ಧಾರವಾಡ: ನಗರದ ನುಗ್ಗಿಕೇರಿ ಹುನುಮಾನ ದೇಗುಲದಲ್ಲಿ ವ್ಯಾಪಾರಕ್ಕೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು, ಅನ್ಯಧರ್ಮದವರಿಗೆ ಅವಕಾಶ ನೀಡಬಾರದು ಎಂದು ದೇಗುಲ ಆಡಳಿತ ಸಮಿತಿ ಅಧ್ಯಕ್ಷೆ ಡಾ.ಪದ್ಮಾ ದೇಸಾಯಿ ಅವರಿಗೆ ನಗರದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಮನವಿ ಸಲ್ಲಿಸಿದ್ದಾರೆ.
ಬಜರಂಗ ದಳ ಧಾರವಾಡ ವಿಭಾಗದ ಸಂಚಾಲಕ ಶಿವಾನಂದ ಸತ್ತಿಗೇರಿ ಅವರು ಶನಿವಾರ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಹನುಮಾನ ದೇವಸ್ಥಾನಕ್ಕೆ ಧಾರವಾಡ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಅಪಾರ ಭಕ್ತರು ಇದ್ದಾರೆ. ಅನ್ಯಧರ್ಮದವರಿಂದ ಕಾಯಿ, ಹಣ್ಣು, ಹೂವು ಖರೀದಿಸಿ ಹನುಮಂತ ದೇವರಿಗೆ ಅರ್ಪಿಸಿದರೆ ಅದು ಸಲ್ಲದು. ಮಾಂಸಹಾರಿಗಳು ಮಡಿ ಇಲ್ಲದ ಕಾಯಿ, ಹಣ್ಣು, ಹೂವು ಮಾರುವುದು ತಪ್ಪು ಎಂದು ನಮ್ಮ ಅಭಿಪ್ರಾಯ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ದೇಗುಲ ಖಾಸಗಿ ಒಡೆತನದಲ್ಲಿ ಇರುವುದರಿಂದ ನಿಮ್ಮ (ಆಡಳಿತ ಮಂಡಳಿ) ಸ್ವಂತ ಅಭಿಪ್ರಾಯ ಹಿಂದೂಗಳ ವ್ಯಾಪಾರದ ಪರವಾಗಿ ಇರಬೇಕು ಎಂದು ತಮ್ಮಲ್ಲಿ ವಿನಂತಿ ಮಾಡುತ್ತೇವೆ. ಇಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟರೆ ಹನುಮ ಭಕ್ತರನ್ನು ಕರೆತಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸುಮಾರು ಒಂದೂವರೆ ವರ್ಷದ ಹಿಂದೆ ನುಗ್ಗಿಕೇರಿಯ ಹನುಮಂತ ದೇವರ ಗುಡಿಯ ಪೌಳಿಯಲ್ಲಿನ ಮುಸ್ಲಿಂ ವ್ಯಾಪಾರಿಯ ಹಣ್ಣಿನ ಅಂಗಡಿಗೆ ಶ್ರೀರಾಮಸೇನೆ ಕಾರ್ಯಕರ್ತರು ನುಗ್ಗಿ ಕಲ್ಲಂಗಡಿ ಹಣ್ಣುಗಳನ್ನು ಬೀದಿಗೆ ಚೆಲ್ಲಿದ್ದ ಘಟನೆ ನಡೆದಿತ್ತು.
–––
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ನೀಡಿರುವ ಮನವಿ ಕುರಿತು ದೇಗುಲ ಆಡಳಿತ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
–ಡಾ.ಪದ್ಮಾ ದೇಸಾಯಿ, ಅಧ್ಯಕ್ಷೆ, ನುಗ್ಗಿಕೇರಿ ಹನುಮಂತ ದೇಗುಲ ಆಡಳಿತ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.