಲ್ಲಿ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಾರೆ. ಅನಾಹುತ ಸಂಭವಿಸಿದರೆ ಯಾರು ಹೊಣೆ. ಬಸ್‌ಗಳಲ್ಲಿ ಕಿಸೆಗೆ ಕನ್ನ ಹಾಕುವವರ ಹಾವಳಿಯೂ ಇದೆ’ ಎಂದು ಮೊಬೈಲ್ ಕಳೆದುಕೊಂಡ ನಿರ್ವಾಹಕರೊಬ್ಬರು ಹೇಳಿದರು.
ನೈರ್ಮಲ್ಯ ಶೂನ್ಯ: ನಿಲ್ದಾಣದ ತಳ ಮಹಡಿಯ ಪಾರ್ಕಿಂಗ್ ಜಾಗವು ಕತ್ತಲೆಯಿಂದ ಕೂಡಿದ್ದು, ಮೇಲಿನಿಂದ ಕಸ ಎಸೆಯುವವರ ತಿಪ್ಪೆಯೂ ಹೌದು. ಲಿಫ್ಟ್, ಮೆಟ್ಟಿಲು, ಮೂಲೆ– ಎಲ್ಲೆಂದರಲ್ಲಿ ಉಗುಳಿ ಕಟ್ಟಡದ ಅಂದ ಕೆಟ್ಟಿದೆ. ಮೂತ್ರ ವಿಸರ್ಜನೆಗೆ ₹2, ಶೌಚಕ್ಕೆ ₹10 ಪಡೆದುಕೊಂಡರೂ ನೈರ್ಮಲ್ಯ ಮಾತ್ರ ಶೂನ್ಯ.
‘ಇಲ್ಲಿ ಜಾಗ ಬಹಳ ಕಡಿಮೆ ಇದೆ. ಕೆಲವೊಮ್ಮೆ ಬಸ್‌ಗಳು ಬರಲು ತಡವಾದರೆ ಕೂರಲು ಆಗುವುದಿಲ್ಲ. ಮಳೆ ಬಂದರೆ ಒದ್ದೆಯಾಗುತ್ತೇವೆ’ ಎಂದು ಮಗುವನ್ನು ಎತ್ತಿಕೊಂಡು ಬಸ್‌ಗಾಗಿ ಕಾಯುತ್ತ ನಿಂತಿದ್ದ ರಾಜಮ್ಮ ಹೇಳಿದರು.
ನಿಲ್ದಾಣ ನಿರ್ಮಾಣದ ಸಂದರ್ಭದಲ್ಲಿ ತೆರವು ಮಾಡಲಾದ ಅಂಗಡಿಗಳವರಿಗೆ ಬಾಡಿಗೆ ನೀಡಲು ಎರಡನೇ ಮಹಡಿಯಲ್ಲಿ 21 ಮಳಿಗೆಗಳ ಒಂದು ಹಾಲ್ ಕಾಯ್ದಿರಿಸಲಾಗಿದೆ. ಇದರ ಬಾಡಿಗೆ ಹೆಚ್ಚು ಎಂಬ ಕಾರಣಕ್ಕೆ ಅವು ಖಾಲಿ ಬಿದ್ದಿವೆ. ಗ್ರಾಹಕರು ಒಳಗೆ ಬಾರದ ಕಾರಣ ಮೊದಲ ಮಹಡಿಯಲ್ಲಿ ಇದ್ದ ಒಂದು ಖಾನಾವಳಿ ಮುಚ್ಚಿದೆ.
ಹೊಸೂರು ನಿಲ್ದಾಣಕ್ಕೆ ನಿರ್ವಹಣೆ ಕೊರತೆ: ನಗರದಲ್ಲಿ ತಕ್ಕ ಮಟ್ಟಿಗೆ ಸುಸಜ್ಜಿತವಾಗಿರುವುದು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ. ವಿಶಾಲವಾಗಿದೆ, ಉಪಾಹಾರ ಮಂದಿರಗಳಿವೆ, ಡಿಜಿಟಲ್ ಬೋರ್ಡ್ ಇವೆ, ಸಾಕಷ್ಟು ಆಸನಗಳಿವೆ, ಇನ್ನಷ್ಟು ಆಸನ ಅಳವಡಿಕೆಗೆ ಖಾಲಿ ಜಾಗವೂ ಇದೆ. ಒಂದಷ್ಟು ಹಸಿರು ಕಾಣಬಹುದು. ಆದರೆ ನಿರ್ವಹಣೆ ಕೊರತೆಯಿಂದ ಸೊರಗಿದೆ. ರಾತ್ರಿ 9.30ರ ನಂತರ ಈ ನಿಲ್ದಾಣದಿಂದ ಯಾವುದೇ ಬಸ್ ಕಾರ್ಯಾಚರಿಸುವುದಿಲ್ಲ, ಪ್ರಯಾಣಿಕರು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣಕ್ಕೆ ಹೋಗುವುದು ಅನಿವಾರ್ಯ.
