ADVERTISEMENT

ಹುಬ್ಬಳ್ಳಿ | ಆರೋಗ್ಯ ರಕ್ಷಣೆ: ಜಿಮ್‌ನತ್ತ ಯುವತಿಯರ ಚಿತ್ತ

ಗೌರಮ್ಮ ಕಟ್ಟಿಮನಿ
Published 15 ಜುಲೈ 2024, 6:28 IST
Last Updated 15 ಜುಲೈ 2024, 6:28 IST
<div class="paragraphs"><p>ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರುವ ಜೈಹೋ ಫಿಟ್ನೆಸ್‌ ಜಿಮ್‌ನಲ್ಲಿ ಮಹಿಳೆಯರಿಗೆ ತರಬೇತಿ ನೀಡುತ್ತಿರುವ ತರಬೇತುದಾರ ಕೃಷ್ಣ ಚಿಕ್ಕತುಂಬಳ</p></div>

ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರುವ ಜೈಹೋ ಫಿಟ್ನೆಸ್‌ ಜಿಮ್‌ನಲ್ಲಿ ಮಹಿಳೆಯರಿಗೆ ತರಬೇತಿ ನೀಡುತ್ತಿರುವ ತರಬೇತುದಾರ ಕೃಷ್ಣ ಚಿಕ್ಕತುಂಬಳ

   

ಹುಬ್ಬಳ್ಳಿ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಹಿಳೆಯರು ಪುರುಷರಿಗಿಂತ ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲ. ಆರೋಗ್ಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವಳಿ ನಗರದ ಜಿಮ್‌ಗಳಲ್ಲಿ ಪುರುಷರಿಗೆ ಪೈಪೋಟಿ ನೀಡುವ ರೀತಿ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ. ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ತೋರುತ್ತಿದ್ದಾರೆ.

ಆರೋಗ್ಯದ ವಿಷಯದಲ್ಲಿ ಸದ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮಹಿಳೆಯರು ಅದರಲ್ಲೂ ಯುವತಿಯರು ಜಿಮ್‌ನತ್ತ ಆಕರ್ಷರಾಗುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಆರೋಗ್ಯ ಕಾಯ್ದುಕೊಳ್ಳುವುದು, ಫಿಟ್‌ನೆಸ್‌ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಜಿಮ್‌ನಲ್ಲಿ ತರಬೇತಿ, ಮಾರ್ಗದರ್ಶನ ಪಡೆಯುತ್ತಿದ್ದಾರೆ.

ADVERTISEMENT

‘ಮನೆಯಲ್ಲಿ ಬೆಳಿಗ್ಗೆಯಿಂದ ಕೆಲಸ ಮಾಡುತ್ತೇವೆ. ಮತ್ತೇಕೆ ಜಿಮ್‌, ವ್ಯಾಯಾಮ ಎನ್ನುವ ಮನೋಭಾವ’ದಿಂದ ಕೆಲವರು ಹೊರಬರುತ್ತಿದ್ದಾರೆ. ಇನ್ನೂ ಕೆಲವರು ಜಿಮ್‌ನ ಸಹವಾಸವೇ ಬೇಡ ಎಂದು ದೂರವುಳಿದಿದ್ದಾರೆ. ಆದರೆ, ದೇಹ ದಂಡನೆ ಜೊತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಜಿಮ್‌ ಅನಿವಾರ್ಯ ಎಂಬುದು ಕೆಲವರು ಅರಿತುಕೊಂಡಿದ್ದಾರೆ.

