ADVERTISEMENT

ಧಾರವಾಡ | ವೀರಮಾರುತಿ ನಗರ: ಶೌಚಕ್ಕೆ ಬಯಲೇ ಗತಿ

ಹಲವು ವರ್ಷಗಳಿಂದ ಸಾರ್ವಜನಿಕ ಶೌಚಾಲಯ ಬಂದ್: ವೃದ್ಧರು, ಗರ್ಭಿಣಿಯರು ಪರದಾಟ

ಶಿವರಾಯ ಪೂಜಾರಿ
Published 2 ಅಕ್ಟೋಬರ್ 2024, 4:32 IST
Last Updated 2 ಅಕ್ಟೋಬರ್ 2024, 4:32 IST
ಹುಬ್ಬಳ್ಳಿಯ ಹೊಸೂರಿನ ವೀರಮಾರುತಿ ನಗರದ ಸಾರ್ವಜನಿಕ ಶೌಚಾಲಯ ದುರಸ್ತಿ ಕಾಣದೆ ಹಾಳಾಗಿದ್ದು, ಸುತ್ತಲೂ ಕಸ ಬೆಳೆದಿರುವುದು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಹೊಸೂರಿನ ವೀರಮಾರುತಿ ನಗರದ ಸಾರ್ವಜನಿಕ ಶೌಚಾಲಯ ದುರಸ್ತಿ ಕಾಣದೆ ಹಾಳಾಗಿದ್ದು, ಸುತ್ತಲೂ ಕಸ ಬೆಳೆದಿರುವುದು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ‘ಮನೆಯೊಳಗ ಪಾಯಿಖಾನಿ ಕಟ್ಟಿಕೊಳ್ಳಾಕ ಜಾಗ ಇಲ್ಲ, ಮನಿ ಸಮೀಪದಾಗ ಇದ್ದ ಪಬ್ಲಿಕ್ ಪಾಯಿಖಾನಿ ಬಂದ್ ಆಗಿ 9 ವರ್ಷ ಆತು. ಹೊತ್ತ ಮುಳಗಿದ ಮ್ಯಾಲ, ಬೆಳಕ ಹರಿಯುವ ಮೊದಲ ಚರಂಡಿ ಪಕ್ಕ, ಗಿಡಗಂಟಿ ಮರೀಯಾಗ ಶೌಚಕ್ಕ ಹೋಗು ಪರಿಸ್ಥಿತಿ ಐತಿ. 67 ವರ್ಷದಾಕಿ ಅದೀನ್ರಿ. ಸರಿಯಾಗಿ ನಡದ್ಯಾಡಾಕ ಬರ್ತಿಲ್ಲ. ಶೌಚಾಲಯ ಇಲ್ಲದ ಭಾರೀ ಸಮಸ್ಯೆ ಆಗೈತಿ. ಈ ತ್ರಾಸ ಯಾರ ಹತ್ರ ಹೇಳೂನ್ರಿ...

ಹೊಸೂರಿನ ವೀರಮಾರುತಿ ನಗರದ ವೃದ್ಧೆಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಇದು ಇವರೊಬ್ಬರದ್ದೇ ನೋವಲ್ಲ. ಹಲವು ವರ್ಷಗಳು ಕಳೆದರೂ ಕನಿಷ್ಠ ಸೌಕರ್ಯಗಳೂ ಇಲ್ಲದೆ ಇಲ್ಲಿನ ಪ್ರತಿಯೊಬ್ಬ ನಿವಾಸಿಯೂ ಗೋಳಿಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಕುರಿತು ಭರವಸೆ ನೀಡಿ ಮಾಯವಾಗುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿ ಅಭಿವೃದ್ಧಿಯತ್ತ ಸಾಗಿದರೂ ಹೊಸೂರಿನ ವೀರಮಾರುತಿ ನಗರ, ಗಿರಣಿಚಾಳ ಅಭಿವೃದ್ಧಿಯಿಂದ ವಂಚಿತವಾಗಿವೆ. ತೆರೆದ ಚರಂಡಿ, ಅನೈರ್ಮಲ್ಯ ವಾತಾವರಣದ ಮಧ್ಯೆಯೇ ಇಲ್ಲಿನ ಜನತೆ ಬದುಕು ಸಾಗಿಸುವಂತಾಗಿದೆ.

