ಹುಬ್ಬಳ್ಳಿ: ‘ಡಿಜಿಟಲ್ ಅರೆಸ್ಟ್’ ಮೂಲಕ ಹಣ ಲಪಟಾಯಿಸುವ ಸೈಬರ್ ವಂಚಕರು ಈಗ ‘ಎಪಿಕೆ’ ತಂತ್ರಾಂಶದ ಫೈಲ್ ಮೂಲಕ ವಾಟ್ಸ್‌ಆ್ಯಪ್ ಗ್ರೂಪ್ ‘ಹ್ಯಾಕ್’ ಮಾಡತೊಡಗಿದ್ದಾರೆ. ವೈಯಕ್ತಿಕ ಮತ್ತು ಬ್ಯಾಂಕ್ ವಿವರ ಪಡೆದು, ಜನರನ್ನು ವಂಚಿಸುವ ಮತ್ತು ಮಾಹಿತಿ ದುರ್ಬಳಕೆ ಮಾಡುವ ಹೊಸ ಮಾರ್ಗ ಕಂಡುಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಇಂತಹ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ‘ಕೆಲವರು ಮೌಖಿಕವಾಗಿ ಗಮನಕ್ಕೆ ತಂದಿದ್ದಾರೆ. ಇದರ ಕುರಿತು ಪರಿಶೀಲನೆ ನಡೆಸಿದ್ದೇವೆ’ ಎಂದು ಹುಬ್ಬಳ್ಳಿ ಸೈಬರ್ ಠಾಣೆ ಸಿಬ್ಬಂದಿ ಹೇಳುತ್ತಾರೆ.
ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆ ಆಗುವ ಹ್ಯಾಕರ್‌ಗಳು, ವಿವಿಧ ಬ್ಯಾಂಕ್‌ಗಳ ಹೆಸರಲ್ಲಿ ಅಭಿವೃದ್ಧಿಪಡಿಸಿರುವ ಎಐ ಎಪಿಕೆ ಫೈಲ್‌ಗಳನ್ನು ಕಳುಹಿಸಿ, ಕೆವೈಸಿ ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಅಲ್ಲದೆ, ಗ್ರೂಪ್ ಹೆಸರು ಸಹ ಬದಲಾಯಿಸಿ ಬ್ಯಾಂಕ್ ಹೆಸರು ಇಡುತ್ತಾರೆ. ಹಾಗೆ ಸಂದೇಶ ಕಳುಹಿಸುವ ಮೊಬೈಲ್ ನಂಬರ್‌ಗೂ ಬ್ಯಾಂಕ್ ಹೆಸರನ್ನೇ ಇಟ್ಟಿರುತ್ತಾರೆ. ಸೈಬರ್ ವಂಚನೆ ಕುರಿತು ಅರಿವಿಲ್ಲದವರು ಎಪಿಕೆ ಪೈಲ್ ಕ್ಲಿಕ್ ಮಾಡಿದರೆ ಸಾಕು, ಯಾವ ಅನುಮತಿಯೂ ಕೇಳದೆ ತಕ್ಷಣ ಮೊಬೈಲ್ ಫೋನ್‌ಗೆ ಹ್ಯಾಕಿಂಗ್ ಆ್ಯಪ್(ಎಪಿಕೆ ಫೈಲ್) ಇನ್‌ಸ್ಟಾಲ್ ಆಗುತ್ತದೆ.
ಅದರ ಮೂಲಕ ವಂಚಕರು ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿ, ಫೋಟೊ, ಸಂಪರ್ಕ ಸಂಖ್ಯೆ, ಬ್ಯಾಂಕ್ ವಿವರ, ಪಾಸ್‌ವರ್ಡ್ ಸೇರಿದಂತೆ ಎಲ್ಲವನ್ನೂ ಸುಲಭವಾಗಿ ಕಳವು ಮಾಡುತ್ತಾರೆ ಎಂದು ಸೈಬರ್ ಪೊಲೀಸರು ಹೇಳುತ್ತಾರೆ.
