ADVERTISEMENT

ಹುಬ್ಬಳ್ಳಿ: ನೆರವಿನ ನಿರೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು

ಗೋವರ್ಧನ ಎಸ್‌.ಎನ್‌.
Published 17 ಫೆಬ್ರುವರಿ 2024, 8:13 IST
Last Updated 17 ಫೆಬ್ರುವರಿ 2024, 8:13 IST

ಹುಬ್ಬಳ್ಳಿ: ಲಿಂಗತ್ವ ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲು ದೊಡ್ಡ ಪ್ರಮಾಣದ ನೆರವು ಸಿಗದ ಕಾರಣ ಅವರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

ಲಿಂಗತ್ವ ಅಲ್ಪಸಂಖ್ಯಾತರು ಸ್ವಾವಲಂಬಿಯಾಗಿ ಜೀವನ ನಡೆಸಲು ಈ ಮೊದಲು ₹25 ಸಾವಿರ ಸಹಾಯಧನ ಸೇರಿ ಒಟ್ಟು ₹50 ಸಾವಿರ ಸಾಲ ಸೌಲಭ್ಯ ಸಿಗುತಿತ್ತು. ಕೋವಿಡ್ ಕಾರಣ ಇದನ್ನು ಬದಲಿಸಿ, ಮೂರು ವರ್ಷಗಳಿಂದ ₹30 ಸಾವಿರ ಪ್ರೋತ್ಸಾಹಧನ ಮಾತ್ರ ನೀಡಲಾಗುತ್ತಿದೆ. 2023–24ನೇ ಸಾಲಿನಲ್ಲಿ ಆನ್‌ಲೈನ್‌ ಮೂಲಕ ಸಲ್ಲಿಕೆಯಾದ 32 ಪೈಕಿ 29 ಅರ್ಜಿಗಳನ್ನು ಪ್ರೋತ್ಸಾಹಧನಕ್ಕೆ ಆಯ್ಕೆ ಮಾಡಲಾಗಿದೆ.

‘ಮಹಿಳೆಯರಿಗೆ ಜಾರಿಗೆ ತಂದ ‘ಉದ್ಯೋಗಿನಿ’ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಆರ್ಥಿಕ ನೆರವು ನೀಡಲಾಗುತ್ತಿತ್ತು. 2021ರಿಂದ ಈ ಯೋಜನೆಯಿಂದ ಇವರನ್ನು ಹೊರಗಿಡಲಾಗಿದೆ. ‘ಮೈತ್ರಿ’ ಯೋಜನೆಯಡಿ ಮಾಸಿಕ ₹500 ಪಿಂಚಣಿ ನೀಡಲಾಗುತ್ತಿತ್ತು. ಸದ್ಯ ₹800ಕ್ಕೆ ಹೆಚ್ಚಿಸಲಾಗಿದೆ. ಪ್ರೋತ್ಸಾಹಧನ ಹಾಗೂ ಪಿಂಚಣಿ ಮೂಲಕ ಸರ್ಕಾರ ನೀಡುವ ಅಲ್ಪ ಮೊತ್ತದಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯ’ ಎಂಬುದು ಲಿಂಗತ್ವ ಅಲ್ಪಸಂಖ್ಯಾತರ ಅಳಲು. 

ADVERTISEMENT

‘ಜೋಗಪ್ಪ, ಹಿಜಡಾ, ಕೋಥಿ, ಡಿ.ಡಿ, ಬೈಸೆಕ್ಶುಯಲ್‌ ಸೇರಿ 2,000 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಧಾರವಾಡ ಜಿಲ್ಲೆಯಲ್ಲಿದ್ದಾರೆ. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನೀಡಿದ ನೆರವಿನೊಂದಿಗೆ ಕೆಲವರು ಹೈನುಗಾರಿಕೆ, ತರಕಾರಿ, ಹಣ್ಣ–ಕಾಯಿ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಬಹುತೇಕರು ಇನ್ನೂ ಭಿಕ್ಷಾಟನೆ ನಡೆಸುತ್ತಾರೆ. ಸ್ವಾವಲಂಬಿ ಜೀವನಕ್ಕೆ ಅಗತ್ಯವಿರುವಷ್ಟು ಆರ್ಥಿಕ ನೆರವು ಅಗತ್ಯವಿದೆ’ ಎಂದು ಸಾಮರ್ಥ್ಯ–ಆರೋಗ್ಯ ಮತ್ತು ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಪೆದ್ದಣ್ಣ ವಿ.ಕೋನಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಗುರುತಿಸಿಕೊಳ್ಳಲು ಹಿಂಜರಿಕೆ: ‘ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು, ಸಂಸ್ಥೆಗಳ ನೆರವಿನೊಂದಿಗೆ ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಸ್ವೀಕರಿಸಿ, ಪ್ರೋತ್ಸಾಹಧನ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದೆವು. ಈ ವರ್ಷದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಇದಕ್ಕಾಗಿ ಕರ್ನಾಟಕ ಒನ್, ಗ್ರಾಮ ಒನ್‌, ಸೇವಾ ಸಿಂಧು ಕೇಂದ್ರಕ್ಕೆ ತೆರಳಬೇಕಿರುವುದರಿಂದ ಹಲವರು ಹಿಂಜರಿಯುವಂತಾಗಿದೆ. ತಾವು ಲಿಂಗತ್ವ ಅಲ್ಪಸಂಖ್ಯಾತರು ಎಂದು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಈಗಲೂ ಕೆಲವರು ಮುಂದಾಗುವುದಿಲ್ಲ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.