ADVERTISEMENT

ಸೌಲಭ್ಯಕ್ಕಾಗಿ ಗ್ರಾಮಸ್ಥರ ತೀವ್ರ ಪರದಾಟ

ಅಣ್ಣಿಗೇರಿ ತಾಲೂಕು ಸೈದಾಪೂರ ಗ್ರಾಮ

ಜಗದೀಶ ಎಂ.ಗಾಣಿಗೇರ
Published 3 ಜನವರಿ 2023, 16:28 IST
Last Updated 3 ಜನವರಿ 2023, 16:28 IST
ಅಣ್ಣಿಗೇರಿ ತಾಲೂಕಿನ ಸೈದಾಪೂರ ಗ್ರಾಮದಲ್ಲಿ ಸುಸಜ್ಜಿತ ರಸ್ತೆಯಿಲ್ಲದೇ ಕೊಳಚೆ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿರುವುದು.
ಅಣ್ಣಿಗೇರಿ ತಾಲೂಕಿನ ಸೈದಾಪೂರ ಗ್ರಾಮದಲ್ಲಿ ಸುಸಜ್ಜಿತ ರಸ್ತೆಯಿಲ್ಲದೇ ಕೊಳಚೆ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿರುವುದು.   

ಅಣ್ಣಿಗೇರಿ: ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಂ ಪಂಚಾಯ್ತಿ ವ್ಯಪ್ತಿಗೆ ಒಳಪಡುವ ಸೈದಾಪುರ ಗ್ರಾಮದ ನಾಗರಿಕರು ಮೂಲಸೌಕರ್ಯಗಳ ನಿರೀಕ್ಷೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ.

ಸುಮಾರು ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ ಸರ್ಕಾರಿ ಸೌಲಭ್ಯಗಳು ಸರಿಯಾಗಿ ತಲುಪಿಲ್ಲ ಎಂಬ ಆರೋಪಗಳಿವೆ. ಗ್ರಾಮದ ಮಹಿಳೆಯರಿಗೆ ಇಂದಿಗೂ ಬಯಲು ಶೌಚಾಲಯವೇ ಕಾಯಂ ಆಗಿವೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರು ಪಂಚಾಯ್ತಿಯ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳು ಆಗಿದ್ದರೂ, ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆಗಾಳದಲ್ಲಿ ನೀರು ರಸ್ತೆ ಮೇಲೆ ಹರಿಯುತ್ತದೆ. ಚರಂಡಿಗಳನ್ನು ಕಾಲಕಾಲಕ್ಕೆ ಶುಚಿಗೊಳಿಸದ ಕಾರಣ ಸೊಳ್ಳೆಗಳ ಸಂಖ್ಯೆಯೂ ಹೆಚ್ಚಳವಾಗಿದ್ದು, ರೋಗಗಳಿಗೆ ಆಹ್ವಾನ ನೀಡುವಂತಿದೆ.

ADVERTISEMENT

ಗ್ರಾಮದ ನಾಯ್ಕರ್ ಬಡಾವಣೆಯಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ. ಬಡಾವಣೆಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಬೀದಿ ದೀಪಗಳಿಲ್ಲದೆ ರಾತ್ರಿ ಸಂಚಾರವೇ ದುಸ್ತರವಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

‘ವಿದ್ಯಾಭ್ಯಾಸಕ್ಕಾಗಿ ಸೈದಾಪುರದಿಂದ ಸಾಕಷ್ಟು ವಿದ್ಯಾರ್ಥಿಗಳು ಪಟ್ಟಣಕ್ಕೆ ಹೋಗುವುದು ಅನಿವಾರ್ಯವಾಗಿದೆ. ಆದರೆ ಸರಿಯಾದ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿನಿಯರು ಅರ್ಧಕ್ಕೇ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಬಸವರಾಜ ಅಂಗಡಿ ಬೇಸರ ವ್ಯಕ್ತಪಡಿಸಿದರು.

‘ಸಭೆ, ಸಮಾರಂಭಗಳಿಗೆ ಗ್ರಾಮದಲ್ಲಿ ಸಮುದಾಯ ಭವನದ ಕೊರತೆ ಇದೆ. ಇದನ್ನು ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರ ಗಮನಕ್ಕೆ ತರಲಾಗಿತ್ತು. ವಾಲ್ಮೀಕಿ ಸಭಾಭವನ ನಿರ್ಮಾಣಕ್ಕೆ ಅನುದಾನ ನೀಡಿ, ಚಾಲನೆಯನ್ನೂ ನೀಡಿದ್ದಾರೆ. ಗ್ರಾಮದಲ್ಲಿ ಅರ್ಧಕ್ಕೆ ನಿಂತ ಹನುಮಂತ ದೇವರ ದೇವಸ್ಥಾನದ ಕಾಮಗಾರಿ ಪುರ್ಣಗೊಳಿಸಲು ಆರ್ಥಿಕ ತೊಂದರೆ ಎದುರಾಗಿದೆ’ ಎಂದು ಗ್ರಾಮಸ್ಥರು ಹೇಳಿದರು.

ಬಯಲು ಶೌಚಾಲಯ ಈಗಲೂ ಸೈದಾಪುರದಲ್ಲಿದ್ದು, ಗ್ರಾಮದಿಂದ ಹೊಸಳ್ಳಿ, ಕುರ್ತಕೋಟಿ ರಸ್ತೆ ಕಡೆ ಹೋಗಬೇಕೆಂದರೆ ಮೂಗು ಮುಚ್ಚಿಕೊಂಡೇ ಸಾಗಬೇಕಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಲು ಜಾಗ ಇಲ್ಲದ ಕುಟುಂಬಗಳಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.