ADVERTISEMENT

ಹರ್ಲಾಪುರ | ದುರಸ್ತಿಯಾಗದ ಕುಡಿಯುವ ನೀರಿನ ಘಟಕ: ಶುದ್ಧ ನೀರಿಗೆ ನಿತ್ಯ ಜನರ ಪರದಾಟ

ವಾಸುದೇವ ಮುರಗಿ
Published 20 ನವೆಂಬರ್ 2023, 4:37 IST
Last Updated 20 ನವೆಂಬರ್ 2023, 4:37 IST
ಕುಂದಗೋಳ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಹಾಳಾಗಿರುವುದು
ಕುಂದಗೋಳ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಹಾಳಾಗಿರುವುದು   

ಗುಡಗೇರಿ (ಹರ್ಲಾಪೂರ): ಕುಂದಗೋಳ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ 5 ವರ್ಷಗಳ ಹಿಂದೆ ಇಲ್ಲಿನ ಎಸ್‌ಸಿ ಕಾಲೊನಿಯಲ್ಲಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದ್ದು, ಇಂದಿಗೂ ದುರಸ್ತಿಯಾಗಿಲ್ಲ.

ಆರಂಭದ ಕೆಲ ದಿನಗಳ ಮಾತ್ರ ನೀರು ನೀಡಿದ ಘಟಕವು ನಂತರ ಹಾಳಾಯಿತು. ಇದರಿಂದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಇಲ್ಲಿನ ಜನರು ಕೊಳವೆ ಬಾವಿಯ ಫೋರೈಡ್‌ಯುಕ್ತ ನೀರನ್ನು ಕುಡಿಯುತ್ತಿದ್ದಾರೆ. 

ಈ ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳು ಇದ್ದು,  ಇನ್ನೊಂದು ಗ್ರಾಮ ಪಂಚಾಯ್ತಿಯ ತುಸು ದೂರದಲ್ಲಿ ಇದೆ.  ಇದು ಕಾರ್ಯನಿರ್ವಹಿಸುತ್ತಿದೆ. ಆದರೆ ನಲ್ಲಿಯಲ್ಲಿ ಸದಾ ಕಾಲ ಸಣ್ಣನೆ ನೀರು ಪೋಲಾಗುತ್ತಿದ್ದರೂ ಸಹ ಸ್ಥಳೀಯ ಆಡಳಿತ ದುರಸ್ತಿಗೆ ಕ್ರಮಕೈಗೊಳ್ಳುತ್ತಿಲ್ಲ.

ADVERTISEMENT

ನೀರು ವ್ಯರ್ಥವಾಗದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರ ಸೂಚನೆ ನೀಡುತ್ತಿದ್ದರೂ ಇಲ್ಲಿನ ಸ್ಥಳೀಯ ಆಡಳಿತವು ಘಟಕದಿಂದ ನೀರು ವ್ಯರ್ಥವಾಗಿ ಹರಿಯದಂತೆ ತಡೆಯುತ್ತಿಲ್ಲ. 

ಇಲ್ಲಿನ ಎಸ್‌ಸಿ ಕಾಲೊನಿಯಲ್ಲಿ ಸಾವಿರಾರು ಜನರು ಬಡವರಿದ್ದು, ಶುದ್ದ ನೀರು ಬೇಕಾದರೆ ಗ್ರಾಮ ಪಂಚಾಯ್ತಿಯ ಘಟಕದ ಕಡೆಗೆ ಹೋಗಬೇಕು. ಇಲ್ಲವಾದರೆ ಸಮೀಪದಲ್ಲಿರುವ ಸುಲ್ತಾನಪುರ ಗ್ರಾಮದ ಕಡೆಗೆ ಹೋಗಿ ನೀರು ತರುತ್ತಿದ್ದಾರೆ.

ಕೆಲವರು ವಾಹನಗಳಲ್ಲಿ ನೀರು ತಂದರೆ, ಇನ್ನೂ ಕೆಲವರು ಕಿಮೀ., ದೂರದಿಂದ ನೀರು ಹೊತ್ತು ತರುತ್ತಿದ್ದಾರೆ. 

‌ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಲಕ್ಷ್ಮಣ ದೊಡಮನಿ ಅವರು, ‘ಇಲ್ಲಿನ ನೀರಿನ ಘಟಕ ಹಾಳಾಗಿದ್ದರೂ ಅಧಿಕಾರಿಗಳು ದುರಸ್ತಿ ಮಾಡುತ್ತಿಲ್ಲ. ಜನರಿಗೆ ತೊಂದರೆಯಾಗಿದೆ. ಪಕ್ಕದ ಸುಲ್ತಾನಪುರ ಗ್ರಾಮಕ್ಕೆ ತೆರೆಳಿ ನಾವು ಶುದ್ದ ನೀರು ತರುವಂತಾಗಿದೆ‘ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸುರೇಶ ಚಟ್ಲಿ ಅವರು, ’ಐದು ವರ್ಷದ ಹಿಂದೆ ಈ ಘಟಕವನ್ನು ನಿರ್ಮಿಸಲಾಗಿದೆ. ಆದರೆ, ಇದುವರೆಗೂ ನಾವು ಹಸ್ತಾಂತರ ಮಾಡಿಕೊಂಡಿಲ್ಲ’ ಎನ್ನುತ್ತಾರೆ.

ಈ ಕುರಿತು ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ಎಸ್.ಮಠಪತಿ ಅವರನ್ನು ಕೇಳಿದರೆ, ‘ನಾನು ಬಂದು ಒಂದು ತಿಂಗಳಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಹೇಳಿದರು. 

ಗ್ರಾಮೀಣ ಜನರಿಗೆ ಶುದ್ದ ನೀರು ನೀಡಲು ಸರ್ಕಾರ ನೀರಿನಂತೆ ಹಣ ಖರ್ಚು ಮಾಡಿದರು ಸಹ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಗ್ರಾಮ ಪಂಚಾಯ್ತಿ ಹತ್ತಿರ ಇರುವ ಶುದ್ದ ನೀರಿನ ಘಟಕದಲ್ಲಿ ಸದಾ ನೀರು ಪೋಲಾಗುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.