ADVERTISEMENT

ವಕ್ಫ್ ಬೋರ್ಡ್ ವಿರುದ್ಧ ವಿಶ್ವ ಹಿಂದೂ ಪರಿಷತ್-ಬಜರಂಗದಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:44 IST
Last Updated 15 ನವೆಂಬರ್ 2024, 16:44 IST
ಕಲಘಟಗಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಕಿಸಾನ್ ಸಂಘದ ನೇತ್ವತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ವಿರೇಶ ಮುಳಗುಂದಮಠ ಅವರಿಗೆ ಮನವಿ ಸಲ್ಲಿಸಲಾಯಿತು
ಕಲಘಟಗಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಕಿಸಾನ್ ಸಂಘದ ನೇತ್ವತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ವಿರೇಶ ಮುಳಗುಂದಮಠ ಅವರಿಗೆ ಮನವಿ ಸಲ್ಲಿಸಲಾಯಿತು   

ಕಲಘಟಗಿ: ರಾಜ್ಯ ಸರ್ಕಾರ ವಕ್ಫ್ ಬೋರ್ಡ್ ಹೆಸರಲ್ಲಿ ಸರ್ಕಾರಿ ಹಾಗೂ ರೈತರ ಜಮೀನುಗಳನ್ನು ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಕಿಸಾನ್ ಸಂಘದ ನೇತ್ವತ್ವದಲ್ಲಿ ಪಟ್ಟಣದ ಎಪಿಎಂಸಿಯಿಂದ ತಹಶೀಲ್ದಾರ್ ಕಚೇರಿವರೆಗೆ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

‘ರಾಜ್ಯ ಸರ್ಕಾರ ರೈತರ ಜಮೀನುಗಳ ಮೇಲೆ, ಮಠ, ಮಂದಿರಗಳು, ಹಿಂದು ಸಮಾಜದ ರುದ್ರಭೂಮಿ ಮತ್ತು ಸರ್ಕಾರದ ಆಸ್ತಿಯ ಮೇಲೇ ವಕ್ಫ್ ಹೆಸರು ಸೇರಿಸಿರುವುದನ್ನು ಶೀಘ್ರವೇ ರದ್ದುಗೊಳಿಸಬೇಕು. ರೈತರ ಉತಾರಿನಲ್ಲಿ ವಕ್ಫ್‌ ಆಸ್ತಿಯೆಂದು ತಿದ್ದುಪಡಿ ಮಾಡಿ ರೈತರಿಗೆ ನೀಡಿರುವ ನೋಟಿಸನ್ನು ಮಾತ್ರ ವಾಪಸ್ ಪಡೆದರೆ ಸಾಲದು; ಉತಾರಿನ ಪಹಣಿ ಕಾಲಂ 11ರಲ್ಲಿರುವ ವಕ್ಫ್ ಆಸ್ತಿ ಅಂತ ಬರೆದಿರುವುದನ್ನು ಯಾವುದೇ  ಶರತುಬದ್ಧ ದಾಖಲೆಗಳಿಲ್ಲದೆ ಮೊದಲಿನ ಉತಾರದಂತೆ ತಿದ್ದುಪಡಿ ಮಾಡಬೇಕು’ ಎಂದು ಆಗ್ರಹಿಸಿದರು.

ಹಿಂದೂ ಸಮಾಜ ಮತ್ತು ರೈತರನ್ನು ಲಘುವಾಗಿ ಕಾಣುತ್ತಿರುವ ಸಚಿವ ಜಮೀರ್ ಅಹ್ಮದರನ್ನು ಕೂಡಲೇ ಮಂತ್ರಿಮಂಡಲದಿಂದ ವಜಾ ಮಾಡಿ ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ವಿಶ್ವ ಹಿಂದೂ ಪರಿಷತ್‌-ಬಜರಂಗದಳ ಮುಖಂಡರಾದ ಶಿವಾನಂದ ಸತ್ತಿಗೇರಿ, ಅನುದೀಪ ಕುಲಕರ್ಣಿ, ಸಿದ್ದು ಹಿರೇಮಠ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಾರಿ ಶಿಂಧೆ, ಐ.ಸಿ.ಗೋಕುಲ, ಕಲ್ಲಪ್ಪ ಪುಟ್ಟಪ್ಪನವರ, ಗುರುನಾಥಗೌಡ, ಸದಾನಂದ ಚಿಂತಾಮಣಿ, ಬಸವರಾಜ ಕರಡಿಕೊಪ್ಪ, ಪುಂಡಲೀಕ ಜಾಧವ, ಶಂಕರ ಹುದ್ದಾರ, ಪರಶುರಾಮ ಹುಲಿಹೊಂಡ, ಆನಂದ ಕಡ್ಡಾಸ್ಕರ, ಬಸವರಾಜ ಶೇರೆವಾಡ, ಶಿವಲಿಂಗ ಯಲಿವಾಳ, ಮಂಗಲಪ್ಪ ಲಮಾಣಿ, ನಿಂಗಪ್ಪ ಮಿಶ್ರಿಕೋಟಿ, ಅರ್ಜುನ ಲಮಾಣಿ ಇದ್ದರು.

Cut-off box - ಪ್ರತಿಭಟನೆ ವೇಳೆ ಗಲಾಟೆ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನಾಕಾರರು ಭಾಷಣದ ವೇಳೆ ಸರ್ಕಾರದ ಸಚಿವರಾದ ಜಮೀರ್ ಅಹ್ಮದ್ ಅವರು ತಮ್ಮಪ್ಪನ ಆಸ್ತಿ ಎಂದು ಕೊಂಡಿದ್ದಾರೆ ಹೇಳಿದಾಗ ಹಿಂದೆ ನೋಡುತ್ತಾ ನಿಂತಿದ್ದ ವ್ಯಕ್ತಿಯೊಬ್ಬ ‘ಆಸ್ತಿ ನಿಮ್ಮಪ್ಪಂದಾ’ ಎಂದು ಪ್ರಶ್ನಿಸಿದ್ದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಯಿತು. ರೊಚ್ಚಿಗೆದ್ದ ಪ್ರತಿಭಟನಾಕಾರರು ಉದ್ಧಟತನ ತೋರಿದ ವ್ಯಕ್ತಿಯ ಕಪಾಳಮೋಕ್ಷಕ್ಕೆ ಮುಂದಾದರು. ತಕ್ಷಣವೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು. ನಂತರ ವ್ಯಕ್ತಿಯನ್ನು ಕಲಘಟಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.