ರಹಸ್ಯವಾಗಿರುವ ಫೈಲ್: ‘ಯಾರದ್ದೋ ಒಬ್ಬರ ಮೊಬೈಲ್ ಫೋನ್‌ಗೆ ಗೊತ್ತಿಲ್ಲದೆ ಎಪಿಕೆ ಫೈಲ್ ಇನ್‌ಸ್ಟಾಲ್ ಆಗಿರುತ್ತದೆ. ಆ ಫೈಲ್ ಮೊಬೈಲ್ ಪರದೆಯ ಮೇಲೆ ಕಾಣುವುದಿಲ್ಲ, ರಹಸ್ಯವಾಗಿ ಅಡಗಿರುತ್ತದೆ. ಅದರ ಸಹಾಯದಿಂದ ಹ್ಯಾಕರ್ ಆ ವ್ಯಕ್ತಿಯ ಮಾಹಿತಿ ಕದ್ದು, ಅವನದ್ದೇ ಮೊಬೈಲ್‌ನಲ್ಲಿರುವ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಬೇರೊಂದು ಮೊಬೈಲ್ ನಂಬರ್‌ನಿಂದ ಸೇರಿಕೊಳ್ಳುತ್ತಾನೆ. ಸ್ವಲ್ಪದಿನ ಅ ಗ್ರೂಪ್‌ನ ಚಟುವಟಿಕೆ ಗಮನಿಸಿ, ಬ್ಯಾಂಕ್ ಹೆಸರಲ್ಲಿ ಸಿದ್ಧಪಡಿಸಿರುವ ಕುತಂತ್ರಾಂಶದ ಎಪಿಕೆ ಫೈಲ್ ಕಳುಹಿಸಿ, ‘ಆಧಾರ್ ಕಾರ್ಡ್ ಅಪ್ಡೇಟ್ ಅಗದ ಕಾರಣ ನಿಮ್ಮ ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಲಾಗುತ್ತಿದೆ, ತಕ್ಷಣ ಬ್ಯಾಂಕ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಆಧಾರ್ ಅಪ್ಡೇಟ್ ಮಾಡಿ’ ಎಂದು ಸಂದೇಶ ರವಾನಿಸುತ್ತಾನೆ’ ಎಂದು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ವಿವರಿಸಿದರು.
‘ಎಪಿಕೆ ಆ್ಯಪ್ ಮೊಬೈಲ್ ಫೋನ್‌ನಲ್ಲಿರುವ ಎಲ್ಲ ಮಾಹಿತಿ ಹುಡುಕಾಡಿ ಸಂಗ್ರಹಿಸಿಕೊಂಡು ಅದನ್ನು ಸಿದ್ಧಪಡಿಸಿದ ವಂಚಕರಿಗೆ ಅವುಗಳನ್ನೆಲ್ಲ ರವಾನಿಸುತ್ತದೆ. ಒಂದರ್ಥದಲ್ಲಿ ನಮ್ಮ ಮೊಬೈಲ್ ಫೋನ್ ಸಂಪೂರ್ಣ ವಂಚಕರ ಹಿಡಿತಕ್ಕೆ ಕೊಟ್ಟಂತೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವಾಗ ಬರುವ ಒಟಿಪಿ ಸಹ ಅವರಿಗೆ ನಾವು ಹೇಳಬೇಕಿಲ್ಲ ತಮ್ಮಲ್ಲಿರುವ ಕಂಪ್ಯೂಟರ್ ಅಥವಾ ಫೋನ್ ಮೂಲಕವೇ ಅದನ್ನು ಪಡೆಯುತ್ತಾರೆ. ಎಲ್ಲೋ ಕುಳಿತು ಸುಲಭವಾಗಿ ಕ್ಷಣಮಾತ್ರದಲ್ಲಿ ನಮ್ಮ ಬ್ಯಾಂಕ್ ಖಾತೆ ಬರಿದಾಗಿಸಬಹುದು. ಯಾವುದೇ ಕಾರಣಕ್ಕೂ ಅಪರಿಚಿತ ಮೂಲದಿಂದ ಬಂದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲೇಬಾರದು’ ಎಂದು ಎಸಿಪಿ ಶಿವರಾಜ ಕಟಕಬಾವಿ ಹೇಳುತ್ತಾರೆ.
ವಂಚಕರ ಗಾಳಕ್ಕೆ ಸಿಲುಕದಿರಲು ಅಧಿಕೃತ ಪ್ಲೇ ಸ್ಟೋರ್‌ನಿಂದ ಮಾತ್ರ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಗೊತ್ತಿಲ್ಲದ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬಾರದು. ಜಾಗ್ರತೆಯೊಂದೇ ಪರಿಹಾರ-ಶಿವರಾಜ ಕಟಕಬಾವಿ ಎಸಿಪಿ ಸೈಬರ್ ಕ್ರೈಂ ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.