‘ಮನೆಯಲ್ಲಿ ಕೆಲಸವೇ ಸಾಕಷ್ಟು ಇರುತ್ತದೆ. ಜಿಮ್‌ ಅಗತ್ಯವಿಲ್ಲ’ ಎಂಬ ಭಾವನೆ ಹಲವರಲ್ಲಿದೆ. ಇಂಥ ಭಾವನೆ ಕ್ರಮೇಣ ಕಡಿಮೆಯಾಗಬೇಕು. ಜಿಮ್‌ ಇಲ್ಲದೆಯೂ ಆರೋಗ್ಯ ಕಾಯ್ದುಕೊಳ್ಳಬಹುದು. ಆದರೆ, ಜಿಮ್‌ ಬಗ್ಗೆ ಆಸಕ್ತಿಯುಳ್ಳವರಿಗೆ ಅದನ್ನು ರೂಢಿಸಿಕೊಳ್ಳದಂತೆ ತಡೆಯುವುದು ಸರಿಯಲ್ಲ. ಅವಕಾಶ ಮತ್ತು ಅಗತ್ಯವಿದ್ದಲ್ಲಿ, ಯುವತಿಯರು ಮತ್ತು ಮಹಿಳೆಯರು ಜಿಮ್‌ಗೆ ಹೋಗಲು ಪ್ರೋತ್ಸಾಹಿಸಬೇಕು’ ಎಂದು ಜೈಹೋ ಫಿಟ್ನೆಸ್‌ ಜಿಮ್‌ನ ತರಬೇತುದಾರ ಹಾಗೂ ಹುಬ್ಬಳ್ಳಿ–ಧಾರವಾಡ ದೇಹದಾರ್ಢ್ಯ ಸಂಘದ ಖಜಾಂಚಿ ಕೃಷ್ಣ ಚಿಕ್ಕತುಂಬಳ ‘ಪ್ರಜಾವಾಣಿ’ಗೆ ತಿಳಿಸಿದರು.

ಅಪಪ್ರಚಾರ ನಿಲ್ಲಲಿ: ಕೆಲವರು ಇನ್ನಿತರ  ಆರೋಗ್ಯ ಸಮಸ್ಯೆಯಿಂದ ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಆಕಸ್ಮಿಕವಾಗಿ ಮೃತಪಟ್ಟಿರುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಜಿಮ್‌ನಲ್ಲಿ ವರ್ಕೌಟ್‌ ಮಾಡಿದ್ದರಿಂದಲೇ ಮೃತಪಟ್ಟಿದ್ದು ಎಂದು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಜಿಮ್‌ಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಅಪಪ್ರಚಾರಕ್ಕೆ ಕಡಿವಾಣ ಹಾಕಿ, ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ’ ಎಂದು ಅವರು ತಿಳಿಸಿದರು.

ಮಾರ್ಗದರ್ಶನ ಇರಲಿ: ‘ದಿಢೀರ್‌ ತೂಕ ಇಳಿಸಬೇಕೆಂದು ಊಟ ಬಿಡುವುದು, ಒಂದೇ ದಿನ ಹೆಚ್ಚು ವರ್ಕೌಟ್‌ ಮಾಡುವುದು, ಓಡುವುದು  ಸರಿಯಲ್ಲ. ಬೇರೆಯವರನ್ನು ನೋಡಿ ಅವರಂತೆ ಮಾಡಬಾರದು. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಯಮಿತವಾಗಿ ಜಿಮ್‌ನಲ್ಲಿ ವರ್ಕೌಟ್‌ ಮಾಡಬೇಕು. ಅದಕ್ಕೆ ತಕ್ಕಂತೆ ಪೌಷ್ಟಿಕ ಆಹಾರ ಸೇವಿಸಬೇಕು. ತರಬೇತುದಾರರ ಮಾರ್ಗದರ್ಶನದಲ್ಲೆ ವರ್ಕೌಟ್‌ ಮಾಡುವುದು ಸೂಕ್ತ’ ಎಂದು ಶಿರೂರ್‌ ಪಾರ್ಕ್‌ನ ಬಾಡಿ ಟೋನ್‌ ಫಿಟ್ನೆಸ್‌ ಜಿಮ್‌ನ ತರಬೇತುದಾರರಾದ ಪರಿಪೂರ್ಣ ಹರಪನಹಳ್ಳಿ ಹೇಳಿದರು.

