ಹುಬ್ಬಳ್ಳಿ:'ಚೆಂಬೆಳಕಿನ ಕವಿ' ಖ್ಯಾತಿಯ ಹಿರಿಯ ಕವಿ ಡಾ. ಚೆನ್ನವೀರ ಕಣವಿ (93) ಅವರು ಬುಧವಾರ ನಿಧನರಾದರು.
ಅನಾರೋಗ್ಯದಿಂದಾಗಿ ಇತ್ತೀಚೆಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಮಂಗಳವಾರ ಅವರ ಆರೋಗ್ಯದ ಪರಿಸ್ಥಿತಿ ಬಿಗಡಾಯಿಸಿತ್ತು. ರಾತ್ರಿಯಿಡೀ ವೈದ್ಯರ ನಿಗಾದಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ 9.12ಕ್ಕೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾಡಿನ ಹೆಸರಾಂತ ಕವಿ ಡಾ. ಚೆನ್ನವೀರ ಕಣವಿ ಅವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರಪ್ಪ ಅವರು ಪ್ರಾಥಮಿಕ ಶಾಲೆ ಶಿಕ್ಷಕರು ಹಾಗೂ ತಾಯಿ ಪಾರ್ವತವ್ವ ಗೃಹಿಣಿ. ಊರಲ್ಲಿಯೇ ಅಕ್ಷರಾಭ್ಯಾಸ ಮುಗಿಸಿದ ಕಣವಿ ಅವರು ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. ನಂತರ ಅದೇ ವಿಭಾಗದ ನಿರ್ದೇಶಕರಾದರು.
15ಕ್ಕೂ ಹೆಚ್ಚು ಕವನ ಸಂಕಲನ, ವಿಮರ್ಶೆ ಹಾಗೂ ಪ್ರಬಂಧ ಸಂಕಲನ, ಮಕ್ಕಳ ಬರಹಗಳು ಸೇರಿದಂತೆ ಹಲವು ಬಗೆ ಸಾಹಿತ್ಯ ರಚಿಸಿದ್ದಾರೆ. ಅವರ ‘ಜೀವಧ್ವನಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ, ಬೆಂಗಳೂರು ನಗರ ಸಾರಿಗೆ ಸಂಸ್ಥೆ ನೀಡುವ ನೃಪತುಂಗ ಪ್ರಶಸ್ತಿ, ಎಸ್.ಬಂಗಾರಪ್ಪ ಪ್ರತಿಷ್ಠಾನ ಹಾಗೂ ವಿಚಾರ ವೇದಿಕೆಯ ಸಾಹಿತ್ಯ ಬಂಗಾರ ಪ್ರಶಸ್ತಿ, ದುಬೈ ಯುಎಇ ಕನ್ನಡ ಸಂಘದ ಕನ್ನಡ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.