ADVERTISEMENT

ಹುಬ್ಬಳ್ಳಿ- ಧಾರವಾಡ: ಅವಳಿ ನಗರದ ಸಮಸ್ಯೆಗಳಿಗೆ ಕೊನೆ ಯಾವಾಗ?

ಮಳೆಯಾದಾಗಲೆಲ್ಲ ಮನೆಗಳಿಗೆ ನುಗ್ಗುವ ಕೊಳಚೆ ನೀರು: ನಿವಾಸಿಗಳಿಗೆ ತಪ್ಪದ ಗೋಳು

ಬಿ.ಜೆ.ಧನ್ಯಪ್ರಸಾದ್
ಪೂರ್ಣಿಮಾ ಗೊಂದೆನಾಯ್ಕರ
Published 24 ಜೂನ್ 2024, 4:37 IST
Last Updated 24 ಜೂನ್ 2024, 4:37 IST
ಹಳೇಹುಬ್ಬಳ್ಳಿಯ ಪಾಂಡುರಂಗ ಕಾಲೊನಿ ಹತ್ತಿರ ಇರುವ ರಾಜನಾಲಾ
ಹಳೇಹುಬ್ಬಳ್ಳಿಯ ಪಾಂಡುರಂಗ ಕಾಲೊನಿ ಹತ್ತಿರ ಇರುವ ರಾಜನಾಲಾ   

ಹುಬ್ಬಳ್ಳಿ: ಅವಳಿನಗರದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ನಗರದ ಬಹುತೇಕ ಕಡೆ ಸಮಸ್ಯೆ ತಾರಕಕ್ಕೇರುತ್ತದೆ. ಮುಖ್ಯ ರಸ್ತೆಗಳೇ ಜಲಾವೃತವಾಗಿ ಜನರಿಗೆ ನೂರೆಂಟು ಸಂಕಷ್ಟಗಳು ತಲೆದೋರುತ್ತವೆ. ಇನ್ನೂ ನಾಲಾಗಳ ಸುತ್ತಮುತ್ತಲಂತೂ ಜನಜೀವನ ಮಳೆಗಾಲದಲ್ಲಿ ಕಷ್ಟವಾಗಿದೆ. ನಗರದಲ್ಲಿ ಅಲ್ಲಲ್ಲಿ ಚರಂಡಿ, ಒಳಚರಂಡಿ ಸಮಸ್ಯೆಗಳಿಂದ ನೀರು ಸರಾಗವಾಗಿ ಹರಿದು ಹೋಗದೇ, ಅಪಾರ್ಟ್ಮೆಂಟ್‌ ಒಳಗಡೆ, ರಸ್ತೆ ಮೇಲೆ ನೀರು ನಿಂತು ಅವಾಂತರ ಸೃಷ್ಟಿಸುತ್ತಿದೆ. ಹೀಗಾಗಿ ನಗರದ ಜನರು ಮಳೆಗಾಲ ಬಂತೆಂದರೆ ಚಿಂತೆಗೆ ಜಾರುತ್ತಾರೆ.

ಹುಬ್ಬಳ್ಳಿಯ ತುಳಜಾಭವಾನಿ ವೃತ್ತ, ಕಾಟನ್‌ ಮಾರ್ಕೆಟ್‌, ಮ್ಯಾದರ ಓಣಿ, ದೇಶಪಾಂಡೆ ನಗರ, ಹಳೇಹುಬ್ಬಳ್ಳಿ ಚೆನ್ನಪೇಟೆಯ ಗುಡಿಓಣಿಯ ಪಾಂಡುರಂಗ ಕಾಲೊನಿ, ಹಳೇಹುಬ್ಬಳ್ಳಿ ಗಾಂಧಿನಗರ, ಕಮರಿಪೇಟೆ, ದಾಜಿಬಾನ್ ಪೇಟೆ, ಗಣೇಶ ನಗರ, ಉಣಕಲ್‌ನಿಂದ ವಿದ್ಯಾನಗರ ವ್ಯಾಪ್ತಿಯ ರಾಜನಾಲ ವ್ಯಾಪ್ತಿಯ ಪ್ರದೇಶ, ಬಿಆರ್‌ಟಿಎಸ್‌ ಹೊಸೂರ ರಸ್ತೆಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗುತ್ತದೆ.

ಧಾರವಾಡ ಇದಕ್ಕೆ ಹೊರತಾಗಿಲ್ಲ. ಮಳೆಯಾದಾಗ ಕೆಎಂಎಫ್‌ ಮತ್ತು ಎನ್‌ಟಿಟಿಎಫ್‌ ಮುಂಭಾಗದ ರಸ್ತೆಯಲ್ಲಿ ನೀರು ಆವರಿಸುತ್ತದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹರ ಸಾಹಸ ಪಡಬೇಕಾಗುತ್ತದೆ . ನೀರಿನ ರಸ್ತೆಯಲ್ಲಿ ಸಾಗುವಾಗ ಆಯತಪ್ಪಿ ಬೈಕ್ ಸವಾರರು ಬಿದ್ದು ಪೆಟ್ಟಾಗಿರುವ ಉದಾಹರಣೆಗಳು ಇವೆ. ಸಾರ್ವಜನಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಜಲಾವೃತ ರಸ್ತೆ ದಾಟಲು ಪಡುವ ಪಡಿಪಾಟಲು ಹೇಳತೀರದರು.

