ADVERTISEMENT

ಹುಬ್ಬಳ್ಳಿ | ಪ್ರಮುಖ ವೃತ್ತಗಳಲ್ಲಿ ’ಟ್ರಾಫಿಕ್‌ ಚಾಂಪಿಯನ್ಸ್‌’

56 ಮಂದಿ ಸ್ವಯಂ ಸೇವಕರಿಂದ ಕಾರ್ಯಾರಂಭ ಇಂದು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 16:01 IST
Last Updated 23 ಮಾರ್ಚ್ 2024, 16:01 IST
ಸಂಚಾರ ಪೊಲೀಸರ ಕರ್ತವ್ಯ ಕುರಿತು ಒಂದುವಾರ ತರಬೇತಿ ಪಡೆದ ಸ್ವಯಂಸೇವಕರನ್ನು ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ಅವರು, ಶನಿವಾರ ಹುಬ್ಬಳ್ಳಿ ಹಳೇ ಸಿಎಆರ್‌ ಮೈದಾನದಲ್ಲಿ ಭೇಟಿಯಾಗಿ ಸಲಹೆ–ಸೂಚನೆ ನೀಡಿದರು –ಪ್ರಜಾವಾಣಿ ಚಿತ್ರ
ಸಂಚಾರ ಪೊಲೀಸರ ಕರ್ತವ್ಯ ಕುರಿತು ಒಂದುವಾರ ತರಬೇತಿ ಪಡೆದ ಸ್ವಯಂಸೇವಕರನ್ನು ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ಅವರು, ಶನಿವಾರ ಹುಬ್ಬಳ್ಳಿ ಹಳೇ ಸಿಎಆರ್‌ ಮೈದಾನದಲ್ಲಿ ಭೇಟಿಯಾಗಿ ಸಲಹೆ–ಸೂಚನೆ ನೀಡಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡ ಮಹಾನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ಪೊಲೀಸರಂತೆ ಕಾರ್ಯ ನಿರ್ವಹಿಸಲು ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಂಡಿದ್ದು, ಭಾನುವಾರದಿಂದಲೇ ಅವರು ‘ಟ್ರಾಫಿಕ್‌ ಚಾಂಪಿಯನ್ಸ್‌’ ಹೆಸರಲ್ಲಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಕಮಿಷನರ್‌ ರೇಣುಕಾ ಸುಕುಮಾರ್‌ ತಿಳಿಸಿದರು.

ಸಂಚಾರ ಡಿಸಿಪಿ ರವೀಶ್‌ ಆರ್‌. ನೇತೃತ್ವದಲ್ಲಿ ತರಬೇತಿ ಪಡೆದ ಸ್ವಯಂ ಸೇವಕರನ್ನು ನಗರದ ಕಾರವಾರ ರಸ್ತೆಯ ಸಿಎಆರ್‌ ಮೈದಾನದಲ್ಲಿ ಶನಿವಾರ ಭೇಟಿ ಮಾಡಿ, ಅವರ ಕವಾಯತು ಹಾಗೂ ಸಂಚಾರ ನಿಯಮಾವಳಿಗಳ ಸಂಜ್ಞೆಯನ್ನು ವೀಕ್ಷಿಸಿ ಮಾತನಾಡಿದರು.

‘ಅವಳಿನಗರದಲ್ಲಿ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವುದು ಕಡಿಮೆ. ಮೇಲಿಂದ ಮೇಲೆ ದಂಡ ಹಾಕಿದರೂ ಅದೇ ತಪ್ಪು ಮಾಡುತ್ತಲೇ ಇರುತ್ತಾರೆ. ಸಂಚಾರ ನಿಯಮದ ಬಗ್ಗೆ ಅವರನ್ನು ಜಾಗೃತಗೊಳಿಸಲು ಸಾರ್ವಜನಿಕರನ್ನೇ ಪಾಲುದಾರರನ್ನಾಗಿ ಮಾಡಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ. ಸ್ವಯಂ ಪ್ರೇರಿತರಾಗಿ ಬಂದ ವಿವಿಧ ಸಂಘ, ಸಂಸ್ಥೆಗಳ ಹಾಗೂ ಸ್ಥಳೀಯ ನಾಗರಿಕರನ್ನು ಆಯ್ಕೆ ಮಾಡಿ, ಒಂದುವಾರ ತರಬೇತಿ ನೀಡಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ಪೊಲೀಸರಂತೆ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಇಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಸಂಚಾರ ಡಿಸಿಪಿ, ಎಸಿಪಿ ನೇತೃತ್ವದಲ್ಲಿ ಮೊದಲ ಹಂತದಲ್ಲಿ 56 ಮಂದಿ ತಂಡ ರಚಿಸಲಾಗಿದೆ. ಅಪಘಾತ ನಿಯಂತ್ರಣ ಹಾಗೂ ಸಂಚಾರ ಸುರಕ್ಷತೆ ಬಗ್ಗೆ ಸವಾರರಿಗೆ ಸಂದೇಶ ಸಾರುವ ಜವಾಬ್ದಾರಿ ನೀಡಲಾಗಿದೆ. ತಮಗೆ ಅನುಕೂಲವಾದ ದಿನ ಹಾಗೂ ಸಮಯದಲ್ಲಿ ಬಂದು ಕೆಲಸ ಮಾಡಬಹುದು. ಅವರ ಕಾರ್ಯವೈಖರಿ ನೋಡಿ ಸ್ವಯಂ ಪ್ರೇರಿತರಾಗಿ ಯಾರಾದರೂ ಮುಂದೆ ಬಂದರೆ, ಎರಡನೇ ಹಂತದಲ್ಲಿ ಮತ್ತೊಂದು ತಂಡ ರಚಿಸಿ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

‘ಒಂದುವಾರ ಅವರ ಕರ್ತವ್ಯ ಗಮನಿಸಿ, ಇಲಾಖೆಯಿಂದ ಗುರುತಿನ ಚೀಟಿ ಮತ್ತು ಸಮವಸ್ತ್ರ ನೀಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.