ADVERTISEMENT

ಮೌಲ್ಯ ಹೆಚ್ಚಿಸುವ ಶಿಕ್ಷಣ ಅಗತ್ಯ- ಜಾನಪದ ವಿವಿ ಕುಲಪತಿ ಡಾ. ಡಿ.ಬಿ. ನಾಯಕ

‘ನೆಲದ ನುಡಿಯ ಕಂಪು’ ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 15:36 IST
Last Updated 2 ಜನವರಿ 2022, 15:36 IST
ಸಾಹಿತಿ ಈರಣ್ಣ ಬಡಿಗೇರ ಅವರ ‘ನೆಲದ ನುಡಿಯ ಕಂಪು’ ಪುಸ್ತಕವನ್ನು ಭಾನುವಾರ ಹುಬ್ಬಳ್ಳಿಯಲ್ಲಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಬಿ. ನಾಯಕ ಬಿಡುಗಡೆ ಮಾಡಿದರು
ಸಾಹಿತಿ ಈರಣ್ಣ ಬಡಿಗೇರ ಅವರ ‘ನೆಲದ ನುಡಿಯ ಕಂಪು’ ಪುಸ್ತಕವನ್ನು ಭಾನುವಾರ ಹುಬ್ಬಳ್ಳಿಯಲ್ಲಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಬಿ. ನಾಯಕ ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ಈಗಿನ ಶಿಕ್ಷಣದ ಪಠ್ಯಕ್ರಮದಲ್ಲಿ ಸಮಾಜ, ದೇಶಸೇವೆ ಕುರಿತು ಜಾಗೃತಿ ಮೂಡಿಸುವ ಅಂಶಗಳು ಕಡಿಮೆಯಾಗುತ್ತಿದ್ದು, ನ್ಯಾಯ, ನೀತಿ, ಪ್ರೀತಿಯ ಮೌಲ್ಯಗಳು ಹೆಚ್ಚಿಸುವ ಶಿಕ್ಷಣ ಅಗತ್ಯವಾಗಿದೆ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಬಿ. ನಾಯಕ ಅಭಿಪ್ರಾಯಪಟ್ಟರು.

ಇಲ್ಲಿನ ಮಹಾರಾಷ್ಟ್ರ ಮಂಡಳದಲ್ಲಿ ಭಾನುವಾರ ನಡೆದ ಈರಣ್ಣ ಬಡಿಗೇರ ಅವರ ‘ನೆಲದ ನುಡಿಯ ಕಂಪು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ‘ಕನ್ನಡ ಪ್ರಾಚೀನ ಭಾಷೆಯಾಗಿದ್ದು, ಕನ್ನಡಿಗರೇ ಅದನ್ನು ಕಡೆಗಣಿಸುತ್ತಿದ್ದಾರೆ. ನೆಲದ ಭಾಷೆಗೆ ಪ್ರಾಮುಖ್ಯತೆ ನೀಡುವ ಬದಲು, ಆಂಗ್ಲಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಪರಿಣಾಮ ಕನ್ನಡ ಭಾಷೆ ಕ್ಷೀಣಿಸುತ್ತಿದೆ. ಜಗತ್ತಿನಲ್ಲಿರುವ ಸಾವಿರಾರು ಭಾಷೆಗಳು ಈಗಾಗಲೇ ಅಳಿವಿನಂಚಿನಲ್ಲಿದೆ. ಅದರಲ್ಲಿ ನಮ್ಮ ಕನ್ನಡ ಭಾಷೆಯೂ ಒಂದು. ತಾಯ್ನೆಲದ ಭಾಷೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು’ ಎಂದರು.

ಪುಸ್ತಕ ಪರಿಚಯ ಮಾಡಿದ ಡಾ. ಲತೀಫ್ ಕುನ್ನಿಭಾವಿ ‘ಪುಸ್ತಕದಲ್ಲಿ ಕಸ್ತೂರಿ ಕನ್ನಡದ ಕಂಪು ಅಡಗಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ಸಂಭಾಷಣೆಯೊಂದಿಗೆ ಆರಂಭವಾಗುವ ಹೊತ್ತಿಗೆ ಕೊನೆವರೆಗೂ ಕನ್ನಡದ ಕಾಳಜಿ ತಿಳಿಸಿಕೊಡುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನ, ಅಲ್ಲಿನ ಸಂಭ್ರಮ, ಗೋಷ್ಠಿ, ಭಾಷಣ, ಊಟ, ಸಂಸ್ಕೃತಿ, ಶಾಲೆ, ಶಿಕ್ಷಕ, ಶಾಲಾ ಸಮಿತಿ ಹೀಗೆ ಪ್ರತಿಯೊಂದರ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸುತ್ತದೆ’ ಎಂದರು.

ADVERTISEMENT

‘ಸಾಹಿತ್ಯಗೋಷ್ಠಿಗೆ ರಾಜಕೀಯ ನಾಯಕರನ್ನು ಆಹ್ವಾನಿಸಲಾಗುತ್ತದೆ. ಆದರೆ ಕನ್ನಡ ನಾಡು, ನುಡಿಗಾಗಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಹೆಚ್ಚಾಗಿ ಆಹ್ವಾನಿಸುವುದಿಲ್ಲ. ಕನ್ನಡಕ್ಕಾಗಿ ದುಡಿದವರಿಗೆ ವೇದಿಕೆ ನೀಡಬೇಕು ಎನ್ನುವುದು ಲೇಖಕರ ಆಶಯವಾಗಿದೆ. ಆಂಗ್ಲ‌ ಮಾಧ್ಯಮ ಶಾಲೆ, ಅದಕ್ಕೆ ಮಾರುಹೋಗುವ ಪಾಲಕರು, ಅವರ ಆರ್ಥಿಕ ಸ್ಥಿತಿಗತಿ, ಕನ್ನಡದ ಅಗತ್ಯದ ಬಗ್ಗೆ ಪುಸ್ತಕ ತಿಳಿಸುತ್ತದೆ’ ಎಂದು ಹೇಳಿದರು.

ಹತ್ತಿಮತ್ತೂರಿನ ನಿಜಗುಣ ಶಿವಯೋಗಿ ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಉತ್ತರದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಸಾಹಿತಿ ಈರಣ್ಣ ಬಡಿಗೇರ, ಗಾಯತ್ರಿ ಹುದ್ದಾರ, ಡಾ. ಕುಸುಮಾ ಜವಳಿ, ಗುರುನಾಥ ರಾಯಭಾಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.