ಹುಬ್ಬಳ್ಳಿ: ಸಂಜೆಯಾದರೆ ಸಾಕು ಬಹುತೇಕರು ಸ್ನ್ಯಾಕ್ಸ್, ಚಾಟ್ಸ್ ಅಂಗಡಿಗಳತ್ತ ಹೆಜ್ಜೆ ಹಾಕುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಬೀದಿ ಬದಿಯ ಅಂಗಡಿ, ಹೋಟೆಲ್‌ಗಳಲ್ಲಿ ಸಿಗುವ ಆಹಾರ ಸವಿಯುವುದರಲ್ಲೇ ಖುಷಿ. ಆದರೆ, ಅದು ಗುಣಮಟ್ಟದಿಂದ ಕೂಡಿದೆ ಮತ್ತು ಸುರಕ್ಷಿತವಾಗಿದೆಯೇ ಎಂಬುದನ್ನು ಯೋಚಿಸುವವರು ಕಡಿಮೆ.
ಸುರಕ್ಷಿತ ಆಹಾರಕ್ಕೆ ಆದ್ಯತೆ ನೀಡಲು ರಾಜ್ಯ ಸರ್ಕಾರವು ಇತ್ತೀಚೆಗೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣ ಬಳಸಿದ್ದಲ್ಲಿ ಅದನ್ನು ನಿಷೇಧಿಸಲು ಆರೋಗ್ಯ ಇಲಾಖೆ ನಿರ್ದೇಶನವೂ ನೀಡಿದೆ.
‘ನಾವು ಆಗಾಗ ಸಂಜೆ ಹೊತ್ತಲ್ಲಿ ಆಚೆ ಬಂದಾಗ ಪಾನೀಪುರಿ, ನ್ಯೂಡಲ್ಸ್ ತಿನ್ನುತ್ತೇವೆ. ಶುದ್ಧತೆ ಮತ್ತು ಶುಚಿತ್ವಕ್ಕೆ ಆದ್ಯತೆ ಕೊಟ್ಟು ಆಹಾರ ಸಿದ್ಧಪಡಿಸುವ ಕಡೆಯೇ ಆಹಾರ ಸೇವಿಸುತ್ತೇವೆ’ ಎಂದು ನಗರದ ನಿವಾಸಿ ಮೀನಾ ಹಿರೇಮಠ ತಿಳಿಸಿದರು.
‘ಅತ್ಯುತ್ತಮ ಗುಣಮಟ್ಟದ ಆಹಾರ ಪಡೆಯಲು ತುಸು ಹೆಚ್ಚೇ ಬೆಲೆ ತೆರಬೇಕು. ದಿನಗೂಲಿ ಮಾಡುವ ₹ 50ರ ಮೌಲ್ಯದ ಒಳಗಿನ ಊಟ ಮಾಡಬೇಕು. ಹೀಗಾಗಿ ಕಡಿಮೆ ದರದಲ್ಲಿ ಹೋಟೆಲ್ ಅಥವಾ ಬೀದಿಬದಿಯ ಉಪಾಹಾರ ಸ್ಥಳದಲ್ಲಿ ಊಟ ಸವಿಯುತ್ತೇವೆ’ ಎಂದು ಕೂಲಿಕಾರ್ಮಿಕ ಯಮನಪ್ಪ ಹೇಳಿದರು.
‘ದಿನವೀಡಿ ದುಡಿದರೂ ಹಾಕಿದ ಬಂಡವಾಳ ಸಿಗುವುದೇ ಹೆಚ್ಚು, ಲಾಭದ ಮಾತಂತೂ ದೂರ. ದಿನಸಿ, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಗ್ರಾಹಕರೂ ಕಡಿಮೆ ದರದಲ್ಲಿಯೇ ಗುಣಮಟ್ಟದ ಆಹಾರ ಬಯಸುತ್ತಾರೆ. ಹೀಗಿರುವಾಗ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ನೀಡುವುದು ಸವಾಲಿನ ಕೆಲಸ. ಸರ್ಕಾರ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ, ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸುವಲ್ಲಿ ಮುಂದಾಗಬೇಕು’ ಎಂದು ಹೋಟೆಲೊಂದರ ಮಾಲೀಕರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.