ADVERTISEMENT

ಹುಬ್ಬಳ್ಳಿ | ಖಾಸಗಿ ಶಾಲೆಯಲ್ಲಿ ದುಬಾರಿ ಶುಲ್ಕ: ನಿಯಮ ಉಲ್ಲಂಘನೆ

ಶಾಲಾ ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪಾಲನೆಗೆ ಪೋಷಕರ ಆಗ್ರಹ

ಎಲ್‌.ಮಂಜುನಾಥ
Published 2 ಜೂನ್ 2024, 5:17 IST
Last Updated 2 ಜೂನ್ 2024, 5:17 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಹುಬ್ಬಳ್ಳಿ: 2024–25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಸೌಲಭ್ಯ ಎಲ್ಲವೂ ಉಚಿತವಿದ್ದು, ಖಾಸಗಿ ಶಾಲೆಗಳು ಸೌಲಭ್ಯಕ್ಕೆ ಅನುಸಾರ ಶುಲ್ಕ ನಿಗದಿಪಡಿಸಿವೆ.

ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ ಶುಲ್ಕ ನಿಗದಿ ಸೇರಿ ಕೆಲ ನಿಯಮಗಳನ್ನು ಪಾಲಿಸಬೇಕು ಎಂಬ ಸೂಚನೆ ಶಿಕ್ಷಣ ಇಲಾಖೆಯು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಿದೆ. ಆದರೆ, ಕೆಲ ಕಡೆ ಪಾಲನೆ ಆಗದಿರುವ ಬಗ್ಗೆ ಆರೋಪಗಳಿವೆ.

ADVERTISEMENT

‘ಕೆಲ ಖಾಸಗಿ ಶಾಲೆಗಳು ಮಕ್ಕಳ ದಾಖಲಾತಿ ಶುಲ್ಕದ ಜೊತೆಗೆ ಭದ್ರತಾ ಠೇವಣಿ ನೆಪದಲ್ಲಿ ಪೋಷಕರಿಂದ ಒಂದಿಷ್ಟು ಹಣ ಪಡೆಯುತ್ತಿದ್ದಾರೆ.ಮಕ್ಕಳು ಶಾಲೆಯ ಪರಿಕರ, ಪೀಠೋಪಕರಣಗಳಿಗೆ ಹಾನಿ ಮಾಡಿದರೆ, ನಿಮ್ಮ ಠೇವಣಿ ಹಣದಲ್ಲಿ ಅದರ ಖರ್ಚನ್ನು ಪಡೆದು, ಉಳಿದ ಹಣವನ್ನು ವರ್ಷದ ಕೊನೆಯಲ್ಲಿ ನೀಡಲಾಗುವುದು ಎಂಬ ಹೇಳಿ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ’ ಎಂದು ಬಾಲಕಿಯ ಪೋಷಕ ರಾಮಣ್ಣ ಹಿರೇಮಠ ದೂರಿದರು. 

‘1ನೇ ತರಗತಿಗೆ ₹32 ಸಾವಿರ ಶುಲ್ಕ ಎಂದು ಖಾಸಗಿ ಶಾಲೆಯವರು ಹೇಳುತ್ತಾರೆ. ಕಡಿಮೆ ಮಾಡಲು ಕೋರಿದರೆ, ಕಂತುಗಳ ರೂಪದಲ್ಲಿ ಪಾವತಿಸಲು ತಿಳಿಸುತ್ತಾರೆ. ಆದರೆ, ಶುಲ್ಕದ ವಿವರವನ್ನು ಶಾಲೆಯ ಸೂಚನಾ ಫಲಕದಲ್ಲೂ ಅಳವಡಿಸಿಲ್ಲ’ ಎಂದು ಪೋಷಕ ಎಸ್‌.ಆರ್‌.ಕೃಷ್ಣಮೂರ್ತಿ ಆರೋಪಿಸಿದರು.

