ADVERTISEMENT

ಕನ್ನಡ ಉಳಿದದ್ದೇ ಉತ್ತರ ಕರ್ನಾಟಕ ಭಾಗದಿಂದ: ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ: 69 ಮಂದಿ ಸಾಧಕರಿಗೆ ’ಧೀಮಂತ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 14:44 IST
Last Updated 12 ನವೆಂಬರ್ 2024, 14:44 IST
<div class="paragraphs"><p>ಹುಬ್ಬಳ್ಳಿಯಲ್ಲಿ  ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಇಂದಿರಾ ಗಾಜಿನ ಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಧೀಮಂತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಬಸವರಾಜ ಹೊರಟ್ಟಿ ಸನ್ಮಾನಿಸಿದರು</p></div>

ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಇಂದಿರಾ ಗಾಜಿನ ಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಧೀಮಂತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಬಸವರಾಜ ಹೊರಟ್ಟಿ ಸನ್ಮಾನಿಸಿದರು

   

ಹುಬ್ಬಳ್ಳಿ: ‘ಕರ್ನಾಟಕದಲ್ಲಿ ಕನ್ನಡ ಉಳಿದಿದೆ ಎಂದರೆ, ಅದು ಉತ್ತರ ಕರ್ನಾಟಕ ಭಾಗದ ಜನರಿಂದ ಮಾತ್ರ’ ಎಂದು‌ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ನಗರದ ಇಂದಿರಾ ಗಾಜಿನಮನೆ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಸಾಂಸ್ಕೃತಿಕ ಮತ್ತು ಧೀಮಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಬೆಂಗಳೂರಿನಲ್ಲಿ ತಮಿಳು, ತೆಲುಗು ಭಾಷೆಯೇ ಹೆಚ್ಚಾಗಿದ್ದು, ಅಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಉತ್ತರ ಕರ್ನಾಟಕ ಭಾಗದ ಜನರು ಮಾತ್ರ ಕನ್ನಡ ಮಾತನಾಡುತ್ತ ಉಳಿಸಿ ಬೆಳೆಸುವಲ್ಲಿ ನಿರತರಾಗಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಉಳಿದದ್ದೇ ಈ ಭಾಗದ ಜನರಿಂದ. ಇವರು ಮೂಲ‌ ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳುತ್ತೇನೆ‌’ ಎಂದರು.

‘ನವೆಂಬರ್ ಬಂದಾಗ ಮಾತ್ರ ಕನ್ನಡ ಅಭಿಮಾನ ಬೇಡ, ಅದು ವರ್ಷಪೂರ್ತಿ ಇರಬೇಕು. ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿರುವುದು ನೋವಿನ‌ ಸಂಗತಿ. ಕನ್ನಡ ಉಳಿಸಬೇಕಾದರೆ ಇಡೀ ವರ್ಷ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ನಿಟ್ಟಿನಲ್ಲಿ ಪಾಲಿಕೆ ತಿಂಗಳಿಗೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ರೂಪಿಸಲಿ’ ಎಂದು ಹೊರಟ್ಟಿ ಸಲಹೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಪ್ರಶಸ್ತಿಗೆ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 69 ಮಂದಿಯನ್ನು ಧೀಮಂತ ಪ್ರಶಸ್ತಿಗೆ, 24 ಮಂದಿಯನ್ನು ಬಾಲಪುರಸ್ಕಾರ ಮತ್ತು ವಿಶೇಷ ಸಾಧನೆ ಪ್ರಶಸ್ತಿಗೆ ಪಾಲಿಕೆ ಆಯ್ಕೆ ಮಾಡಿದೆ. ಅರ್ಜಿ ಸಲ್ಲಿಸಿದವರೆಲ್ಲ ಉತ್ತಮ ಸಾಧನೆ ಮಾಡಿದವರೆ. ಆದರೆ, ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಪ್ರಶಸ್ತಿ ನೀಡಬೇಕಿರುವುದರಿಂದ ಅವರಲ್ಲಿಯೇ ಅತ್ಯುತ್ತಮ ಎನ್ನುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರೆಲ್ಲ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಬೇಕು’ ಎಂದರು.

