ಹುಬ್ಬಳ್ಳಿ: ಸೂರಿಲ್ಲದೇ ಪರದಾಡುತ್ತಿದ್ದ ಕಡು ಬಡವರಿಗೆ ವ್ಯವಸ್ಥಿತ ಮನೆ, ಇದ್ದರೂ ತೀರಾ ದುಸ್ಥಿತಿಯಲ್ಲಿದ್ದವರಿಗೆ ಮನೆ ದುರಸ್ತಿ ಸೌಲಭ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ನೀಡುತ್ತಿದೆ. ಕಳೆದ ವರ್ಷ ಧಾರವಾಡ ಜಿಲ್ಲೆಯಲ್ಲಿ ‘ವಾತ್ಸಲ್ಯ’ ಯೋಜನೆಯ ಅಡಿ 6 ಮನೆ ನಿರ್ಮಾಣ ಹಾಗೂ 4 ಮನೆ ದುರಸ್ತಿ ಕಾರ್ಯ ಮಾಡಿಸಲಾಗಿದೆ.
ಧಾರವಾಡ ತಾಲ್ಲೂಕಿನ ಮುಗದ ಗ್ರಾಮದ ಜೈನಾಬಿ ಘಾಟವಾಲೆ ಮತ್ತು ಶಾಬಿರಾ ಘಾಟವಾಲೆ ಅವರಿಗೆ ಕಳೆದ ವರ್ಷ ಮನೆ ನಿರ್ಮಿಸಿ ಕೊಡಲಾಗಿದೆ. ಮನೆಯಿಲ್ಲದ ಈ ಅಕ್ಕತಂಗಿಯರನ್ನು ನೋಡಿಕೊಳ್ಳಲು, ಮಾತನಾಡಿಸುವವರೂ ಯಾರೂ ಇರಲಿಲ್ಲ. ‘ಇರಲು ಒಂದು ಸೂರು ಸಿಕ್ಕ ನಂತರ ಈಗ ಬಂಧುಗಳು ಮಾತನಾಡಿಸುತ್ತಾರೆ. ನೆಮ್ಮದಿಯಿಂದ ಇದ್ದೇವೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಸಹೋದರಿಯರು.
‘ಹುಬ್ಬಳ್ಳಿ ನಗರದ ಚನ್ನಪೇಟೆಯ ಪಾರ್ವತವ್ವ ಹಳ್ಳದಮನೆ ಅವರ ಮನೆ ಸೋರುತ್ತಿತ್ತು. ನೆನೆದುಕೊಂಡೇ ಮಲಗುವ ಸ್ಥಿತಿ ಇತ್ತು. ಅವರನ್ನು ನೋಡಿಕೊಳ್ಳುವವರೂ ಯಾರೂ ಇಲ್ಲದ ಕಾರಣ ಅವರ ಮನೆ ದುರಸ್ತಿ ಮಾಡಿಸಿ ಕೊಡಲಾಗಿದೆ. ಮಾಸಾಶನವನ್ನೂ ನೀಡಲಾಗುತ್ತಿದೆ’ ಎಂದು ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಣುಕಾ ತಿಳಿಸಿದರು.
‘ಬ್ಯಾಹಟ್ಟಿಯ ಮಲ್ಲಮ್ಮ ವೆಂಕಟಾಪುರ ಅವರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಗೋಪನಕೊಪ್ಪದ ಈರಮ್ಮ ನಾಗಮ್ಮನವರ ಅವರಿಗೆ ಮನೆ ದುರಸ್ತಿ ಮಾಡಿಸಿ ಕೊಡಲಾಗಿದೆ’ ಎಂದು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಂಜುಳಾ ನಾರಾಯಣಪುರ ತಿಳಿಸಿದರು.
2021ರಲ್ಲಿ ಜಾರಿಗೆ ಬಂದ ‘ವಾತ್ಸಲ್ಯ’ ಯೋಜನೆ ಜಾರಿಗೆ ಬಂದಿದೆ. ಆರ್ಥಿಕವಾಗಿ ತೀರಾ ಕಷ್ಟದಲ್ಲಿರುವವರಿಗೆ, ನೋಡಿಕೊಳ್ಳಲು ಯಾರೂ ಇರದೇ ಇರುವವರಿಗೆ ಮನೆ ಇಲ್ಲದ ವಿಷಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಮನಕ್ಕೆ ಬಂದಾಗ ಸ್ಥಳೀಯ ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಅವರ ವಾಸ್ತವ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ವರದಿ ಸಿದ್ಧಪಡಿಸುತ್ತಾರೆ. ವರದಿ ನೋಡಿ ಹೊಸ ಮನೆ ನಿರ್ಮಾಣವೋ ಅಥವಾ ಮನೆ ದುರಸ್ತಿಯೋ ಎಂಬ ಬಗ್ಗೆ ತೀರ್ಮಾನಿಸಲಾಗುತ್ತದೆ.
