ADVERTISEMENT

ಹುಬ್ಬಳ್ಳಿ | ಪಹಣಿಯಲ್ಲಿ ‘ವಕ್ಫ್‌’: ವಿಎಚ್‌ಪಿ–ಬಜರಂಗದಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 8:16 IST
Last Updated 11 ನವೆಂಬರ್ 2024, 8:16 IST
   

ಹುಬ್ಬಳ್ಳಿ: ‘ರಾಜ್ಯ ಸರ್ಕಾರ ವಕ್ಫ್‌ ಹೆಸರಲ್ಲಿ ರೈತರ ಜಮೀನನ್ನು ಕಬಳಿಸುತ್ತಿದ್ದು, ತಕ್ಷಣ ವಕ್ಫ್‌ ಹೆಸರು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್‌ ಬಜರಂಗದಳದ ಕಾರ್ಯಕರ್ತರು ಸೋಮವಾರ ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಬೈರಿದೇವರಕೊಪ್ಪದ ಶಿವಾನಂದ ಮಠದ ಎದುರು, ವಿದ್ಯಾನಗರದ ಕೋತಂಬ್ರಿ ಕಾಲೇಜು ಎದುರು, ಗೋಕುಲ ರಸ್ತೆ ಅಕ್ಷಯ ಪಾರ್ಕ್‌ ವೃತ್ತ, ಹಳೇಹುಬ್ಬಳ್ಳಿ ಇಂಡಿಪಂಪ್‌ ವೃತ್ತ, ಬಂಕಾಪುರ ಚೌಕ, ಗದಗ ರಸ್ತೆಯ ರಲ್ವೆ ಬ್ರಿಡ್ಜ್‌ ಮತ್ತು ಕೇಶ್ವಾಪುರದ ಸರ್ವೋದಯ ವೃತ್ತದ ಬಳಿ ‘ನಮ್ಮ ಆಸ್ತಿ–ನಮ್ಮ ಹಕ್ಕು’ ಹೆಸರಲ್ಲಿ ವಾಹನಗಳ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ನಗರದಾದ್ಯಂತ ವಾಹನಗಳ ಸಂಚಾರ ದಟ್ಟಣೆ ಏರ್ಪಟ್ಟಿತ್ತು.

ಹಳೇಹುಬ್ಬಳ್ಳಿ ಇಂಡಿಪಂಪ್‌ ವೃತ್ತದ ಬಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ಅದಕ್ಕೂ ಪೂರ್ವ ಕಾರ್ಯಕರ್ತರ ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ಸಹ ನಡೆಯಿತು.

ADVERTISEMENT

ಸಚಿವ ಜಮೀರ್‌ ಅಹ್ಮದ್‌ ರಾಜೀನಾಮೆಗೆ ಆಗ್ರಹಿಸಿದ ಕಾರ್ಯಕರ್ತರು, ‘ರೈತರ ಏಳಿಗೆಗೆ ಬಜರಂಗದಳ ಸದಾ ಸಿದ್ಧ’, ‘ವಕ್ಫ್‌ ಕಾಯ್ದೆ ರದ್ದುಗೊಳಿಸಿ, ಸಂವಿಧಾನ ಉಳಿಸಿ’, ‘ನಮ್ಮ ಆಸ್ತಿ–ನಮ್ಮ ಹಕ್ಕು’ ಬರಹದ ಫಲಕಗಳನ್ನು ಪ್ರದರ್ಶಿಸಿದರು. ತಹಶೀಲ್ದಾರ್‌, ಇನ್‌ಸ್ಪೆಕ್ಟರ್‌ಗಳಿಗೆ ಮನವಿ ಸಲ್ಲಿಸಿದರು.

‘ರೈತರ ಜಮೀನನ ಜೊತೆಗೆ ಅನ್ನದಾನ, ವಿದ್ಯಾದಾನ ಮಾಡುವ ಮಠ–ಮಂದಿರಗಳ ಆಸ್ತಿಯನ್ನು ಸಹ ವಕ್ಫ್‌ ಆಸ್ತಿಯನ್ನಾಗಿ ಮಾಡಲಾಗಿದೆ. ಇದರು ನಾಚಿಗೇಡಿನ ಸಂಗತಿಯಾಗಿದ್ದು, ಸರ್ಕಾರದ ನಡೆ ಖಂಡನೀಯವಾಗಿದೆ. ಈಗಾಗಲೇ ನೀಡಿರುವ ನೋಟಿಸ್‌ ಹಿಂಪಡೆಯಲಾಗಿದೆ. ಆದರೆ, ನಮೂದಾಗಿರುವ ವಕ್ಫ್‌ ಹೆಸರನ್ನು ಯಾವುದೇ ದಾಖಲೆಗಳಿಲ್ಲದೆ ತೆಗೆಯಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ, ಇಂತಹ ಪ್ರಕರಣಗಳನ್ನು ತಕ್ಷಣ ಇತ್ಯರ್ಥ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ’ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ವಿದ್ಯಾಣಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಗೋವರ್ಧನರಾವ್, ‘ಕಾನೂನು ಬಾಹಿರ ಕೃತ್ಯಗಳು ನಡೆದಾಗ, ಸಮಾಜಕ್ಕೆ ಅನ್ಯಾಯವಾದಾಗ ನಾವೆಲ್ಲ ಧ್ವನಿ ಎತ್ತಬೇಕು. ಉತ್ತು–ಬಿತ್ತುತ್ತಿರುವ ರೈತರ ಜಮೀನನ್ನು ವಕ್ಫ್‌ ಆಸ್ತಿ ಎಂದು ಮಾಡಿರುವುದು ಕ್ಷಮಿಸಲಾರದ ಅಪರಾಧ. ಪ್ರತಿಯೊಬ್ಬರೂ ತಮ್ಮ ಪಹಣಿ ಪತ್ರವನ್ನು ಪರಿಶೀಲಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಳ್ಳಿ–ಹಳ್ಳಿಯಲ್ಲಿ ಜಾಗೃತಿ ನಡೆಸಲಾಗುವುದು’ ಎಂದರು.

‘ನಮ್ಮ ಪ್ರತಿಭಟನೆ ಸರ್ಕಾರದ ಹಾಗೂ ಯಾರ ವಿರುದ್ಧವೂ ಅಲ್ಲ. ಅನ್ಯಾಯಕ್ಕೊಳಗಾದವರ ನೆರವಿಗೆ ನಾವಿದ್ದೇವೆ ಎಂದು ತಿಳಿಸಿ, ಜಾಗೃತಿ ಮೂಡಿಸಲು ವಿಶ್ವ ಹಿಂದೂ ಪರಿಷತ್‌ ಉತ್ತರ ಪ್ರಾಂತ ಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದು ಆರಂಭವಷ್ಟೇ, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ’ ಎಂದು ಹೇಳಿದರು.

ಶಿವಾನಂದ ಸತ್ತಿಗೇರಿ, ಸುಭಾಷ್‌ಸಿಂಗ್ ಜಮಾದರ್, ಚಿದಾನಂದ, ಕೊಟ್ರೇಶ್, ಶಶಿ, ವೀಣಾ ತಿಳವಳ್ಳಿ, ಸುಮಾ ಅಂಗಡಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.