ADVERTISEMENT

ಆರಂಭವಾಗದ ಶಿರೂರ ಮೇಲ್ಸೇತುವೆ ದುರಸ್ತಿ ಕಾಮಗಾರಿ

ಅಶೋಕ ಘೋರ್ಪಡೆ
Published 21 ಜುಲೈ 2021, 14:40 IST
Last Updated 21 ಜುಲೈ 2021, 14:40 IST
ಶಿರೂರ ಮೇಲ್ಸುತೇವೆ ಕೆಳ ಭಾಗದಲ್ಲಿ ಕುಸಿದಿರುವುದು
ಶಿರೂರ ಮೇಲ್ಸುತೇವೆ ಕೆಳ ಭಾಗದಲ್ಲಿ ಕುಸಿದಿರುವುದು   

ಕುಂದಗೋಳ: ಹುಬ್ಬಳ್ಳಿ–ಲಕ್ಷ್ಮೇಶ್ವರ ಹೆದ್ದಾರಿ ನಡುವೆ ಇರುವ ಶಿರೂರ ಮೇಲ್ಸೇತುವೆ ಕುಸಿದು, ರಸ್ತೆ ಸಂಪರ್ಕ ಸ್ಥಗಿತಗೊಂಡು ಮೂರು ತಿಂಗಳು ಕಳೆದರೂ ಇನ್ನೂ ದುರಸ್ತಿ ಕಾರ್ಯ ಆರಂಭವಾಗಿಲ್ಲ.

ಮೇ ನಲ್ಲಿ ಸುರಿದ ಮಳೆಗೆ ಸೇತುವೆ ಕುಸಿದ ಪರಿಣಾಮ ಈ ಹೆದ್ದಾರಿಯಲ್ಲಿ ವಾಹನಗಳು ಓಡಾಡದಂತೆ ಲೋಕೋಪಯೋಗಿ ಇಲಾಖೆಯವರು ಸೇತುವೆ ಮುಂಭಾಗದಲ್ಲಿ ರಸ್ತೆ ಅಗೆದು ಸಂಪರ್ಕ ಸ್ಥಗಿತಗೊಳಿಸಿದ್ದರು.

ಈ ಮಾರ್ಗದ ವಾಹನಗಳು ಸಂಶಿಯಿಂದ ಬಸಾಪೂರ ಮಾರ್ಗವಾಗಿ ಸಂಚರಿಸಲು ಅನುಮತಿ ನೀಡಲಾಗಿತ್ತು. ಅದು ಕೂಡ ಕಚ್ಚಾ ಹಾಗೂ ಕಿರಿದಾದ ರಸ್ತೆಯಾಗಿದ್ದು, ಮಳೆಯಾದಾಗ ವಾಹನಗಳು ಕೆಸರಿನಲ್ಲಿ ಸಿಲುಕಿಕೊಳ್ಳುತ್ತವೆ. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿ ಬೇಸತ್ತ ಸಂಶಿ ಗ್ರಾಮಸ್ಥರು ಕಾರು, ಬೈಕು, ಆಂಬ್ಯುಲೆನ್ಸ್ ಓಡಾಡಲು ತಾವೇ ಸ್ವತ: ಸೇತುವೆ ಹತ್ತಿರ ನಿಂತು ಲಘು ವಾಹನಗಳು ಸಂಚರಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.

ADVERTISEMENT

ಈಗ ಈ ರಸ್ತೆಯಲ್ಲಿ ಲಘು ವಾಹನಗಳು ಮಾತ್ರ ಸಂಚರಿಸುತ್ತಿವೆ. ಸಾರಿಗೆ ಸಂಸ್ಥೆಯ ಬಸ್ ಸಂಚಾರ ಆರಂಭಗೊಳ್ಳದ ಕಾರಣ ಸಂಶಿ, ಹೊಸಳ್ಳಿ, ಯರಿಬೂದಿಹಾಳ, ಪಶುಪತಿಹಾಳ, ಗುಡಗೇರಿ, ಹಿರೇಗುಂಜಳ, ಚಿಕ್ಕಗುಂಜಳ, ಭಾಗವಾಡ ಗ್ರಾಮಸ್ಥರು ಹುಬ್ಬಳ್ಳಿಗೆ ಪ್ರಯಾಣಿಸಬೇಕೆಂದರೆ ಸುಮಾರು 20 ಕಿ.ಮೀ. ಸುತ್ತುವರಿಯಬೇಕಾಗಿದೆ.

ಸಂಶಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶೇಖರಪ್ಪ ಹರಕುಣಿ ಪ್ರತಿಕ್ರಿಯಿಸಿ ‘ಸಾರಿಗೆ ಸಂಪರ್ಕ ಇಲ್ಲದ್ದರಿಂದ ಈ ಭಾಗದ ವ್ಯಾಪಾರಸ್ಥರು, ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಶಾಲಾ, ಕಾಲೇಜುಗಳು ಆರಂಭಗೊಂಡರೆ ವಿದ್ಯಾರ್ಥಿಗಳಿಗೂ ಬಹಳಷ್ಟು ತೊಂದರೆ ಆಗಲಿದೆ’ ಎಂದರು.

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೀಶ ಉಪ್ಪಿನ ‘ಶಿರೂರ ಮೇಲ್ಸೇತುವೆ ಕುಸಿದು ಮೂರು ತಿಂಗಳಾಗಿವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಇನ್ನೂ ಕಾಮಗಾರಿ ಆರಂಭಿಸಿಲ್ಲ. ಈ ವಾರದಲ್ಲಿ ಕಾಮಗಾರಿ ಆರಂಭವಾಗದೇ ಹೋದರೆ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.