‘ಜುಂಬಾ, ಏರೋಬಿಕ್ಸ್‌, ಯೋಗ, ಜಿಮ್‌ ವರ್ಕೌಟ್‌ ಎಲ್ಲವೂ ಮುಖ್ಯ.‌ ಕೆಲವರು ಜುಂಬಾ ಅಥವಾ ಏರೋಬಿಕ್ಸ್‌ಗೆ ಮಾತ್ರ ಒತ್ತು ನೀಡುತ್ತಾರೆ. ಇದರಿಂದ ತೂಕ ಇಳಿಕೆಯಾಗುತ್ತದೆ. ಆದರೆ ಮಾಂಸಖಂಡಗಳು ಗಟ್ಟಿಯಾಗು ವುದಿಲ್ಲ. ಆದ್ದರಿಂದ ಜಿಮ್‌ನಲ್ಲಿ ವರ್ಕೌಟ್‌ ಮಾಡುವುದು ಉತ್ತಮ’ ಎಂದು ಹೇಳಿದರು.

ಪೌಷ್ಟಿಕ ಆಹಾರ ಸೇವಿಸಿ: ‘ಸಸ್ಯಹಾರಿಗಳಾಗಿದ್ದರೆ ತುಪ್ಪ, ಪನ್ನೀರು, ಮೊಸರು, ಮೊಳಕೆ ಬಂದಿರುವ ಕಾಳು, ತರಕಾರಿ ಹಾಗೂ ಸಾಧ್ಯವಾದಷ್ಟು ಎಣ್ಣೆಯಲ್ಲಿ ಕರಿದಿರುವ ಪದಾರ್ಥಗಳ ಸೇವೆನೆ ಕಡಿಮೆ ಇರಬೇಕು. ಅಡುಗೆಗೆ ಕೊಬ್ಬರಿ ಎಣ್ಣೆ ಬಳಸುವುದು ಉತ್ತಮ. ಮಾಂಸಹಾರಿಗಳಾಗಿದ್ದರೆ ಮೊಟ್ಟೆಯ ಬಿಳಿಭಾಗ, ಚಿಕನ್‌, ಮಟನ್‌ ಸೇವಿಸಬೇಕು. ಆದರೆ ಎಲ್ಲವೂ ನಿಯಮಿತವಾಗಿರ ಬೇಕು’ ಎಂದು ತಿಳಿಸಿದರು.

ಒತ್ತಡದ ಮತ್ತೆ ಬಿಡುವು ಮಾಡಿಕೊಳ್ಳಿ: ಮನೆ ಮತ್ತು ಕಚೇರಿ ಕೆಲಸದ ಮಧ್ಯೆ ಸಮಯ ಸಿಗಲ್ಲ ಎನ್ನುವುದು ಹಲವರು ಹೇಳುವ ನೆಪ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಯಾವ ಸಮಯದಲ್ಲಾದರೂ ಜಿಮ್‌ನಲ್ಲಿ ವರ್ಕೌಟ್‌ ಮಾಡಬಹುದು.ಆದರೆ ಹೆಚ್ಚು ಹೊತ್ತು ಬೆಳಿಗ್ಗೆ ಮಾಡುವುದು ಉತ್ತಮ’ ಎಂದು ಪರಿಪೂರ್ಣ ತಿಳಿಸಿದರು.

ಕ್ರೀಡೆಗೆ ಸಹಕಾರಿ: ವಿದ್ಯಾರ್ಥಿಗಳು ದೇಹ ದಂಡಿಸುವುದರಿಂದ ಕ್ರೀಡೆಯಲ್ಲಿ ಭಾಗವಹಿಸಲು ಸಹಾಯವಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಉತ್ತಮ ಉದ್ಯೋಗ ಪಡೆಯಲು ಸಹಾಯವಾಗುತ್ತದೆ.

