ADVERTISEMENT

ಪಿತ್ರಾರ್ಜಿತ ಆಸ್ತಿಗೆ ವಕ್ಫ್‌ ಹೆಸರು: ದೂರು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 18:30 IST
Last Updated 28 ಅಕ್ಟೋಬರ್ 2024, 18:30 IST

ಧಾರವಾಡ: ‘ನಮ್ಮ ಪಿತ್ರಾರ್ಜಿತ ಆಸ್ತಿಯ ಪಹಣಿ ಪತ್ರದಲ್ಲಿ ಜಮೀನು ವಕ್ಫ್‌ ಆಸ್ತಿಗೆ ಒಳಪಟ್ಟಿರುತ್ತದೆ ನಮೂದಿಸಲಾಗಿದೆ. ಅದನ್ನು ತಿದ್ದುಪಡಿ ಮಾಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ’ ಎಂದು ಉಪ್ಪಿನಬೇಟಗೇರಿ ಗ್ರಾಮಸ್ಥ ಗಂಗಪ್ಪ ರುದ್ರಪ್ಪ ಜಾವಳಗಿ ದೂರಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ವೆ ನಂಬರ್‌ 141ರ ಜಮೀನು ನಮ್ಮ ಪಿತ್ರಾರ್ಜಿತ ಆಸ್ತಿ. ಕುಟಂಬದ ಸದಸ್ಯರು (ಬಾಳಪ್ಪ ಜವಳಗಿ, ಸರೋಜಾ ಜಾವಳಗಿ (ಸಹೋದರನ ಪತ್ನಿ) ಆಸ್ತಿಯನ್ನು ಭಾಗ ಮಾಡಿಕೊಂಡಿದ್ದೇವೆ. ಆಸ್ತಿಯ ಎಲ್ಲ ಪಹಣಿ ಪತ್ರಗಳಲ್ಲೂ ಜಮೀನು ವಕ್ಫ್ ಆಸ್ತಿಗೆ ಒಳಪಟ್ಟಿರುತ್ತದೆ ನಮೂದಾಗಿದೆ. ಪೂರ್ವಿಕರ ಕಾಲದಿಂದಲೂ ಈ ಜಮೀನು ನಮ್ಮದು ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ’ ಎಂದರು.

‘ಅಧಿಕಾರಿಗಳು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ತಪ್ಪಾಗಿ ನಮೂದಿಸಿದ್ದಾರೆ. ತಿದ್ದುಪಡಿ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ನಮ್ಮ ಪಿತ್ರಾರ್ಜಿತ ಜಮೀನಿನ (ಸರ್ವೆ ನಂಬರ್‌ 142) ಪಹಣಿ ಪತ್ರದಲ್ಲೂ ಜಮೀನು ವಕ್ಫ್‌ ಆಸ್ತಿಗೆ ಒಳಪಟ್ಟಿರುತ್ತದೆ ಎಂದು ನಮೂದಾಗಿದೆ’ ಎಂದು ಉಪ್ಪಿನಬೆಟಗೇರಿ ಮತ್ತೊಬ್ಬ ಗ್ರಾಮಸ್ಥ ಮ‌ಲ್ಲಿಕಾರ್ಜುನ ಹುಟಗಿ ದೂರಿದರು.

ವಕ್ಫ್‌ ಅಧಿಕಾರಿಗೆ ನೋಟಿಸ್:

‘ಪಹಣಿಯಲ್ಲಿ ವಕ್ಪ್‌ ಆಸ್ತಿ ಎಂದು ನಮೂದಾಗಿರುವುದನ್ನು ತಿದ್ದುಪಡಿ ಮಾಡಿಕೊಡಬೇಕು ಉಪ್ಪಿನಬೆಟಗೇರಿ ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಜಿಲ್ಲಾ ವಕ್ಫ್‌ ಅಧಿಕಾರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ವಿಚಾರಣೆ ನಡೆಸಿ ಅವರಿಂದ ಅಭಿಪ್ರಾಯ ಪಡೆಯಲಾಗುವುದು. ವಕ್ಫ್‌ ಆಸ್ತಿ ಎಂಬುದಕ್ಕೆ ಏನಾದರೂ ದಾಖಲೆ ಇದ್ದರೆ ಅಧಿಕಾರಿ ಹಾಜರುಪಡಿಸಬೇಕು. ಪಿತ್ರಾರ್ಜಿತ ಆಸ್ತಿಯಾಗಿದ್ದರೆ ತಿದ್ದುಪಡಿ ಮಾಡಿಕೊಡುತ್ತೇವೆ’ ಎಂದು ತಹಶೀಲ್ದಾರ್‌ ದೊಡ್ಡಪ್ಪ ಹೂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.