‘ಮನೆ ನಿರ್ಮಾಣವನ್ನು ಸ್ವತಃ ಸಂಸ್ಥೆಯಿಂದಲೇ ಮಾಡಿಸಿಕೊಡಲಾಗುತ್ತದೆ. ಇದಕ್ಕಾಗಿ ಸೇವಾ ಮನೋಭಾವ ಇರುವ, ಕಡಿಮೆ ಶುಲ್ಕದಲ್ಲಿ ಕಟ್ಟಡ ನಿರ್ಮಿಸುವ ಗೌಂಡಿಗಳನ್ನು ಆಯ್ಕೆ ಮಾಡುತ್ತೇವೆ. ಚಾವಣಿಗೆ ತಗಡಿನ ಶೀಟ್, ಒಳಗೆ ಶೌಚಾಲಯ, ಸ್ನಾನಗೃಹ ಅಡುಗೆ ಮನೆಗೆ ಕಡಪಾ ಕಲ್ಲುಗಳು, ಕುಳಿತುಕೊಳ್ಳಲು ಬೆಂಚ್‌ಗಳನ್ನು ಹಾಕಿ 15X10 ಅಡಿ ವಿಸ್ತೀರ್ಣದ ಮನೆ ನಿರ್ಮಿಸಿ ಕೊಡಲಾಗುತ್ತದೆ. ಈ ಯೋಜನೆಗಾಗಿ ಮನೆಯ ವಿನ್ಯಾಸ ಮೊದಲೇ ಸಿದ್ಧಪಡಿಸಲಾಗಿರುತ್ತದೆ’ ಎಂದು ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮೀ ರಾಯನಾಳ ತಿಳಿಸಿದರು.
‘ಮನೆ ನಿರ್ಮಾಣಕ್ಕಾದರೆ ಗರಿಷ್ಠ ₹ 1 ಲಕ್ಷ 40 ಸಾವಿರ, ದುರಸ್ತಿಗಾದರೆ ₹ 50 ಸಾವಿರ ನಿಗದಿಪಡಿಸಲಾಗಿದೆ. ಈ ವರ್ಷ ಪ್ರತಿ ತಾಲ್ಲೂಕಿಗೆ ಎರಡರಂತೆ ಮನೆ ನಿರ್ಮಾಣಕ್ಕೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.
ಪತಿ ಹಾಗೂ ಹತ್ತಿರದ ಬಂಧುಗಳು ಯಾರೂ ಇಲ್ಲದ ಒಂಟಿ ಮಹಿಳೆಗೆ, ಮಕ್ಕಳು ಇಲ್ಲದ ವೃದ್ಧರಿಗೆ, ನಿರ್ಗತಿಕರಿಗೆ, ಅಶಕ್ತರಿಗೆ ‘ವಾತ್ಸಲ್ಯ’ ಯೋಜನೆಯ ಅಡಿ ಇನ್ನೂ ಹಲವು ಸಹಾಯ ಒದಗಿಸಲಾಗುತ್ತಿದೆ. ಫಲಾನುಭವಿಯ ಅಗತ್ಯಗಳನ್ನು ಗಮನಿಸಿ ಮಾಸಾಶನ, ನಿತ್ಯ ಬಳಕೆಯ ಬಟ್ಟೆಗಳಿರುವ ಕಿಟ್, ಪಾತ್ರೆಗಳ ಕಿಟ್ ಅಥವಾ ಇವೆಲ್ಲವೂ ಇರುವ ವಾತ್ಸಲ್ಯ ಕಿಟ್ ನೀಡಲಾಗುತ್ತದೆ. ಅಡುಗೆ ಮಾಡಿ ಊಟ ಮಾಡಲೂ ಆಗದವರಿಗೆ ‘ವಾತ್ಸಲ್ಯ ಮಿಕ್ಸ್’ ಎಂಬ ಪುಡಿಯನ್ನು ಪ್ರತಿ ತಿಂಗಳೂ ನೀಡಲಾಗುತ್ತಿದೆ.
ಯಾರೂ ಇಲ್ಲದವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಇದೆ ಎಂಬ ಉದ್ದೇಶವೇ ವಾತ್ಸಲ್ಯ ಯೋಜನೆಯದ್ದು. ಹೇಮಾವತಿ ಹೆಗ್ಗಡೆ ಅವರ ಪರಿಕಲ್ಪನೆಯ ಯೋಜನೆಯಿದು
- ಪ್ರದೀಪ ಶೆಟ್ಟಿ ಜಿಲ್ಲಾ ನಿರ್ದೇಶಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.