ADVERTISEMENT

‘ಭಾರತ ವಿಶ್ವದ 3ನೇ ದೊಡ್ಡ ಆರ್ಥಿಕ ರಾಷ್ಟ್ರ ಸಂಕಲ್ಪ’

‘ಸಂಕಲ್ಪ ಪತ್ರ– ಅಭಿಪ್ರಾಯ ಸಂಗ್ರಹಣಾ ಅಭಿಯಾನ’ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 14:53 IST
Last Updated 10 ಮಾರ್ಚ್ 2024, 14:53 IST
ಹುಬ್ಬಳ್ಳಿಯ ಗೋಕುಲ ರಸ್ತೆಯ ರಾಧಾಕೃಷ್ಣ ನಗರದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು. ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ, ಪಾಲಿಕೆ ಮೇಯರ್‌ ವೀಣಾ ಭರದ್ವಾಡ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು
ಹುಬ್ಬಳ್ಳಿಯ ಗೋಕುಲ ರಸ್ತೆಯ ರಾಧಾಕೃಷ್ಣ ನಗರದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು. ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ, ಪಾಲಿಕೆ ಮೇಯರ್‌ ವೀಣಾ ಭರದ್ವಾಡ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು   

ಹುಬ್ಬಳ್ಳಿ: ’ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಯೋಜನೆ ರೂಪಿಸಿಕೊಳ್ಳಲಾಗಿದ್ದು, ಇದಕ್ಕೆ ಪೂರಕವಾಗಿ ಜನರಿಂದ ಸಲಹೆ, ಸೂಚನೆ ಪಡೆಯುವ ಉದ್ದೇಶದಿಂದ ’ಸಂಕಲ್ಪ ಪತ್ರ– ಅಭಿಪ್ರಾಯ ಸಂಗ್ರಹಣಾ ಅಭಿಯಾನ’ ಹಮ್ಮಿಕೊಳ್ಳಲಾಗಿದೆ‘ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. 

ನಗರದ ಗೋಕುಲ ರಸ್ತೆಯ ರಾಧಾಕೃಷ್ಣ ನಗರದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಎಲ್‌ಇಡಿ ವಿಡಿಯೋ ಸೌಲಭ್ಯ ಹೊಂದಿದ ಹಾಗೂ ಅಭಿಪ್ರಾಯ ಸಂಗ್ರಹದ 32 ಪ್ರಚಾರ ವಾಹನಗಳಿಗೆ ಚಾಲನೆ ನೀಡಿ, ಮಾತನಾಡಿದರು. 

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜನರ ಕಲ್ಯಾಣ ಹಾಗೂ ದೇಶದ ಅಭಿವೃದ್ಧಿಗಾಗಿ ಅನುಷ್ಠಾನಕ್ಕೆ ತಂದ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು. ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ವಿಶ್ವದಲ್ಲಿಯೇ ಭಾರತವನ್ನು 3ನೇ ಅತಿ ದೊಡ್ಡ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದು, ಇದಕ್ಕೆ ಜನರಿಂದ ಸಲಹೆ ಪಡೆಯಲಾಗುತ್ತಿದೆ. ಜನರು ಮನೆಯ ಬಾಗಿಲಿಗೆ ಬರುವ ಪ್ರಚಾರ ವಾಹನಗಳಲ್ಲಿನ ‘ವಿಕಸಿತ ಭಾರತ ಮೋದಿ ಗ್ಯಾರಂಟಿ‘ ಎಂಬ ಪತ್ರವನ್ನು ಪಡೆದು ಅದರಲ್ಲಿ ನಿಮ್ಮ ಸಲಹೆ ಬರೆದು ವಾಹನದಲ್ಲಿ ಇರುವ ಪೆಟ್ಟಿಗೆಯಲ್ಲಿ ಹಾಕಬೇಕು‘ ಎಂದು ಮನವಿ ಮಾಡಿದರು. 

ADVERTISEMENT

‘ವಿಶ್ವದಲ್ಲಿಯೇ ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು ಸಹ ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದಲ್ಲಿ ಭಾಗವಹಿಸುವ ಪ್ರಚಾರ ವಾಹನಗಳು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತವೆ. ವಾಹನಗಳ ಪೆಟ್ಟಿಗೆಗಳಲ್ಲಿ ಸಂಗ್ರಹವಾಗುವ ಜನರ ಸಲಹೆ ಪತ್ರಗಳನ್ನು ಜಿಲ್ಲಾಮಟ್ಟದಲ್ಲಿ ವಿಂಗಡಿಸಿ, ರಾಜ್ಯಮಟ್ಟಕ್ಕೆ ಕಳುಹಿಸಿ, ಅಲ್ಲಿಂದ ಪ್ರಧಾನಿ ಅವರ ಕಚೇರಿಗೆ ಕಳುಹಿಸಲಾಗುತ್ತದೆ‘ ಎಂದರು. 

’ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ನಂತರ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜೊತೆಗೆ ಜನರ ಕಲ್ಯಾಣಕ್ಕೂ ಸಾಕಷ್ಟು ಯೋಜನೆಗಳನ್ನೂ ಅನುಷ್ಠಾನ ಮಾಡಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಲಾಗುತ್ತಿದೆ. ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ, ಸಲಹೆ ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು‘ ಎಂದು ಮನವಿ ಮಾಡಿದರು. 

ಅನಗತ್ಯ ಚರ್ಚೆ ಬೇಡ: ’ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ. ಇದರಲ್ಲಿ ಯಾರೂ ಅನಗತ್ಯ ಚರ್ಚೆ, ಟೀಕೆ ಮಾಡಬಾರದು. ಶೀರ್ಘದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಮಾಡಲಾಗುತ್ತದೆ‘ ಎಂದರು. 

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮೇಯರ್‌ ವೀಣಾ ಬರದ್ವಾಡ ಹಾಗೂ ಬಿಜೆಪಿ ಮುಖಂಡರು ಇದ್ದರು. 

- ಉತ್ತರ ಪ್ರದೇಶದ ವಾಹನಗಳ ಬಳಕೆ

’ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಎಲ್‌ಇಡಿ ವಿಡಿಯೋ ಸೌಲಭ್ಯ ಹೊಂದಿದ 32 ವಾಹನಗಳು ಉತ್ತರಪ್ರದೇಶ ರಾಜ್ಯದ ನೋಂದಣಿ ಹೊಂದಿದ್ದವು. ಇವುಗಳ ಚಾಲಕರು ಸಹ ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.