‘ದೂರದ ಊರುಗಳಿಂದ ಬರುವ ಬಸ್‌ಗಳ ನಿಲುಗಡೆ ಸ್ಥಳದಿಂದ ಸಿಟಿ ಬಸ್ ಹಿಡಿಯಲು ಮೆಟ್ಟಿಲು ಹತ್ತಿ ಪ್ರಯಾಣಿಕರು ಹೈರಾಣಾಗುತ್ತಾರೆ. ಮಕ್ಕಳು, ಲಗೇಜ್ ಎತ್ತಿಕೊಂಡು ಬರುವವರ ಪಾಡು ಕೇಳುವವರಿಲ್ಲ’ ಎಂದರು ಮಾಲತಿ ಭಟ್. ಅಧಿಕಾರಿಗಳ ಕಚೇರಿಗೆ ಹೋಗುವ ಲಿಫ್ಟ್ ಸರಿ ಇದೆ, ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಿರುವ ಲಿಫ್ಟ್ ನಿಷ್ಕ್ರಿಯವಾಗಿದೆ. ಇಳಿಜಾರು ಮಾರ್ಗ ನಿರ್ಮಿಸಿದ್ದರೂ ಅದು ಕಸ ತುಂಬಿ, ಕತ್ತಲು ಆವರಿಸಿ ಬಳಕೆಗೆ ಯೋಗ್ಯವಾಗಿಲ್ಲ. ಸಬ್ ವೇಗಳು ಬಾಗಿಲು ಮುಚ್ಚಿವೆ. ಇಡೀ ನಿಲ್ದಾಣದಲ್ಲಿ ‘ಉಗುಳಿದರೆ ದಂಡ’ ಎಂದು ಬರೆದಿದ್ದರೂ ಜನರು ಅದಕ್ಕೆ ಸವಾಲೆಸೆದಿದ್ದಾರೆ.
ಸ್ಥಳೀಯ ಮಾರ್ಗದ ಹಲವು ಬಸ್‌ಗಳು ಸ್ಥಳಾವಕಾಶದ ಕೊರತೆಯಿಂದ ನಿಲ್ದಾಣದ ಒಳಕ್ಕೆ ಬರುವುದಿಲ್ಲ. ಧಾರವಾಡ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಅಲ್ಲಿ ಮಳೆ, ಬಿಸಿಲಿನಿಂದ ರಕ್ಷಣೆ ಇಲ್ಲ. ವಾಹನ ಸಂಚಾರಕ್ಕೂ ಇಕ್ಕಟ್ಟು.
‘ಸಿಟಿ ಬಸ್‌ಗಳು ನಿಲ್ಲುವ ಜಾಗದಲ್ಲಿ ಬಸ್‌ಗಳನ್ನು ಹೊರಳಿಸುವುದು ಕಷ್ಟ, ಜೊತೆಗೆ ಆಟೊಗಳೂ ಒಳಗೆ ಬರುತ್ತವೆ. ಅವರಿಗೆ ತಿಳಿಹೇಳಿದರೆ ನಮ್ಮ ಮೇಲೆಯೇ ರೇಗುತ್ತಾರೆ. ಕಾಲೇಜು ಮಕ್ಕಳು ಇಲ್ಲಿ ಕುಳಿತು ಮೊಬೈಲ್‌ಗಳಲ್ಲಿ ಗೇಮ್ ಆಡುತ್ತ, ಸಿಕ್ಕಸಿಕ್ಕಲ್ಲಿ ಉಗುಳುತ್ತಾರೆ. ಮಳೆ ನೀರು ಚರಂಡಿಗೆ ಹೋಗದೆ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಂತಿದೆ. ಸರಿಯಾಗಿ ಯೋಜನೆ ರೂಪಿಸಿಲ್ಲ’ ಎಂದು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಯೊಬ್ಬರು ದೂರಿದರು.
ನಿರ್ವಹಣೆ ಮಾಡುತ್ತಿದ್ದೇವೆ: ‘ಹೊಸೂರು ಬಸ್ ನಿಲ್ದಾಣದ ಲಿಫ್ಟ್ ಮತ್ತೆ ಕಾರ್ಯಾಚರಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಿತ್ಯ ಬೆಳಿಗ್ಗೆ ಸ್ವಚ್ಛಗೊಳಿಸುತ್ತೇವೆ, ಮತ್ತೆ ಸ್ವಲ್ಪ ಸಮಯ ಕಳೆಯುವಲ್ಲಿ ಹಳೆಯ ಪರಿಸ್ಥಿತಿಯೇ ಆಗಿರುತ್ತದೆ. ಜನರೂ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ವಿವರಿಸಿದರು.
ಇನ್ನು, ಹಳೇ ಬಸ್ ನಿಲ್ದಾಣದ ಜಾಗದಲ್ಲಿ ಮೂರು ಮಹಡಿಗಳ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ಆಮೆ ಗತಿಯಲ್ಲಿದೆ. ಆದ್ದರಿಂದ ಎದುರಿನ ರಸ್ತೆಯಲ್ಲೇ ಬಸ್‌ಗಳು ನಿಲ್ಲುತ್ತವೆ, ಅಲ್ಲೇ ಜನರು ಗುಂಪುಗೂಡಿರುತ್ತಾರೆ. ಪಕ್ಕದಲ್ಲೇ ಆಟೊಗಳೂ ನಿಂತಿರುತ್ತವೆ. ವೃದ್ಧರು, ಅಂಗವಿಕಲರು, ಮಕ್ಕಳಿಗೆ ಬಸ್ ಕಾಯುವಾಗ ಕುಳಿತುಕೊಳ್ಳಲು ಜಾಗವಿಲ್ಲ. ಫ್ಲೈ ಓವರ್ ನಿರ್ಮಾಣವೂ ನಡೆದಿರುವುದರಿಂದ ಬಿಸಿಲಲ್ಲಿ ದೂಳಿನ ಮಜ್ಜನ, ಮಳೆಯಲ್ಲಿ ಕೆಸರಿನ ಅಭಿಷೇಕ. ಈ ವರ್ಷ ಬಸ್ ನಿಲ್ದಾಣ ಸಾರ್ವಜನಿಕ ಸೇವೆಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.