ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಗುತ್ತಿಗೆದಾರ ಅರ್ಜುನ ಗುಡ್ಡದ ಅವರ ನಕಲಿ ವಿಡಿಯೊ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ ಮತ್ತು ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ಐವರ ವಿರುದ್ಧ ಇಲ್ಲಿನ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ವಿನಯ ಕುಲಕರ್ಣಿ ಅವರ ವಿರುದ್ಧ ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿರುವ ಸಾಮಾಜಿಕ ಕಾರ್ಯಕರ್ತೆ, ಧಾರವಾಡದ ಜಗದೀಶ ಸಣ್ಣಕ್ಕಿ, ಹನುಮಂತಪ್ಪ ಬಂಡಿವಡ್ಡರ, ಸಿದ್ದಪ್ಪ ಹೊಸಮನಿ ಮತ್ತು ಇನ್ನೊಬ್ಬ ವ್ಯಕ್ತಿ ವಿರುದ್ಧ ಅರ್ಜುನ ದೂರು ನೀಡಿದ್ದಾರೆ.
‘ಗುತ್ತಿಗೆದಾರ ಅರ್ಜುನ ಅವರು ರಾಮದುರ್ಗದ ಕಲಹಾಳ ಗ್ರಾಮದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಬಿತ್ತನೆ ಬೀಜಕ್ಕಾಗಿ ಕೆಲ ಕಂಪನಿಗಳನ್ನು ಸಂಪರ್ಕಿಸಿದ್ದರು. ಇದನ್ನು ಅರಿತ ಸಾಮಾಜಿಕ ಕಾರ್ಯಕರ್ತೆಯು ಅರ್ಜುನ ಅವರನ್ನು ಸಂಪರ್ಕಿಸಿ ಹತ್ತಿ ಬೀಜ ಕಂಪನಿಯ ರಾಯಭಾರಿ ಎಂದು ಪರಿಚಯಿಸಿಕೊಂಡಿದ್ದರು. ಆಗಾಗ ಮೊಬೈಲ್ ಫೋನ್‌ನಲ್ಲಿ ಸಂಪರ್ಕಿಸಿ, ಅವರಿದ್ದಲ್ಲಿಗೆ ಬಂದು ಆತ್ಮೀಯವಾಗಿ ವರ್ತಿಸುತ್ತಿದ್ದರು. ಜಗದೀಶ ಸಣ್ಣಕ್ಕಿ ಅವರನ್ನು ಪತಿ ಎಂದು ಪರಿಚಯಿಸಿದ್ದು ಅಲ್ಲದೇ, ಹನುಮಂತಪ್ಪ, ಸಿದ್ದಪ್ಪ ಅವರನ್ನು ಪರಿಚಯಿಸಿ ಸಲುಗೆಯಿಂದ ಇದ್ದರು. ಇದರಿಂದ ಸಂಶಯಗೊಂಡು ಅರ್ಜುನ ವಿಚಾರಿಸಿದಾಗ, ಆಕೆಗೆ ಜಗದೀಶ ಮೂರನೇ ಪತಿ ಎಂದು ಗೊತ್ತಾಗಿದೆ. ಹಣ ನೀಡದಿದ್ದರೆ ನಕಲಿ ಫೋಟೊ, ವಿಡಿಯೊ ಮಾಡುವುದಾಗಿ ಬೆದರಿಸಿ, ₹20 ಲಕ್ಷ ವಸೂಲಿ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಮತ್ತಷ್ಟು ಹಣದ ಬೇಡಿಕೆ ಹಾಗೂ ಸುಳ್ಳು ಪ್ರಕರಣ ದಾಖಲಿಸುವ ಸಾಧ್ಯತೆಯಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.