ರಕ್ಷಿಸಿಕೊಳ್ಳಲು ಸಾಧ್ಯ: ಪಾಲಕರು ತಮ್ಮ ಮಗಳು ಜಿಮ್‌ಗೆ ಹೋಗಲು ಪ್ರೋತ್ಸಾಹ ನೀಡಬೇಕು. ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿ ಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಸುರಕ್ಷಿತವಾಗಿ ಬರುವುದು ಸವಾಲಾಗಿದೆ. ಅವರಿಗೆ ಸಮಸ್ಯೆ ಉಂಟಾದಾಗ ಅವರು ಅದನ್ನು ಎದುರಿಸಲು ಧೈರ್ಯ ಬೇಕು. ಗಟ್ಟಿಯಾಗಿ ಮಾತನಾಡಬೇಕು. ಜಿಮ್‌ಗೆ ಹೋಗುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ, ಇಂತಹ ಸನ್ನಿವೇಶಗಳನ್ನು ಮೆಟ್ಟಿ ನಿಲ್ಲಬಹುದು. ಆದ್ದರಿಂದ ಮಹಿಳೆಯರಿಗೆ ಕುಟುಂಬದವರು ಸಾಥ್ ನೀಡಬೇಕು’ ಎಂದು ಅವರು ಹೇಳಿದರು.

ಅವಳಿ ನಗರದಲ್ಲಿವೆ 150 ಜಿಮ್‌

‘ಹುಬ್ಬಳ್ಳಿ–ಧಾರವಾಡದಲ್ಲಿ ಒಟ್ಟು 150 ಜಿಮ್‌ಗಳಿವೆ. ವಿದ್ಯಾನಗರ, ಗೋಕುಲ ರಸ್ತೆ, ಗಣೇಶ ಪೇಟೆ, ಮಂಟೂರ ರಸ್ತೆ, ಆನಂದ ನಗರ, ಕೇಶ್ವಾಪುರ, ನವನಗರದಲ್ಲಿ ಹೆಚ್ಚಿನ ಸಂಖ್ಯೆಯ ಹಾಗೂ ಅತ್ಯಾಧುನಿಕ ಸೌಲಭ್ಯವುಳ್ಳ ಜಿಮ್‌ಗಳಿವೆ. ಜಿಮ್‌ಗೆ ಬರುವ ಮಹಿಳೆಯರ ಸಂಖ್ಯೆ ಹೆಚ್ಚಾಗಬೇಕು’ ಎಂದು ಹುಬ್ಬಳ್ಳಿ–ಧಾರವಾಡ ದೇಹದಾರ್ಢ್ಯ ಸಂಘದ ಖಜಾಂಚಿ ಕೃಷ್ಣ ಚಿಕ್ಕತುಂಬಳ ತಿಳಿಸಿದರು.

ಮಹಿಳೆಯರಿಗೆ ವಿಶೇಷ ರಿಯಾಯಿತಿ

‘ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಹಾಗೂ ಜಿಮ್‌ಗೆ ಬರುವಂತೆ ಪ್ರೋತ್ಸಾಹಿಸಲು ಶಿರೂರ್‌ ಪಾರ್ಕ್‌ನಲ್ಲಿ ಶೀಘ್ರದಲ್ಲೆ ಹೊಸದಾಗಿ ಆರಂಭವಾಗಲಿರುವ ಜೈಹೋ ಫಿಟ್ನೆಸ್‌ ಜಿಮ್‌ನಲ್ಲಿ ಮಹಿಳೆಯರಿಗಾಗಿ ವಿಶೇಷ  ರಿಯಾಯತಿ ನೀಡಲು ಉದ್ದೇಶಿಸಿದೆ. ಒಬ್ಬರು ಶುಲ್ಕ ನೀಡಿದರೆ ಮತ್ತೊಬ್ಬರಿಗೆ ಉಚಿತ ಹಾಗೂ ನಾಲ್ಕು ಜನ ಮಹಿಳೆಯರು ಒಟ್ಟಿಗೆ ಪ್ರವೇಶ ಪಡೆದಿದ್ದಲ್ಲಿ ಮೂವರಿಗೆ ಕಡಿಮೆ ಶುಲ್ಕ ಹಾಗೂ ಒಬ್ಬರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು’ ಎಂದು ಕೃಷ್ಣ ಚಿಕ್ಕತುಂಬಳ ತಿಳಿಸಿದರು.

