ಅಳ್ನಾವರ (ಧಾರವಾಡ ಜಿಲ್ಲೆ): ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಅಂಬೇವಾಡಿ–ಅಳ್ನಾವರ ಪ್ರಯಾಣಿಕರ ರೈಲು ಮಾರ್ಗದ ಉದ್ಘಾಟನೆ ಮತ್ತು ಅಂಬೇವಾಡಿ–ಧಾರವಾಡ ಚೊಚ್ಚಿಲ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಭಾನುವಾರ ಅಂಬೇವಾಡಿಯಲ್ಲಿ ಚಾಲನೆ ದೊರೆಯಿತು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಇದನ್ನೂ ಓದಿ:ಮತ್ತೆ ಗೋಲ್ಡ್ ಚಾರಿಯಟ್ ರೈಲು ಸಂಚಾರ: ಸುರೇಶ ಅಂಗಡಿ
ಶತಮಾನಗಳಇತಿಹಾಸ ಹೊಂದಿರುವ ಅಂಬೇವಾಡಿ–ಅಳ್ನಾವರದ 25 ಕಿ.ಮೀ. ಮಾರ್ಗವನ್ನು ಈವರೆಗೆ ಸರಕು ಸಾಗಣೆ ರೈಲುಗಳ ಸಂಚಾರಕ್ಕೆಮಾತ್ರವೇ ಬಳಕೆ ಮಾಡಲಾಗುತ್ತಿತ್ತು. ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ಈ ಮಾರ್ಗದಲ್ಲಿಟಿಂಬರ್ ಸಾಗಿಸಲಾಗುತ್ತಿತ್ತು. ಅಂಬೇವಾಡಿ ದಾಂಡೇಲಿಗೆ ಸಮೀಪವಿರುವ ಕಾರಣ ಪ್ರವಾಸೋದ್ಯಮ ಬೆಳವಣಿಗೆಗೂ ಅನುಕೂಲವಾಗಲಿದೆ.
ಧಾರವಾಡ–ಅಂಬೇವಾಡಿ ಪ್ಯಾಸೆಂಜರ್ ರೈಲು ನ.4ರಿಂದ ಎರಡೂ ಕಡೆಯಿಂದ ಸಂಚಾರ ಆರಂಭಿಸಲಿದೆ. ಬೆಳಿಗ್ಗೆ 11.30ಕ್ಕೆ ಧಾರವಾಡದಿಂದ ಹೊರಡುವ ರೈಲು ಕ್ಯಾರಕೊಪ್ಪ, ಮುಗದ, ಕಂಬಾರಗಣವಿ, ಅಳ್ನವಾರ ಮಾರ್ಗವಾಗಿಮಧ್ಯಾಹ್ನ 1 ಗಂಟೆಗೆ ಅಂಬೇವಾಡಿ ತಲುಪಲಿದೆ.
ರೈಲು ನಿಲ್ದಾಣ ಅಭಿವೃದ್ಧಿಗೆ ಮನವಿ
ಅಳ್ನಾವರ (ಧಾರವಾಡ ಜಿಲ್ಲೆ): ಬೆಳಗಾವಿ- ಗೋವಾ ಹಾಗೂ ದಾಂಡೇಲಿ ಭಾಗದ ಪ್ರಮುಖ ಕೊಂಡಿಯಾದ ಅಳ್ನಾವರ ರೈಲು ನಿಲ್ದಾಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಕೇಂದ್ರ ಸಚಿವರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ ಜೋಶಿ ಅವರಿಗೆ ಮನವಿ ಮಾಡಿದರು.
ಧಾರವಾಡ-ಅಂಬೇವಾಡಿ ರೈಲು ಮಾರ್ಗ ಉದ್ಘಾಟನೆಗಾಗಿ ಭಾನುವಾರ ಬಂದಿದ್ದ ಇಬ್ಬರೂ ಸಚಿವರನ್ನು ಇಲ್ಲಿನ ನಿಲ್ದಾಣದಲ್ಲಿ ಭೇಟಿ ಮಾಡಿದ ಸ್ಥಳೀಯರು ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು. ಹಲವರು ರೈಲಿನಲ್ಲಿಯೇ ಸಚಿವರ ಜತೆಗೆ ಪ್ರಯಾಣಿಸಿ ಬೇಡಿಕೆಗಳ ಬಗ್ಗೆ ಚರ್ಚಿಸಿದರು.
ಅಳ್ನಾವರ ರೈಲು ನಿಲ್ದಾಣದ 2ನೇ ಪ್ಲಾಟ್‌ಫಾರಂ ಅಭಿವೃದ್ಧಿಪಡಿಸಬೇಕು, ಉದ್ಯಾನ, ರೈಲುಭವನ ನಿರ್ಮಾಣ ಹಾಗೂ ರೈಲು ಕಾಲೊನಿ ಹಾಗೂ ನಿಲ್ದಾಣದ ಮುಂಭಾಗದ ಮುಖ್ಯ ರಸ್ತೆ ಅಭಿವೃದ್ಧಿ ಮಾಡಬೇಕು ಎಂದರು. ಅಳ್ನಾವರ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ಸಮಯ ಬದಲಾವಣೆಗೂ ಕೋರಲಾಯಿತು.
ಅಳ್ನಾವರದ ಪ್ರಯಾಣಿಕರ ಜತೆಗೆ ರೈಲಿನಲ್ಲಿ ಚರ್ಚೆ ಮಾಡಿದ ಬಗ್ಗೆ ಸಚಿವ ಸುರೇಶ ಅಂಗಡಿ ಅವರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದು ಈ ಭಾಗದಲ್ಲಿ ವೈರಲ್ ಆಗಿದೆ.
ಹೆಚ್ಚಿನ ಅನುದಾನ
ದೇಶದ ಪ್ರತಿಯೊಬ್ಬರೂ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ರೈಲಿನಲ್ಲಿ ಪ್ರವಾಸ ಮಾಡಬೇಕು ಎನ್ನುವ ಬಯಕೆಯನ್ನು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಹೊಂದಿದ್ದಾರೆ. ಹೀಗಾಗಿಇಲಾಖೆಗೆ ಹೆಚ್ಚು ಅನುದಾನ ನೀಡಲಾಗಿದೆ ಎಂದು ಸಚಿವ ಸುರೇಶ ಅಂಗಡಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ರೈಲ್ವೆ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು. ಹಿಂದಿನ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಆಶಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.