ADVERTISEMENT

‘ಕೊಳಗೇರಿ ಪ್ರದೇಶವಾಗಿದ್ದರಿಂದ ಮನೆಗಳ ಎದುರು ಶೌಚಾಲಯ ಕಟ್ಟಿಕೊಳ್ಳಲು ಜಾಗವಿಲ್ಲ. ಇದ್ದ ಸಾರ್ವಜನಿಕ ಶೌಚಾಲಯವೂ ಬಳಕೆಗೆ ಯೋಗ್ಯವಾಗಿಲ್ಲ. ಅಲ್ಲಿ ಮುಳ್ಳುಕಂಟಿ, ಕಸದ ಗಿಡಗಳು ಬೆಳೆದಿದ್ದು, ಹಂದಿ, ನಾಯಿಗಳ ವಾಸಸ್ಥಾನವಾಗಿ ಪರಿಣಮಿಸಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ರಾಜಕಾಲುವೆ ಪಕ್ಕ ಹಾಗೂ ಬಯಲು ಪ್ರದೇಶಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಬೇರೆ ಬೇರೆ ಜಾಗ ಗುರುತಿಸಿಕೊಂಡು ಶೌಚಕ್ಕೆ ಬಳಸಲಾಗುತ್ತಿದೆ’ ಎಂದು ಬೇಸರದಿಂದ ಹೇಳುತ್ತಾರೆ ಇಲ್ಲಿನ ನಿವಾಸಿಗಳು.

ಚರಂಡಿ ಸಮಸ್ಯೆ: ‘ಚರಂಡಿ ನೀರು ಸರಾಗವಾಗಿ ಹರಿಯಲು ಸರಿಯಾದ ವ್ಯವಸ್ಥೆ ಇಲ್ಲ. ಮಳೆ ಸಂದರ್ಭದಲ್ಲಿ ಚರಂಡಿ, ಮ್ಯಾನ್‌ಹೋಲ್‌ಗಳು ಉಕ್ಕಿ ರಸ್ತೆಯ ಮೇಲೆಲ್ಲಾ ತ್ಯಾಜ್ಯದ ನೀರು ಹರಿಯುತ್ತದೆ. ಈ ಬಗ್ಗೆ ಸರಿಪಡಿಸುವಂತೆ ಹಲವು ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿಯೇ ದಿನ ಕಳೆಯುತ್ತಿದ್ದೇವೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಚಂದ್ರಶೇಖರ ಅಣ್ಣಿಗೇರಿ.

ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ: ‘ಸುತ್ತಮುತ್ತಲಿನ ಬಡಾವಣೆಗಳ ಜನರು ದಿನಬಳಕೆಯ ತ್ಯಾಜ್ಯವನ್ನೆಲ್ಲಾ ಇಲ್ಲಿನ ಕೊಳಗೇರಿ ಪ್ರದೇಶದಲ್ಲಿ ಸುರಿಯುತ್ತಿದ್ದು, ತಿಂಗಳುಗಟ್ಟಲೇ ಈ ಕಸ ವಿಲೇವಾರಿ ಆಗುವುದೇ ಇಲ್ಲ. ದುರ್ನಾತದ ಮಧ್ಯೆಯೇ ಬದುಕು ಸಾಗುವಂತಾಗಿದೆ. ಇಲ್ಲಿ ನಾಯಿಗಳ ಹಿಂಡು ಬೀಡುಬಿಟ್ಟು ಮಕ್ಕಳಿಗೆ, ದಾರಿಹೋಕರಿಗೆ ಕಚ್ಚಿದ ಉದಾಹರಣೆಗಳೂ ಇವೆ’ ಎನ್ನುತ್ತಾರೆ ಸ್ಥಳೀಯರಾದ ಸಚಿನ ಶಿಂಧೆ.

ಎಲ್ಲೆಂದರಲ್ಲಿ ತಗ್ಗು, ಗುಂಡಿ: ಹೊಸೂರು ಬಸ್ ನಿಲ್ದಾಣ ಹಿಂಭಾಗದಿಂದ ವಾಣಿವಿಲಾಸ ವೃತ್ತದವರೆಗಿನ ರಸ್ತೆಯವರೆಗೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದ್ದರೂ ಬಹುತೇಕ ಕಡೆ ದೊಡ್ಡದಾದ ತಗ್ಗು, ಗುಂಡಿಗಳು ಬಿದ್ದಿವೆ. ಮಳೆಯಾದಾಗ ಗುಂಡಿಗಳಲ್ಲಿ ನೀರು ನಿಂತು ಅನೇಕ ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ. ಸದ್ಯ ರಸ್ತೆ ಮಧ್ಯದಲ್ಲಿರುವ ಮ್ಯಾನ್‌ಹೋಲ್ ಕಿತ್ತುಹೋಗಿದ್ದು, ಅದರ ಸುತ್ತಲೂ ಕಲ್ಲು, ಕಟ್ಟಿಗೆಗಳನ್ನು ಇಡಲಾಗಿದೆ. ಅನಾಹುತ ಸಂಭವಿಸುವ ಮುನ್ನ ಮ್ಯಾನ್‌ಹೋಲ್  ಹಾಗೂ ರಸ್ತೆ ದುರಸ್ತಿ ಮಾಡಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ರಸ್ತೆ ವಿಸ್ತರಣೆಗಾಗಿ ಈಗ ವಾಸಿಸುವ ಮನೆಗಳನ್ನು ಖಾಲಿ ಮಾಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನಮಗೆ ಬೇರೆ ಕಡೆಗೆ ಮೊದಲು ಮನೆ ಕೊಡಲಿ ಆಮೇಲೆ ಇಲ್ಲಿಂದ ಸ್ಥಳಾಂತರ ಮಾಡಲಿ
ಶಾಂತಾ ಬೋಜಗಾರ ಸ್ಥಳೀಯ ನಿವಾಸಿ
ಹೊಸೂರು ಸುತ್ತಮುತ್ತಲಿನ ನಗರಗಳು ಮೂಲಸೌಲಭ್ಯದಿಂದ ವಂಚಿತವಾಗಿವೆ. ಚರಂಡಿಗಳನ್ನು ಮುಚ್ಚದೆ ಹಾಗೇ ಬಿಟ್ಟಿದ್ದು ದುರ್ನಾತದಿಂದ ಬೇಸತ್ತಿದ್ದೇವೆ. ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ
ಸಚಿನ ಸಿಂಧೆ ಸ್ಥಳೀಯ ನಿವಾಸಿ
ಕೆಲ ಸ್ಥಳೀಯರ ವಿರೋಧದಿಂದ ಸಾರ್ವಜನಿಕ ಶೌಚಾಲಯ ದುರಸ್ತಿಗೆ ಗುತ್ತಿಗೆದಾರರು ಮುಂದಾಗುತ್ತಿಲ್ಲ. ಆದಷ್ಟು ಬೇಗ ಎಲ್ಲವೂ ಸರಿಪಡಿಸಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಾಗುವುದು
ಮಂಗಳಮ್ಮ ಮೋಹನ್ ಹಿರೇಮನಿ ಕಾರ್ಪೋರೇಟರ್