ಆತ್ಮವಿಶ್ವಾಸ ಹೆಚ್ಚಳ: ಪ್ರಿಯಾಂಕಾ

ದೈಹಿಕ ಚಟುವಟಿಕೆ ಮಾಡದಿರುವುದು ಹಾಗೂ ಜಂಕ್‌ ಫುಡ್‌ ಸೇವನೆಯಿಂದ ತೂಕ ಹೆಚ್ಚಳದಿಂದಾಗಿ ವಯಸ್ಕರು ಸಹ ವಯಸ್ಸಾದವರಂತೆ ಕಾಣುತ್ತಾರೆ. ಆದರೆ ಜಿಮ್‌ನಲ್ಲಿ ವೇಟ್‌ ಲಿಫ್ಟ್‌ ಮಾಡುವುದರಿಂದ ಅನಗತ್ಯ ಕೊಬ್ಬು ಕರಗಿ ದೇಹದ ಆಕಾರ ಚೆನ್ನಾಗಿ ಕಾಣುತ್ತದೆ. ಇದರಿಂದ ವಯಸ್ಸಾದರೂ ಚಿಕ್ಕವಯಸ್ಸಿನವರಂತೆ ಕಾಣಲು ಸಾಧ್ಯ. ಜೊತೆಗೆ ದಿನವಿಡೀ ಲವಲವಿಕೆಯಿಂದ ಕೆಲಸ ಮಾಡಬಹುದು ಎನ್ನುತ್ತಾರೆ ಹುಬ್ಬಳ್ಳಿಯ ರೂಪದರ್ಶಿ ಪ್ರಿಯಾಂಕಾ ಕೊಳ್ವೆಕರ್.

ಸದೃಢ ದೇಹ ಹೊಂದಿದ್ದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಾವು ಹಾಕುವ ಬಟ್ಟೆ, ಹೇರ್‌ಸ್ಟೈಲ್‌ ಸಹ ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ.  ಜೊತೆಗೆ ನಾಲ್ಕು ಜನರೊಟ್ಟಿಗೆ ಮುಕ್ತವಾಗಿ ಬೆರೆಯಬಹುದು. ವಿಭಿನ್ನ ವಿಚಾರಗಳನ್ನು ಹಂಚಿಕೊಳ್ಳಬಹುದು. ಗೃಹಿಣಿ ಸಹ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಲು ಇದು ಸಹಕಾರಿಯಾಗುತ್ತದೆ. ಆರೋಗ್ಯ ಕಾಳಜಿ ಎಲ್ಲರಲ್ಲಿಯೂ ಇರಬೇಕು ಎಂದು ಅವರು ತಿಳಿಸಿದರು.

ಉತ್ತಮ ಜೀವನಶೈಲಿಗೆ ಜಿಮ್‌ ಅಗತ್ಯ: ಡಾ.ಅರ್ಪಿತಾ

ಮನೆಯಲ್ಲಿ ಕೆಲಸ ಮಾಡುವುದಕ್ಕೂ, ಜಿಮ್‌ನಲ್ಲಿ ವರ್ಕೌಟ್‌ ಮಾಡುವುದಕ್ಕೂ ವ್ಯತ್ಯಾಸವಿದೆ. ಜಿಮ್‌ನಲ್ಲಿ ಕನಿಷ್ಠ ಅರ್ಧ ಗಂಟೆ ವರ್ಕೌಟ್‌ ಮಾಡುವುದರಿಂದ ದೇಹದ ಎಲ್ಲ ಭಾಗಗಳೂ ಚಲನಶೀಲವಾಗಿದ್ದು, ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎನ್ನುತ್ತಾರೆ ಫಿಸಿಯೊಥೆರಪಿಸ್ಟ್‌ ಡಾ.ಅರ್ಪಿತಾ ಹೆಗಡೆ.