ADVERTISEMENT

ಟೋಲ್‌ ನಾಕಾ ಪ್ರದೇಶ, ಯಾಲಕ್ಕಿಶೆಟ್ಟರ ಬಡಾವಣೆ ಸಹಿತ ಕೆಲವೆಡೆಗಳಲ್ಲಿ ಚರಂಡಿ ತುಂಬಿ ನೀರು ರಸ್ತೆಗೆ ಹೊರಳುತ್ತದೆ. ಸುಮಾರು ಒಂದು ತಿಂಗಳ ಮಳೆಯಾದಾಗ ಹಾವೇರಿಪೇಟ್‌ ಪ್ರದೇಶದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿತ್ತು.

ಮೇ, ಜೂನ್‌ ತಿಂಗಳಲ್ಲಿ ಸುರಿದ ಮೊದಲ ಮಳೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಸಾಕಷ್ಟು ಅನಾಹುತ ಸೃಷ್ಟಿಯಾಗಿತ್ತು. ಹಲವಾರು ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿತ್ತು. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ನಾಲಾಗಳಂತೂ ಕಸ ತುಂಬಿ ನಾಲಾ ಸುತ್ತಮುತ್ತಲಿನ ಜನರ ಮನೆಗಳಿಗೆ ಕಸ ತುಂಬಿಕೊಂಡತ್ತಾಗಿತ್ತು. ಹಳೇಹುಬ್ಬಳ್ಳಿ ಚೆನ್ನಪೇಟೆಯ ಗುಡಿಓಣಿಯ ಪಾಂಡುರಂಗ ಕಾಲೊನಿಯ ಮನೆಗಳಿಗೆ ಮಳೆಯಿಂದಾಗಿ ಕೊಳಚೆ ನೀರು ನುಗ್ಗಿದ್ದರಿಂದ ಮನೆ ತುಂಬಾ ಗಬ್ಬು ವಾಸನೆಯಿಂದ ಬೇಸತ್ತ ನಿವಾಸಿಗರು, ದೇವಸ್ಥಾನ, ಪರಿಚಯಸ್ಥರ ಮನೆಗಳಿಗೆ ತೆರಳಿ ಆಶ್ರಯ ಪಡೆದುಕೊಂಡರು.

ಹಲವೆಡೆ ಚರಂಡಿಗಳಲ್ಲಿ ತ್ಯಾಜ್ಯ, ಪ್ಲಾಸ್ಟಿಕ್‌ ಪೊಟ್ಟಣ, ಖಾಲಿ ಬಾಟಲಿ ಬಿದ್ದಿವೆ. ನಿರ್ವಹಣೆ ಕೊರತೆಯಿಂದಾಗಿ ಚರಂಡಿಗಳು ಅಧ್ವಾನವಾಗಿವೆ. ಕೆಲಗೇರಿ ಕೆರೆ ಪಕ್ಕದ ಕಾಂಕ್ರಿಟ್‌ ರಸ್ತೆ (ಕೆಸಿಡಿ ಕಡೆಗೆ ಸಾಗುವ ಮಾರ್ಗ) ಇಕ್ಕೆಲದಲ್ಲಿ ಚರಂಡಿ ಇದೆ. ಆದರೆ ಚರಂಡಿಯ ಹಲವೆಡೆ ನೀರು ತುಂಬಿಕೊಂಡಿದೆ. ಮಳೆಯಾದಾಗ ಚರಂಡಿ ನೀರು ರಸ್ತೆಗೆ ಹೊರಳುತ್ತದೆ.

‘ಸಾಧಾರಣ ಮಳೆಯಾದರೂ ಇಲ್ಲಿನ 30ಕ್ಕೂ ಹೆಚ್ಚು ಮನೆಗಳಲ್ಲಿ ಗಟಾರದ ಕೊಳಚೆ ನೀರು ನುಗ್ಗುತ್ತದೆ. ಇಲ್ಲಿ ಬಹುತೇಕ 15X20 ಅಡಿ ಅಳತೆಯ ಸಣ್ಣ ಸಣ್ಣ ಮನೆಗಳಿವೆ. ದಿನಗೂಲಿ ಕಾರ್ಮಿಕರೇ ಹೆಚ್ಚು ಇಲ್ಲಿ ವಾಸವಾಗಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಕೊಳಚೆ ನೀರು ಮನೆಯೊಳಗೆ ನುಗ್ಗುತ್ತದೆ. ಕೂಲಿ ಹಣದಿಂದ ಖರೀದಿಸಿ ತಂದಿದ್ದ ಅಕ್ಕಿ, ಜೋಳ, ಹಿಟ್ಟು ಸೇರಿದಂತೆ ಎಲ್ಲಾ ದಿನಸಿ ವಸ್ತುಗಳು ಕೊಳಚೆ ನೀರಿನ ಪಾಲಾಗಿವೆ. ಇದರಿಂದ ನಮಗೆ ಊಟ ಮಾಡಲೂ ಕಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೊಳಚೆ ನೀರು ಮನೆಯೊಳಗೆ ನುಗ್ಗದಂತೆ ಕ್ರಮಕೈಗೊಳ್ಳಬೇಕು’ ಎಂದು ಪಾಂಡುರಂಗ ಕಾಲೊನಿಯ ನಿವಾಸಿ ಪರುಶುರಾಮ ಪೂಜಾರಿ ಅಳಲು ತೋಡಿಕೊಂಡರು.