‘ರಾಜ್ಯದ ಎಲ್ಲ ಸ್ಥಾನಿಕ ಸಂಸ್ಥೆಗಳಿಗಿಂತ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕನ್ನಡದ ತೇರು ಎಳೆಯುವ ಉತ್ಸವವನ್ನು ಸಮರ್ಥವಾಗಿ ಆಚರಿಸುತ್ತ ಬಂದಿದೆ. 1983ರ ಹಿಂದಿನ ಒಂಬತ್ತು ವರ್ಷ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇರಲಿಲ್ಲ. ಆಗ ಅಧಿಕಾರಿಗಳು ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ನಿರ್ವಹಿಸಿದ್ದರು’ ಎಂದು ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಸ್ಮರಿಸಿದರು.

ಮೇಯರ್ ರಾಮಪ್ಪ ಬಡಿಗೇರ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 69 ಸಾಧಕರಿಗೆ ಧೀಮಂತ ಪ್ರಶಸ್ತಿ ಹಾಗೂ ಆರು ಮಂದಿಗೆ ಬಾಲಪುರಸ್ಕಾರ, 18 ಮಂದಿಗೆ ವಿಶೇಷ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾಗ್ಯಶ್ರೀ ಕಲಾತಂಡ ‘ಹೊತ್ತಿತೋ ಹೊತ್ತಿತೋ ಕನ್ನಡದ ದೀಪ’, ನೇತ್ರಾವತಿ ಕಲಾತಂಡ ‘ಕನ್ನಡ ತಾಯಿಯ ಪಾದಕೆ ಶರಣು’ ನೃತ್ಯ ಪ್ರದರ್ಶಿಸಿದವು.

ಉಪಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಹಿರೇಮಠ, ವೀರಣ್ಣ ಸವಡಿ, ರಾಜಶೇಖರ ಕಮತಿ, ತಿಪ್ಪಣ್ಣ ಮಜ್ಜಗಿ, ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಇದ್ದರು.

94 ಕೋಟಿ ವೆಚ್ಚದಲ್ಲಿ ಎಲ್‌ಇಡಿ ಅಳವಡಿಕೆ

‘ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಗಡಿಗಳ ಬೋರ್ಡ್‌ನಲ್ಲಿ ಶೇ 60ರಷ್ಟು ಕನ್ನಡ ಭಾಷೆ ಇರಬೇಕೆನ್ನುವ ಆದೇಶವನ್ನು ಜಾರಿಗೆ ತರಲಾಗುತ್ತಿದೆ. ಕನ್ನಡ ಬೆಳೆಸಲು, ಪ್ರೋತ್ಸಾಹಿಸಲು ವಿವಿಧ ಸಂಘಟನೆಗಳ ಜೊತೆ ಪಾಲಿಕೆ ಕೆಲಸ ಮಾಡುತ್ತಿದೆ. ಮನೆ–ಮನೆ ಕಸ ಸಂಗ್ರಹ ಕಾರ್ಯ ಅಚ್ಚುಕಟ್ಟಾಗಿ ಎಲ್ಲ ವಾರ್ಡ್‌ಗಳಲ್ಲಿ ನಡೆಯುತ್ತಿದೆ. ಅವಳಿನಗರದಲ್ಲಿ ಎಲ್‌ಇಡಿ ಅಳವಡಿಕೆಗೆ ಸರ್ಕಾರ ₹94 ಕೋಟಿ ಅನುದಾನ ನೀಡಿದ್ದು, ಶೀಘ್ರ ಟೆಂಡರ್ ಕರೆದು ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ₹400 ಕೋಟಿಯಷ್ಟು ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.