ನಿತ್ಯ ಜಿಮ್‌ನಲ್ಲಿ ವರ್ಕೌಟ್‌ ಮಾಡುವುದರಿಂದ ಮಾಂಸಖಂಡಗಳು ಗಟ್ಟಿಯಾಗಿ, ನೋಡಲು ಫಿಟ್‌ ಆಗಿ ಕಾಣಬಹುದು. ಜೊತೆಗೆ ಬೆನ್ನು ನೋವು, ಕಾಲುನೋವು, ಮಂಡಿನೋವು ಬಾರದಂತೆ ತಡೆಯುತ್ತದೆ, ಒತ್ತಡದಿಂದ ರಿಲ್ಯಾಕ್ಸ್‌ ಆಗಲು ಹಾಗೂ ಯುವತಿಯರಿಗೆ, ಮಹಿಳೆಯರಿಗೆ ಮುಟ್ಟು ಸರಿಯಾಗುತ್ತದೆ.

ಉದ್ಯೋಗಸ್ಥ ಮಹಿಳೆಯರು ಸಮಯಕ್ಕೆ ಆದ್ಯತೆ ಕೊಡುವುದು ಬಹಳ ಮುಖ್ಯ. ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು, ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಉತ್ತಮ ನಿದ್ದೆ ಕೂಡ ಮುಖ್ಯ. ತಡವಾಗಿ ಮಲಗಿ, ತಡವಾಗಿ ಏಳುವುದರಿಂದ ಪಿಸಿಒಡಿ ಸಮಸ್ಯೆ ಉಂಟಾಗುತ್ತದೆ. ದಪ್ಪ ಇದ್ದವರಿಗೆ ಮಾತ್ರ ಅನಾರೋಗ್ಯ, ಗರ್ಭಧಾರಣೆ ಇನ್ನಿತರ ಸಮಸ್ಯೆ ಕಾಡುತ್ತವೆ ಎನ್ನುವುದು ತಪ್ಪು ಕಲ್ಪನೆ. ತೆಳ್ಳಗಿದ್ದು, ಜೀವನಶೈಲಿ ಉತ್ತಮವಾಗಿರದಿದ್ದರೂ ಹಲವು ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನಿತ್ಯ ವಾಕಿಂಗ್, ಯೋಗ, ವರ್ಕೌಟ್‌ ಮಾಡುವುದನ್ನು ರೂಢಿಸಿಕೊಳ್ಳಬೇಕು. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಉಪವಾಸ ಮಾಡುವುದು ಉತ್ತಮ ಎಂಬುವುದು ಅವರ ಸಲಹೆ.ಕೆಲವರು ಮೂರೇ ತಿಂಗಳಲ್ಲಿ ತೆಳ್ಳಗಾಗಬೇಕು ಎಂದು ಜಿಮ್‌ ಸೇರಿ, ನಂತರ ಬಿಡುತ್ತಾರೆ. ಇದರಿಂದ ಪ್ರಯೋಜನವಿಲ್ಲ. ಇದು ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ. 18 ವರ್ಷದೊಳಗಿನ ಮಕ್ಕಳು ಸೈಕಲ್‌ ತುಳಿಯುವುದು, ಓಡುವುದು, ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದು’ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣ ನೋಡುತ್ತ ಸಮಯ ವ್ಯರ್ಥ ಮಾಡುವ ಬದಲು ನಿತ್ಯ ಒಂದು ಗಂಟೆ ಜಿಮ್‌ಗೆ ಮೀಸಲಿಡುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು
ಅನುಷಾ ತುಂಗಳ,ಬಾಡಿ ಟೋನ್‌ ಫಿಟ್ನೆಸ್‌ ಜಿಮ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.