ADVERTISEMENT

ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 14:32 IST
Last Updated 2 ಜೂನ್ 2024, 14:32 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಚುನಾವಣೋತ್ತರ ಸಮೀಕ್ಷೆಯಲ್ಲಿ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ. ಆದರೆ, 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಾವು ಗೆಲ್ಲಲಿದ್ದೇವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎನ್‌ಡಿಎ ಪ್ರಚಂಡ ಬಹುಮತದಿಂದ ಗೆಲ್ಲಲಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತ ಬಂದಿದ್ದೆವು. ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಸಹ ಅದನ್ನೇ ಹೇಳುತ್ತಿವೆ. ಎನ್‌ಡಿಎಗೆ ಬಹುಮತವೇ ಬರುವುದಿಲ್ಲ ಎಂದು ಅನೇಕರು ಸಂಶಯ ವ್ಯಕ್ತಪಡಿಸಿದ್ದರು. ಫಲಿತಾಂಶದ ದಿನ ಮತ್ತಷ್ಟು ಹೆಚ್ಚು ಸ್ಥಾನಗಳು ನಮಗೆ ಸಿಗಲಿದೆ’ ಎಂದರು.

‘ಈ ಬಾರಿ ಎನ್‌ಡಿಗೆ ಬಹುಮತ ಬರುವುದಿಲ್ಲ ಎಂದು ಕಾಂಗ್ರೆಸ್‌ ಟೀಕಿಸಿತ್ತು. ಈಗ ಜನರೇ ಅವರನ್ನು ತಿರಸ್ಕರಿಸಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್‌, ಮುಖ್ಯ ನ್ಯಾಯಾಮೂರ್ತಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಕಾಂಗ್ರೆಸ್‌ಗೆ ವಿಶ್ವಾಸವಿರಲಿಲ್ಲ. ಹಾಗಾಗಿ ಜನರು ಅವರ ಮೇಲೆ ವಿಶ್ವಾಸ ಇಟ್ಟಿಲ್ಲ’ ಎಂದು ಹೇಳಿದರು.

ADVERTISEMENT

ಸಿಎಂ ಎಚ್ಚೆತ್ತುಕೊಳ್ಳಲಿ: ‘ಹುಬ್ಬಳ್ಳಿಯ ಶಾಲೆಯೊಂದರೆ ಮುಖ್ಯ ಶಿಕ್ಷಕಿಗೆ ಜೀವ ಬೆದರಿಕೆ ಪತ್ರ ಬಂದಿದ್ದು, ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಈ ಸರ್ಕಾರದಲ್ಲಿ ಪೊಲೀಸರ ಭ್ರಷ್ಟಾಚಾರ ಜಾಸ್ತಿಯಾಗಿದೆ. ಅಪರಾಧ ಕೃತ್ಯ ಎಸಗುವವರಿಗೆ ಪೊಲೀಸರ ಭಯವೇ ಇಲ್ಲವಾಗಿದೆ. ಇದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಜನರ ಭಾವನೆಯಂತೆ ಸಮೀಕ್ಷೆ: 

‘ಸುದ್ದಿ ಸಂಸ್ಥೆಗಳು ಜನರ ಮನಸ್ಸಿನ ಭಾವನೆ ಹೇಳುವ ಮೂಲಕ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿವೆ’ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಹೇಳಿದರು.

‘ಎನ್‌ಡಿಎ ಮೈತ್ರಿಕೂಟ 350ಕ್ಕೂ ಅಧಿಕ ಸ್ಥಾನ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ನಾವು ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಇದನ್ನೇ ನಾವು ಹಿಂದೆಯೂ ಹೇಳಿದ್ದೇವು’ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕಳೆದ ಬಾರಿ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಬಂದಿತ್ತು. ಅದರಂತೆಯೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದಿತು. ಲೋಕಸಭೆ ಚುನಾವಣೋತ್ತರ ಸಮೀಕ್ಷೆಯಂತೆಯೇ ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬರಲಿದೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನ ಬದಲಾವಣೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಇದು ಸುಳ್ಳು. ಸಂವಿಧಾನ ಬದಲಾವಣೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಾಧ್ಯವೂ ಇಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.