ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ನಾಲ್ಕು ದಿನಗಳಿಂದ ನಡೆಸುತ್ತಿರುವ ಮುಷ್ಕರ ಮುಂದುವರಿದಿದೆ. ವಿವಿಧ ಊರುಗಳಿಗೆ ತೆರಳಲು ಸಾಕಷ್ಟು ಖಾಸಗಿ ವಾಹನಗಳು ಹಳೇ ಬಸ್ ನಿಲ್ದಾಣದಲ್ಲಿದ್ದರೂ ಶನಿವಾರ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು.
ಮೊದಲ ಮೂರು ದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಿತ್ತು. ಅದಕ್ಕೆ ತಕ್ಕಷ್ಟು ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರಿಂದ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರನ್ನು ಎದುರು ನೋಡುತ್ತಿದ್ದ ಚಿತ್ರಣ ಕಂಡುಬಂತು.
ಕೊಪ್ಪಳಕ್ಕೆ ಹೋಗಲು ಕಾಯುತ್ತಿದ್ದ ಲಿಂಗರಾಜ ಮಾನೆ ಎನ್ನುವ ಪ್ರಯಾಣಿಕ ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಸರ್ಕಾರಿ ಬಸ್‌ಗಳಾದರೆ ನಿಗದಿತ ಸಮಯಕ್ಕೆ ಸಂಚರಿಸುತ್ತಿದ್ದವು. ನಿಯಮಿತ ನಿಲುಗಡೆಯಿರುತ್ತಿದ್ದವು. ಆದರೆ, ಖಾಸಗಿಯವರು ಸೀಟುಗಳು ಭರ್ತಿಯಾಗುವ ತನಕ ಬಿಡುವುದಿಲ್ಲ. ಎಲ್ಲಾ ಊರುಗಳಲ್ಲಿ ನಿಲ್ಲಿಸುತ್ತಾರೆ. ಇದರಿಂದಾಗಿ ಊರಿಗೆ ತಲುಪಲು ತಡವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮುಷ್ಕರದ ನಡುವೆಯೂ ಸಂಚಾರ: ಶನಿವಾರ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಗದಗ, ಬೆಳಗಾವಿ, ವಿಜಯಪುರ, ಕಲಘಟಗಿಗೆ ಬಸ್ ಸಂಚರಿಸಿದವು. ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದಿಂದ 23 ಬಸ್‌ಗಳು ಹಾಗೂ 8 ಬಿಆರ್‌ಟಿಎಸ್ ಬಸ್‌ಗಳು ಸಂಚರಿಸಿದವು. ಒಟ್ಟು 36 ಬಸ್‌ಗಳಿಂದ 78 ಟ್ರಿಪ್‌ಗಳನ್ನು ಕಾರ್ಯಾಚರಣೆ ಮಾಡಲಾಯಿತು.
ಖೋತಾ: ಮುಷ್ಕರದಿಂದಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ನಾಲ್ಕು ದಿನಗಳಲ್ಲಿ ₹14.5 ಕೋಟಿ ಆದಾಯ ಖೋತಾ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ‘ಸಂಸ್ಥೆಯ ಸಿಬ್ಬಂದಿ ಕೆಲಸ ನಿರ್ವಹಿಸಲು ಅಡ್ಡಿ ಪಡಿಸುತ್ತಿರುವ ಕೆಲ ಉದ್ಯೋಗಿಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನು ಕೆಲ ತರಬೇತಿ ಸಿಬ್ಬಂದಿಗೆ ಒಂದೆರೆಡು ದಿನಗಳಲ್ಲಿ ವಜಾ ಆದೇಶ ಕಳುಹಿಸಲಾಗುತ್ತದೆ’ ಎಂದರು.
