ADVERTISEMENT

'ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ’ಕ್ಕೆ ಸ್ವಾಗತ...

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ‘ಅಜ್ಜ’ನ ಹೆಸರು, ಭಕ್ತರಲ್ಲಿ ಸಡಗರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 2:43 IST
Last Updated 10 ಸೆಪ್ಟೆಂಬರ್ 2020, 2:43 IST
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ನೋಟ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ನೋಟ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಗೆ ರೈಲಿನಲ್ಲಿ ಬರುವ ಪ್ರಯಾಣಿಕರಿಗೆ ಇನ್ನು ಮುಂದೆ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ’ಕ್ಕೆ ಸ್ವಾಗತ ಎನ್ನುವ ಘೋಷಣೆ ಕೇಳಿ ಬರಲಿದೆ.

ಉತ್ತರ ಕರ್ನಾಟಕದ ಜನರ ಆರಾಧ್ಯ ದೈವ ಸಿದ್ಧಾರೂಢರ ಹೆಸರು ರೈಲು ನಿಲ್ದಾಣಕ್ಕೆ ನಾಮಕರಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಸುದ್ದಿ ಬುಧವಾರ ಮಧ್ಯಾಹ್ನದ ವೇಳೆಗೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದಂತೆ ‘ಅಜ್ಜ’ನ ಕರ್ಮಭೂಮಿ ಹುಬ್ಬಳ್ಳಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಒಂದು ದಶಕದ ನಿರಂತರ ಹೋರಾಟಕ್ಕೆ ಫಲ ಲಭಿಸಿದ ಸಡಗರ ಭಕ್ತರಲ್ಲಿತ್ತು. 2019ರ ನವೆಂಬರ್‌ 22ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಕುರಿತು ಕೇಂದ್ರಕ್ಕೆ ಪತ್ರ ಬರೆದು ರೈಲು ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು ನಾಮಕರಣ ಮಾಡಲು ಶಿಫಾರಸು ಮಾಡಿದ್ದರು.

ಸಿದ್ಧಾರೂಢರ ಹೆಸರನ್ನು ಇಲ್ಲಿನ ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಬೇಕು ಎನ್ನುವ ಕೂಗು ಮೊದಲಿನಿಂದಲೂ ಭಕ್ತರಿಂದ ಕೇಳಿಬಂದಿತ್ತು. 2009ರಲ್ಲಿ ಮಹೇಂದ್ರ ಸಿಂಘಿ ಅವರು ಸಿದ್ಧಾರೂಢ ಮಠ ಟ್ರಸ್ಟ್‌ ಸಮಿತಿ ಅಧ್ಯಕ್ಷರಾಗಿದ್ದಾಗ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್‌. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿ ಸಿದ್ಧಾರೂಢರ ಹೆಸರು ನಾಮಕರಣ ಮಾಡುವ ಅಗತ್ಯತೆಯ ಮನವರಿಕೆ ಮಾಡಿಕೊಟ್ಟಿದ್ದರು. ಆಗ ಅವರು ರೈಲ್ವೆ ಸಲಹಾ ಸಮಿತಿ ಸದಸ್ಯರು ಕೂಡ ಆಗಿದ್ದರು.

ADVERTISEMENT

ಆಗ ಆರಂಭವಾದ ಬೇಡಿಕೆಯ ಆಗ್ರಹ ನಿರಂತರವಾಗಿ ಮುಂದುವರಿಯಿತು. ಇದಕ್ಕೂ ಮೊದಲು ಒಂದು ರೈಲಿಗೆ ಮಾತ್ರ ಸಿದ್ಧಾರೂಢರ ಹೆಸರು ನಾಮಕರಣ ಮಾಡಬೇಕು ಎನ್ನುವ ಬೇಡಿಕೆಯಿತ್ತು. 2015ರಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಎಂದು ಹೆಸರು ನಾಮಕರಣಕ್ಕೆ ಕೇಂದ್ರ ಒಪ್ಪಿಗೆ ಕೊಟ್ಟ ಬಳಿಕ ಇಲ್ಲಿಯೂ ಪ್ರಯತ್ನದ ಸ್ವರೂಪ ಬದಲಾಯಿತು. ಒಂದು ರೈಲಿಗೆ ಬದಲು ರೈಲ್ವೆ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು ಇಡಬೇಕು ಎನ್ನುವ ಆಗ್ರಹದ ದನಿ ಗಟ್ಟಿಯಾಗಿ ಮೊಳಗಿತು.

ಹೋರಾಟದ ದಿನಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಮಹೇಂದ್ರ ಸಿಂಘಿ ‘ರೈಲ್ವೆ ಸಚಿವರಾಗಿದ್ದ ಸುರೇಶ ಪ್ರಭು, ಮನೋಜ್‌ ಸಿನ್ಹಾ, ಕೆ.ಎಚ್‌. ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್‌ ಹೀಗೆ ಮಠಕ್ಕೆ ಭೇಟಿ ನೀಡಿದ್ದ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿದ್ದೆವು. ಮುಂಬೈನ ರೈಲು ನಿಲ್ದಾಣಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಮತ್ತು ದೆಹಲಿ ನಿಲ್ದಾಣಕ್ಕೆ ಹಜರತ್‌ ನಿಜಾಮುದ್ದೀನ್‌ ಅವರ ಹೆಸರು‌ ನಾಮಕರಣ ಮಾಡಲಾಗಿದೆ. ಆದ್ದರಿಂದ ಹುಬ್ಬಳ್ಳಿಗೆ ಸಿದ್ಧಾರೂಢ ಸ್ವಾಮೀಜಿ ಹೆಸರು ಇಡಬೇಕು ಎಂದು ಒತ್ತಾಯಿಸಲಾಗಿತ್ತು. ಅದಕ್ಕೆ ಈಗ ಫಲ ಲಭಿಸಿದೆ’ ಎಂದು ನೆನಪಿಸಿಕೊಂಡರು.

‘ಸಿದ್ಧಾರೂಢರ ಮಠಕ್ಕೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ್‌ ಮತ್ತು ಗ್ಯಾನಿ ಜೈಲ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಬಹಳಷ್ಟು ಭಕ್ತರು ರೈಲಿನ ಮೂಲಕವೇ ಅಜ್ಜನ ದರ್ಶನ ಪಡೆಯಲು ಬರುವುದರಿಂದ ನಿಲ್ದಾಣಕ್ಕೆ ಅವರ ಹೆಸರನ್ನೇ ನಾಮಕರಣ ಮಾಡಿದ್ದು ಖುಷಿ ಹೆಚ್ಚಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.