‘ಶಾಲೆಯ ಸೌಲಭ್ಯ, ಬೋಧನೆಗೆ ಅನುಗುಣವಾಗಿ ಶುಲ್ಕ ನಿಗದಿಪಡಿಸಿ, ಅದನ್ನು ಸೂಚನಾ ಫಲಕದಲ್ಲಿ ಅಳವಡಿಸಿದರೆ ಎಲ್ಲರಿಗೂ ಅನುಕೂಲ. ನಿಯಮ ಉಲ್ಲಂಘಿಸಿ ಪೋಷಕರಿಂದ ಹೆಚ್ಚು ಹಣ ವಸೂಲಿ ಮಾಡುವುದು ಸರಿಯಲ್ಲ’ ಎಂದರು.

ನಿಯಮ ಉಲ್ಲಂಘಿಸಿದರೆ ಕ್ರಮ: ಡಿಡಿಪಿಐ

‘ಶಿಕ್ಷಣ ಹಕ್ಕು ಕಾಯ್ದೆ-2009 ಮತ್ತು ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012 ಅನ್ವಯ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳು ತಮ್ಮ ಶಾಲೆಯ ಸೌಲಭ್ಯಗಳನ್ನು ಒಳಗೊಂಡಂತೆ ಬೋಧನಾ ಶುಲ್ಕವನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಸೂಚನಾ ಫಲಕದಲ್ಲಿ ಮತ್ತು ಶಿಕ್ಷಣ ಇಲಾಖೆಯ ಜಾಲತಾಣ (SATS)ದಲ್ಲಿ ಸಾರ್ವಜನಿಕರಿಗೆ ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಜೊತೆಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌ 2 (ಬಿ) ಮತ್ತು ಸೆಕ್ಷನ್‌ 13ರಲ್ಲಿನ ಅಂಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಉಲ್ಲಂಘಿಸಿದ್ದಲ್ಲಿ ಸಂಬಂಧಿಸಿದ ಶಾಲೆಯ ವಿರುದ್ಧ  ಕ್ರಮಕೈಗೊಳ್ಳಲಾಗುತ್ತದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್‌.ಎಸ್‌.ಕೆಳದಿಮಠ.

‘ಜಿಲ್ಲೆಯಲ್ಲಿ 88 ಅನುದಾನರಹಿತ ಕಿರಿಯ ಪ್ರಾಥಮಿಕ ಶಾಲೆ, 112 ಹಿರಿಯ ಪ್ರಾಥಮಿಕ ಶಾಲೆ ಹಾಗೂ 402 ಪ್ರೌಢಾಶಾಲೆಗಳಿದ್ದು, ಬಹುತೇಕ ಶಾಲೆಗಳು ತಮ್ಮ ಜಾಲತಾಣದಲ್ಲಿ ಹಾಗೂ ಇಲಾಖೆಯ ವೆಬ್‌ಸೈಟ್‌ನಲ್ಲಿ ಶುಲ್ಕದ ವಿವರ ದಾಖಲಿಸಿಲ್ಲ. ಮತ್ತೊಮ್ಮೆ ಸಭೆ ಕರೆದು ಸೂಚಿಸಲಾಗುವುದು’ ಎನ್ನುತ್ತಾರೆ ಅವರು. 

ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿ, ಶಾಲಾ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ನಿಯಮ ಪಾಲನೆ ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗುವುದು.
–ಎಸ್‌.ಎಸ್‌.ಕೆಳದಿಮಠ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ. 
ಸರ್ಕಾರಿಂದ ಯಾವುದೇ ಸಹಾಯಧನ ನಮಗೆ ಬರುವುದಿಲ್ಲ. ಪ್ರತಿ ವರ್ಷ ಶಾಲಾಭಿವೃದ್ಧಿಯ ಜೊತೆಗೆ ಮಕ್ಕಳಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಶಿಕ್ಷಕರ ನೇಮಕ, ವೇತನ ಎಲ್ಲವನ್ನೂ ಭರಿಸಬೇಕಾಗುತ್ತದೆ. ಹೀಗಾಗಿ ಶುಲ್ಕ ಹೆಚ್ಚಳ ಅನಿವಾರ್ಯ.
–ಆಡಳಿತಾಧಿಕಾರಿ, ಖಾಸಗಿ ಶಾಲೆ, ಹುಬ್ಬಳ್ಳಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.