ವೇತನ: ಮುಷ್ಕರದ ಸಮಯದಲ್ಲಿ ಸಂಸ್ಥೆಯ ಕರೆಗೆ ಓಗೊಟ್ಟು ಕರ್ತವ್ಯ ನಿರ್ವಹಿಸುತ್ತಿರುವ ನಿಷ್ಠಾವಂತ ಸಿಬ್ಬಂದಿಗೆ ಮಾರ್ಚ್ ತಿಂಗಳ ವೇತನ ಪಾವತಿಸಲು ಸಂಸ್ಥೆ ಮುಂದಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ 2000ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಮೊದಲ ಹಂತದಲ್ಲಿ ಏಪ್ರಿಲ್ 7 ರಿಂದ 10 ರವರೆಗೆ ಕರ್ತವ್ಯ ನಿರ್ವಹಿಸಿದ ಎಲ್ಲ ಸಿಬ್ಬಂದಿಗೆ 12ರಂದು ವೇತನ ಪಾವತಿ ಮಾಡಲಾಗುವುದು. 11ರ ನಂತರ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೂ ಆದ್ಯತೆಯ ಮೇಲೆ ವೇತನ ಪಾವತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ವರ್ಗಾವಣೆ
ಹುಬ್ಬಳ್ಳಿ: ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಬೆನ್ನಲ್ಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶನಿವಾರ ಒಂದೇ ದಿನ ಒಟ್ಟು 222 ಸಿಬ್ಬಂದಿಯನ್ನು ವರ್ಗಾವಣೆ ಮಾಡಿದೆ.
ಶಿರಸಿ ವಿಭಾಗದಲ್ಲಿ ಹೆಚ್ಚು (48 ಜನ ಸಿಬ್ಬಂದಿ) ವರ್ಗಾವಣೆಯಾಗಿದ್ದಾರೆ. ಇದರಲ್ಲಿ 36 ಜನ ಚಾಲಕ ಹಾಗೂ ನಿರ್ವಾಹಕರಾಗಿದ್ದು, 12 ಜನ ತಾಂತ್ರಿಕ ಸಿಬ್ಬಂದಿಯಾಗಿದ್ದಾರೆ. ಬಾಗಲಕೋಟೆ, ಹಾವೇರಿ, ಚಿಕ್ಕೋಡಿ ಮತ್ತು ಹುಬ್ಬಳ್ಳಿ ವಿಭಾಗದಲ್ಲಿ ತಲಾ ಒಬ್ಬ ಆಡಳಿತ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ವಿಭಾಗದಲ್ಲಿ 16 ಜನ ಚಾಲಕ ಹಾಗೂ ನಿರ್ವಾಹಕರು; 5 ಜನ ತಾಂತ್ರಿಕ ಸಿಬ್ಬಂದಿ, ಹುಬ್ಬಳ್ಳಿ ಗ್ರಾಮೀಣ ವಿಭಾಗದಲ್ಲಿ 15 ಜನ ಚಾಲಕ ಹಾಗೂ ನಿರ್ವಾಹಕರು, ಹುಬ್ಬಳ್ಳಿ ನಗರ ಸಾರಿಗೆ ವಿಭಾಗದಲ್ಲಿ ಒಬ್ಬರು, ಹಾವೇರಿ ವಿಭಾಗದಲ್ಲಿ 28 ಜನ ಚಾಲಕ ಹಾಗೂ ನಿರ್ವಾಹಕರು; 9 ತಾಂತ್ರಿಕ ಸಿಬ್ಬಂದಿ, ಧಾರವಾಡ ವಿಭಾಗದಲ್ಲಿ 25 ಜನ ಚಾಲಕ ಹಾಗೂ ನಿರ್ವಾಹಕರು; 2 ಜನ ತಾಂತ್ರಿಕ ಸಿಬ್ಬಂದಿ, ಗದಗ ವಿಭಾಗದಲ್ಲಿ 21 ಜನ ಚಾಲಕ ಹಾಗೂ ನಿರ್ವಾಹಕರು, ಚಿಕ್ಕೋಡಿ ವಿಭಾಗದಲ್ಲಿ 8 ಜನ ಚಾಲಕ ಹಾಗೂ ನಿರ್ವಾಹಕರು; 4 ಜನ ತಾಂತ್ರಿಕ ಸಿಬ್ಬಂದಿ, ಬಾಗಲಕೋಟೆ ವಿಭಾಗದಲ್ಲಿ 21 ಜನ ಚಾಲಕ ಹಾಗೂ ನಿರ್ವಾಹಕರು, 19 ಜನ ತಾಂತ್ರಿಕ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.