ADVERTISEMENT

ವಾಲ್ಮೀಕಿ ನಿಗಮದ ಹಗರಣ; ಸಿ.ಎಂ ರಾಜೀನಾಮೆಗೆ ಜೋಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:50 IST
Last Updated 29 ಜೂನ್ 2024, 15:50 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೂರಾರು ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿದ್ದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ಅವರು ವರ್ತಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅವರು ಅರ್ಹರಲ್ಲ’ ಎಂದರು.

‘ಮುಖ್ಯಮಂತ್ರಿ ಬದಲಾವಣೆ, ಉಪಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚಳ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಕಾಂಗ್ರೆಸ್‌ನಲ್ಲಿ ಒಳಜಗಳ ನಡೆದಿದೆ. ಎಲ್ಲ ಸಚಿವರು, ಶಾಸಕರು ಒಳಜಗಳದಲ್ಲಿ ನಿರತರಾಗಿರುವುದರಿಂದ ರಾಜ್ಯಸರ್ಕಾರ ನಿಷ್ಕ್ರಿಯವಾಗಿದೆ’ ಎಂದು ಅವರು ಟೀಕಿಸಿದರು.

ADVERTISEMENT

‘ಧಾರವಾಡ ತಾಲ್ಲೂಕಿನ ಬೇಲೂರಿನಲ್ಲಿ ಭಾರತ ಮೀಸಲು ಪಡೆ (ಐಆರ್‌ಬಿ) ಘಟಕ ಸ್ಥಾಪಿಸಲು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾಗ ನೀಡಿದ್ದರು. ಆದರೆ, ಅದನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಂಬೈ ಕರ್ನಾಟಕದಲ್ಲಿ ಮತದಾರರು ಕಾಂಗ್ರೆಸ್‌ನ್ನು ಸೋಲಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲ ಸಿದ್ದರಾಮಯ್ಯ ಈ ರೀತಿ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರಾಸಕ್ತಿಯಿಂದ ಏಥರ್ ಕಂಪನಿ ರಾಜ್ಯವನ್ನು ತೊರೆದಿದೆ. ಈ ಹಿಂದೆ ಹೀರೊ ಮೋಟರ್ಸ್‌ ಕಂಪನಿ ಸಹ ರಾಜ್ಯವನ್ನು ತೊರೆದಿತ್ತು. ರಾಜ್ಯ ಸರ್ಕಾರ ಕಂಪನಿಯೊಂದಿಗೆ ಮಾತುಕತೆ ನಡೆಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ‘ ಏಕೀಕೃತ ಕರ್ನಾಟಕದ ವಿರುದ್ಧ ಮಾತನಾಡುವುದನ್ನು ನಮ್ಮ ಪಕ್ಷ ಸಹಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.