ADVERTISEMENT

ವಿಶ್ವಕರ್ಮ ಯೋಜನೆ: ಧಾರವಾಡ ಜಿಲ್ಲೆಯಲ್ಲಿ 82,630 ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 15:43 IST
Last Updated 10 ಜನವರಿ 2024, 15:43 IST
ಎಸ್.ಎ.ರಾಮದಾಸ್
ಎಸ್.ಎ.ರಾಮದಾಸ್   

ಹುಬ್ಬಳ್ಳಿ: ಕುಲ ಕಸುಬುಗಳನ್ನು ನಡೆಸುವ 18 ವೃತ್ತಿಪರ ಸಮುದಾಯದವರ ಏಳಿಗೆಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಿದ್ದು, ಧಾರವಾಡ ಜಿಲ್ಲೆಯಲ್ಲೂ ಅನುಷ್ಠಾನಗೊಂಡಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 82,630 ಜನರು ಅರ್ಜಿ ಹಾಕಿದ್ದು, ಇನ್ನುಳಿದ ಅರ್ಹರು ಕೂಡ ಆದಷ್ಟು ಬೇಗ ಅರ್ಜಿ ಹಾಕಬೇಕು ಎಂದು ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಮತ್ತು ವಿಶ್ವಕರ್ಮ ಯೋಜನೆ ರಾಜ್ಯ ಸಂಚಾಲಕ ಎಸ್‌.ಎ.ರಾಮದಾಸ್‌ ಹೇಳಿದರು.  

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮರಗೆಲಸದವರು, ದೋಣಿಕಟ್ಟುವವರು, ಕಬ್ಬಿಣದ ಆಯುಧಗಳನ್ನು ತಯಾರು ಮಾಡುವವರು, ಅಕ್ಕಸಾಲಿಗರು, ಬೀಗದ ಕೆಲಸ, ಚಮ್ಮಾರರು, ಕುಂಬಾರರು, ಶಿಲ್ಪಿಗಳು, ಸವಿತಾ ಸಮಾಜದವರು ಸೇರಿದಂತೆ 18 ರೀತಿಯ ಕುಲ ಕಸುಬುಗಳನ್ನು ಮಾಡುವವರು ಈ ಯೋಜನೆಯ ಲಾಭ ಪಡೆಯಲು ಅರ್ಹರು. ತಮ್ಮ ಸಮೀಪದ ಗ್ರಾಮ್‌ ಒನ್‌, ಕರ್ನಾಟಕ ಒನ್‌, ಸಿಎಸ್‌ಸಿ ಕೇಂದ್ರಗಳು ಅಥವಾ ಪೋರ್ಟಲ್‌ (https://pmvishwakarma.gov.in) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ’ ಎಂದರು.

ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯ ಸಮಿತಿಯು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಯಾದವರಿಗೆ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ತರಬೇತಿ ನೀಡಲಾಗುವುದು, ತರಬೇತಿ ಪೂರ್ಣಗೊಳಿಸಿದವರಿಗೆ ಕೇಂದ್ರ ಸರ್ಕಾರದಿಂದ ಸರ್ಟಿಫಿಕೇಟ್‌ ನೀಡಲಾಗುವುದು, ತರಬೇತಿ ಪಡೆಯುವವರಿಗೆ ಪ್ರತಿ ತಿಂಗಳು ₹ 500 ಶಿಷ್ಯವೇತನ, ಊಟ– ವಸತಿ ಉಚಿತವಾಗಿ ನೀಡಲಾಗುವುದು. ಇದಲ್ಲದೇ, ವೃತ್ತಿಗೆ ಸಂಬಂಧಿಸಿದ ₹ 15 ಸಾವಿರ ಮೊತ್ತದ ಸಲಕರಣೆಗಳ ಕಿಟ್‌ ನೀಡಲಾಗುವುದು.’ ಎಂದು ಹೇಳಿದರು. 

ADVERTISEMENT

‘ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲ ₹1 ಲಕ್ಷ ನೀಡಲಾಗುವುದು. 18 ತಿಂಗಳಲ್ಲಿ ಇದನ್ನು ಪಾವತಿ ಮಾಡಬೇಕು. ಫಲಾನುಭವಿ ಶೇ 5ರಷ್ಟು ಬಡ್ಡಿ ಪಾವತಿಸಬೇಕು. ಕೇಂದ್ರ ಸರ್ಕಾರ ಶೇ 8ರಷ್ಟು ಬಡ್ಡಿ ನೀಡುತ್ತದೆ. ಎರಡನೇ ಆವೃತ್ತಿಯಲ್ಲಿ ₹2 ಲಕ್ಷವನ್ನು ಸಾಲವಾಗಿ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ₹ 10 ಲಕ್ಷದವರೆಗೆ ಸಾಲ ದೊರೆಯುತ್ತದೆ’ ಎಂದು ನುಡಿದರು.

‘ದೇಶದಲ್ಲಿ ಸುಮಾರು 30 ಲಕ್ಷ ಕುಶಲಕರ್ಮಿ ಕುಟುಂಬಗಳಿವೆ. ಇವರ ಅಭಿವೃದ್ಧಿಗೆ ಕೇಂದ್ರ ಸರ್ಕಾರ  13 ಸಾವಿರ ಕೋಟಿ ಅನುದಾನ ತೆಗೆದಿಟ್ಟಿದೆ. ಕರ್ನಾಟಕದಲ್ಲಿ ಇದುವರೆಗೆ 19.50 ಲಕ್ಷ ಜನರು ಅರ್ಜಿ ಹಾಕಿದ್ದಾರೆ’ ಎಂದು ಹೇಳಿದರು.

ಹುಬ್ಬಳ್ಳಿ– ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ರಾಮಣ್ಣ ಬಡಿಗೇರ ಹಾಗೂ ವಕ್ತಾರ ರವಿ ನಾಯಕ ಉಪಸ್ಥಿತರಿದ್ದರು.

ಪ್ರಶಸ್ತಿಗೆ ಶಿಫಾರಸ್ಸು

ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಗೆ ‘ಸ್ಪಾರ್ಕ್‌’ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಎಸ್‌.ಎ. ರಾಮದಾಸ್‌ ಹೇಳಿದರು.

‘ಜೆಡಿಎಸ್‌ ಮೈತ್ರಿಯಿಂದ ಬಿಜೆಪಿಗೆ ಲಾಭ’

ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆರವಾಗಲಿದೆ ಎಂದು ಮಾಜಿ ಸಚಿವ ಎಸ್‌.ಎ. ರಾಮದಾಸ್‌ ಹೇಳಿದರು. ‘ಮೈಸೂರು ಕ್ಷೇತ್ರ ಬಿಜೆಪಿಗೋ ಅಥವಾ ಜೆಡಿಎಸ್‌ಗೋ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಯಾರ ಪಾಲಿಗೆ ಹೋದರೂ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.