ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ತೆರವು ಮಾಡಿದ ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ಅವರ ದರ್ಗಾ ಸ್ಥಳಕ್ಕೆ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಫಿ ಸಅದಿ ಅವರು ಸೋಮವಾರ ಭೇಟಿ ನೀಡಿದರು. ವಕ್ಫ್ ಅಧಿಕಾರಿಗಳು ಹಾಗೂ ಕೆಲ ಸದಸ್ಯರ ಜತೆ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳೀಯರಿಂದ ದರ್ಗಾಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದರು.
ದರ್ಗಾ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದ ಸಅದಿ, ಮಂಗಳವಾರ ಬೆಳಿಗ್ಗೆ ದರ್ಗಾ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ, ಸಂಜೆಯೇ ದಿಢೀರ್ ಭೇಟಿ ನೀಡಿದರು. ಆಗ ಸಮಿತಿ ಅಧ್ಯಕ್ಷರು ಸೇರಿ ಬಹುತೇಕ ಪದಾಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಸ್ಥಳದಲ್ಲಿದ್ದ ಸ್ಥಳೀಯರಿಂದಲೇ ಮಾಹಿತಿ ಪಡೆದು ಹಿಂದಿರುಗಿದರು.
‘ವಕ್ಫ್ ಮಂಡಳಿ ಅಧ್ಯಕ್ಷರು ಮಂಗಳವಾರ ಬೆಳಿಗ್ಗೆ 9.30ಕ್ಕೆ ದರ್ಗಾಗೆ ನೀಡುವುದಾಗಿ ಹೇಳಿದ್ದರು. ಬೆಳಿಗ್ಗೆ ಸಮಿತಿಯವರೆಲ್ಲರೂ ಸ್ಥಳದಲ್ಲಿದ್ದು ಅವರಿಗೆ ಅಗತ್ಯ ಮಾಹಿತಿ ನೀಡಬೇಕೆಂದು ನಿರ್ಧರಿಸಿದ್ದೆವು. ಆದರೆ, ಸಂಜೆಯೇ ಭೇಟಿ ನೀಡಿದ್ದರಿಂದ, ಬೇರೆ ಕಡೆ ಇದ್ದ ನಮಗೂ ಬರಲಾಗಲಿಲ್ಲ. ಬಳಿಕ, ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟೆವು’ ಎಂದು ಸಮಿತಿ ಅಧ್ಯಕ್ಷ ಮುನ್ನಾ ಹೆಬ್ಬಳ್ಳಿ ತಿಳಿಸಿದರು.
ಬಿಆರ್‌ಟಿಎಸ್ ಕಾರಿಡಾರ್ ಮಾರ್ಗದಲ್ಲಿದ್ದ ದರ್ಗಾವನ್ನು ಜಿಲ್ಲಾಡಳಿತವು ಡಿ.21ರಂದು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.