ADVERTISEMENT

ನೈರುತ್ಯ ರೈಲ್ವೆ ವಲಯಕ್ಕೆ ₹6,900 ಕೋಟಿ ಅನುದಾನ: ಸಂಜೀವ ಕಿಶೋರ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 12:43 IST
Last Updated 3 ಫೆಬ್ರುವರಿ 2022, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ನೈರುತ್ಯ ರೈಲ್ವೆ ವಲಯಕ್ಕೆ ₹6,900 ಕೋಟಿ ಅನುದಾನ ದೊರತಿದೆ. ಹುಬ್ಬಳ್ಳಿ–ಬೆಂಗಳೂರು ನಡುವಿನ ಜೋಡಿ ಮಾರ್ಗದ ಕಾರ್ಯ ಡಿಸೆಂಬರ್ 2022ರ ಅಂತ್ಯಕ್ಕೆ ಪೂರ್ಣವಾಗಲಿದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ₹4,900 ಕೋಟಿ ಅನುದಾನ ನೀಡಲಾಗಿತ್ತು. ಈ ವರ್ಷ ಶೇ 40 ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ರಾಜ್ಯದ ರೈಲ್ವೆ ಅಭಿವೃದ್ಧಿ ಕಾರ್ಯಗಳಿಗೆ ₹6 ಸಾವಿರ ಕೋಟಿ ಲಭಿಸಲಿದ್ದು, ಇದರಲ್ಲಿ ರಾಜ್ಯದ ಪಾಲು ₹783 ಕೋಟಿ ಸೇರಿದೆ ಎಂದರು.

ಹೊಸ ಮಾರ್ಗಕ್ಕಾಗಿ ₹323 ಕೋಟಿ, ಜೋಡಿ ಮಾರ್ಗ ನಿರ್ಮಾಣಕ್ಕೆ ₹1,455 ಕೋಟಿ, ವಿದ್ಯುದ್ದೀದಿಕರಣಕ್ಕಾಗಿ ₹6,11 ಕೋಟಿ ಮೀಸಲಾಗಿಡಲಾಗಿದೆ. ಬೆಂಗಳೂರು ಸಬ್‌ ಅರ್ಬನ್‌ ಯೋಜನೆಗೆ ₹450 ಕೋಟಿ, ರೈಲು ಮಾರ್ಗ ಸುರಕ್ಷತೆಗೆ ₹625 ಕೋಟಿ, ಮೇಲ್ಸೇತುವೆ, ಸುರಂಗ ಮಾರ್ಗ ನಿರ್ಮಾಣಕ್ಕೆ ₹1,276 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಧಾರವಾಡ–ಕಿತ್ತೂರು ರೈಲ್ವೆ ಮಾರ್ಗಕ್ಕೆ ₹20 ಕೋಟಿ, ಗದಗ–ವಾಡಿ ಮಾರ್ಗಕ್ಕೆ ₹187 ಕೋಟಿ, ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರ, ತುಮಕೂರು– ದಾವಣಗೆರೆ, ಬಾಗಲಕೋಟೆ–ಕುಡಚಿ ಮಾರ್ಗಕ್ಕೆ ತಲಾ ₹50 ಕೋಟಿ, ರಾಯದುರ್ಗ–ತುಮಕೂರು ಮಾರ್ಗಕ್ಕೆ ₹100 ಕೋಟಿ ಮಂಜೂರು ಮಾಡಲಾಗಿದೆ ಎಂದರು.

ಗದಗ–ಕೂಡಗಿ–ಹೂಟಗಿ ಜೋಡಿ ಮಾರ್ಗ ನಿರ್ಮಾಣಕ್ಕೆ ₹200 ಕೋಟಿ, ಹುಬ್ಬಳ್ಳಿ–ಚಿಕ್ಕಜಾಜೂರು ಜೋಡಿ ಮಾರ್ಗ ನಿರ್ಮಾಣಕ್ಕೆ ₹210 ಕೋಟಿ ಮಂಜೂರಾಗಿದೆ. ಯಶವಂತಪುರ–ಚನ್ನಸಂದ್ರ ಮಾರ್ಗಕ್ಕೆ ₹115, ಯಲಹಂಕ–ಪೆನುಕೊಂಡಕ್ಕೆ ₹54 ಕೋಟಿ, ಪೆನುಕೊಂಡ–ಧರ್ಮಾವರಂ ಗೆ ₹60, ಬೈಯಪ್ಪನಹಳ್ಳಿ–ಹೊಸೂರಗೆ ₹140 ಕೋಟಿ, ಅರಸೀಕೆರೆ–ತುಮಕೂರುಗೆ ₹51.8 ಕೋಟಿ ನೀಡಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ–ಬೆಂಗಳೂರಿನ ನಡುವಿನ ನಿಟ್ಟೂರು–ಬಾಣಸಂದ್ರದ 20 ಕಿ.ಮೀ. ಹಾಗೂ ಹಾವೇರಿ–ಸಂಶಿ ನಡುವಿನ 50 ಕಿ.ಮೀ. ಜೋಡಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 50 ಕಿ.ಮೀ. ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳಿಸಿದರೆ, ಹುಬ್ಬಳ್ಳಿ–ಬೆಂಗಳೂರು ಮಾರ್ಗದ ಜೋಡಿ ಮಾರ್ಗ ಪೂರ್ಣವಾಗಲಿದೆ. ಹುಬ್ಬಳ್ಳಿ–ತಾಳಗು‍ಪ್ಪ ಮಾರ್ಗದ ಸರ್ವೆ ಕಾರ್ಯ ನಡೆದಿದ್ದು, ಮೂರು ತಿಂಗಳಲ್ಲಿ ರೈಲ್ವೆ ಬೋರ್ಡ್‌ಗೆ ವರದಿ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.