ಹಂಚಿಕೆಯಾಗದ ಮನೆಗಳು

ಹೊಸೂರು ವೃತ್ತದ ಬಳಿಯ ವಾಣಿವಿಲಾಸ ರಸ್ತೆಯ ವಿಸ್ತರಣೆಗಾಗಿ ಮನೆ ಬಿಟ್ಟುಕೊಟ್ಟವರಿಗೆ ನೀಡಲು ಸಮೀಪದಲ್ಲಿಯೇ ಕೈಗಾರಿಕಾ ಇಲಾಖೆಗೆ ಸೇರಿದ್ದ 22 ಗುಂಟೆ ಜಾಗದಲ್ಲಿ ಜಿ+4 ಮಾದರಿಯಲ್ಲಿ ಸುಮಾರು ₹11.50 ಕೋಟಿ ವೆಚ್ಚದಲ್ಲಿ 80 ಮನೆಗಳನ್ನು ನಿರ್ಮಿಸಲಾಗಿದೆ. ಬೆಡ್‌ರೂಮ್‌ ಹಾಲ್‌ ಕಿಚನ್‌ ಒಳಗೊಂಡ ಮನೆಗಳಿವೆ. ಇವುಗಳನ್ನು ನಿರ್ಮಿಸಿ ಮೂರ್ನಾಲ್ಕು ವರ್ಷವಾದರೂ ಹಂಚಿಕೆ ಮಾಡದೆ ಹಾಗೇ ಬಿಟ್ಟಿದ್ದರಿಂದ ಆ ಜಾಗ ಪುಂಡರ ತಾಣವಾಗಿ ಪರಿಣಮಿಸಿದೆ. ಕಟ್ಟಡದ ಸುತ್ತಲೂ ಕಸದ ಗಿಡಗಳು ಬೆಳೆದಿವೆ. ಕೆಲವು ಮನೆಗಳ ಕಿಟಕಿ ಗಾಜುಗಳನ್ನು ದುಷ್ಕರ್ಮಿಗಳು ಒಡೆದುಹಾಕಿದ್ದಾರೆ. ಛಾವಣಿಗೆ ಹಾಕಿರುವ ಶೀಟು ಕಿತ್ತುಹೋಗಿದೆ. ಆದಷ್ಟು ಬೇಗ ಫಲಾನುಭವಿಗಳಿಗೆ ಈ ಮನೆಗಳನ್ನು ಹಂಚಿಕೆ ಮಾಡಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ. ‘ವೀರಮಾರುತಿ ನಗರದಲ್ಲಿ ರಸ್ತೆ ಪಕ್ಕದಲ್ಲಿ ಇರುವವರು ವಾಣಿವಿಲಾಸ ರಸ್ತೆ ವಿಸ್ತರಣೆಗಾಗಿ ಜಾಗ ಬಿಟ್ಟುಕೊಟ್ಟರೆ 10 ದಿನದೊಳಗೆ ಅವರಿಗೆ ಮನೆ ಒದಗಿಸಲಾಗುವುದು. ಬಳಿಕ ವೀರಮಾರುತಿ ನಗರದಲ್ಲಿನ ಸಮಸ್ಯೆ ಬಗೆಹರಿಸಿ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದು ಹು–ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.