ಹುಬ್ಬಳ್ಳಿ: ‘ಈ ಹಿಂದೆ ಸರ್ಕಾರ ಮಾಡಿದ್ದು ಆರ್ಥಿಕ– ಸಾಮಾಜಿಕ ಸಮೀಕ್ಷೆಯೇ ಹೊರತು ಜಾತಿ ಗಣತಿ ಅಲ್ಲ. ಎಲ್ಲ ಜಾತಿಯ ಜನರ ನಿಖರ ಸಂಖ್ಯೆ ತಿಳಿಯಲು ವೈಜ್ಞಾನಿಕ ಗಣತಿ ಅಗತ್ಯವಿದೆ. ಸರ್ಕಾರ ಹೊಸದಾಗಿ ಜಾತಿ ಗಣತಿ ಮಾಡಲಿ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ನಾವು ಜಾತಿ ಗಣತಿ ವಿರೋಧಿಸಲ್ಲ. ಸಂವಿಧಾನ ಬದ್ಧ ವೈಜ್ಞಾನಿಕ ರೀತಿ ಗಣಪತಿ ಪ್ರಕ್ರಿಯೆ ನಡೆಯಬೇಕು ಎಂಬುದಷ್ಟೇ ನಮ್ಮ ಆಶಯ. ಪ್ರತಿಯೊಂದು ಮನೆಗೂ ತೆರಳಿ ನಿಖರ ಮಾಹಿತಿ ಸಂಗ್ರಹಿಸಿ ಜಾತಿ ಗಣತಿ ಮಾಡಬೇಕು. ಈ ಹಿಂದೆ ಎಷ್ಟೋ ಮನೆಗಳಿಗೆ ಭೇಟಿ ನೀಡದೇ, ಯಾವುದೋ ಕಚೇರಿಯಲ್ಲಿ ಕೂತು ಗಣತಿ ಮಾಡಲಾಗಿತ್ತು’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಗಣತಿಯ ಅಂಕಿ ಅಂಶಗಳು ಬಹಿರಂಗ ಆಗಿರದಿದ್ದರೂ ಕೆಲ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರು ಆಕ್ಷೇಪಿಸಿದ್ದಾರೆ. ತಮ್ಮ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ ಎಂಬ ಅಸಮಾಧಾನ ಅವರಲ್ಲಿದೆ’ ಎಂದರು.
ಈಶ್ವರಪ್ಪ ಸಭೆ:
‘ಬಾಗಲಕೋಟೆಯಲ್ಲಿ ನಡೆಯುವ ರಾಯಣ್ಣ– ಚನ್ನಮ್ಮ ಬ್ರಿಗೇಡ್ (ಆರ್‌ಸಿಬಿ) ಸಭೆಯಲ್ಲಿ ಭಾಗವಹಿಸಲು ಕೆ.ಎಸ್. ಈಶ್ವರಪ್ಪ ನನಗೆ ಆಹ್ವಾನಿಸಿದ್ದಾರೆ. ಆದರೆ, ನಾನು ಪಂಚಮಸಾಲಿ ಲಿಂಗಾಯತ ಸಮುದಾಯದ 2ಎ ಮೀಸಲಾತಿಗಾಗಿ ರಾಜ್ಯ ಪ್ರವಾಸದಲ್ಲಿ ಇದ್ದೇನೆ. ಸಭೆಯಲ್ಲಿ ಭಾಗವಹಿಸುವ ಬಗ್ಗೆ ತೀರ್ಮಾನಿಸಿಲ್ಲ’ ಎಂದರು.
‘ಆರ್‌ಸಿಬಿಯು ಯಾವುದೇ ಜಾತಿ– ಜನಾಂಗಕ್ಕೆ ಸೇರಿದ ಸಂಘಟನೆ ಅಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ರಾಷ್ಟ್ರಭಕ್ತಿ ಬೆಳೆಸುವ ಸಂಘಟನೆ. ಸಂಘಟನೆಗೆ ಸೂಕ್ತ ಹೆಸರನ್ನು ನಾನೇ ತಿಳಿಸಿದ್ದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.