‘ಮಳೆಯಾದಾಗ ಕೆಎಂಎಫ್‌, ಎನ್‌ಟಿಟಿಎಫ್‌ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಮಾಡಬೇಕು. ಹಲವು ಬಾರಿ ಸಮಸ್ಯೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು, ಸದಸ್ಯರ ಗಮನಕ್ಕೆ ತಂದ್ದಿದ್ದೇವೆ. ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಿಲ್ಲ’ ಎಂದು ಧಾರವಾಡದ ಯಾಲಕ್ಕಿ ಶೆಟ್ಟರ ಬಡಾವಣೆ ನಿವಾರಿಸಿ ಸುವರ್ಣಾ ಗಿರಿಯಣ್ಣವರ್‌ ದೂರುತ್ತಾರೆ.

ಹಳೇಹುಬ್ಬಳ್ಳಿಯ ಪಾಂಡುರಂಗ ಕಾಲೊನಿಗೆ ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ಕೊಳಚೆ ನೀರನ್ನು ನಿವಾಸಿಗರು ಸಂಗ್ರಹಿಸಿ ತೊರಿಸುತ್ತಿರುವುದು

ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರಂತರ ಶ್ರಮಿಸುತ್ತಿದ್ದೇವೆ. ನಾಲಾ ಸ್ವಚ್ಛಗೊಳಿಸಲಾಗಿದ್ದು ಸಮಸ್ಯೆ ಕಂಡು ಬಂದಲ್ಲಿ ಜನರು ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು

-ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಮಳೆ ಬಂದರ ಚಿಂತಿ ಸುರುವಾಗತ್ತೈತ್ರಿ. ರಾತ್ರಿ ನಿದ್ದಿ ಹತ್ತಲರ‍್ರಿ ಮಕ್ಕಳ ಮರಿ ಕಟಗೊಂಡ ದೇವಸ್ಥಾನದಲ್ಲಿ ದಿನ ಕಳಿವಂಗ ಆಗುತ್ತದೆ ಮಳೆಗಾಲದಾಗ. ಪ್ರತಿ ವರ್ಷ ಇದೇ ಸಮಸ್ಯೆ ನೋಡ್ರಿ

-ಸುಕನ್ಯಾ ಹತ್ತಲಗೇರಿ ನಿವಾಸಿ ಚೆನ್ನಪೇಟೆಯ ಗುಡಿಓಣಿಯ ಪಾಂಡುರಂಗ ಕಾಲೊನಿ

ಮನೆಗೆ ಮಳೆ ನೀರು ನುಗ್ಗುವುದರಿಂದ ನೀರು ಹೊರ ಚೆಲ್ಲುವುದೇ ದೊಡ್ಡ ಚಿಂತಿ. ಮನೆಯಲ್ಲ ಕೊಳಚೆ ವಾಸನೆಯಿಂದ ತುಂಬಿರುತ್ತದೆ. ಸ್ವಚ್ಛ ಮಾಡುವುದೇ ದೊಡ್ಡ ತಲೆನೋವು

-ಸುಶೀಲಾಬಾಯಿ ಮೇಘರಾಜ ಹಳೇಹುಬ್ಬಳ್ಳಿಯ ನೂರಾಣಿ ಪ್ಲಾಟ್‌ ನಿವಾಸಿ

25 ‘ಡಿ’ ಸೆಲ್ಟಿಂಗ್ ಮಷಿನ್ ಖರೀದಿ

ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿ ಅಪಾರ್ಟ್ಮೆಂಟ್‌ನಲ್ಲಿ ಮಳೆಯಿಂದಾಗಿ ನೀರು ನಿಂತು ತೊಂದರೆ ಉಂಟಾಗುತ್ತಿರುವುದರಿಂದ ಪಾಲಿಕೆಯಿಂದ 25 ‘ಡಿ’ ಸೆಲ್ಟಿಂಗ್ ಮಷಿನ್ 12 ಸಬ್‌ಮರ್ಷಿಬಲ್ ಪಂಪ್ ಖರೀದಿಗೆ ಮುಂದಾಗಿದೆ. ಚರಂಡಿ ಸ್ವಚ್ಛತೆ ಮಾಡಲು 18 ‘ಡಿ’ ಸೆಲ್ಟಿಂಗ್ ಜೆಟ್ಟಿಂಗ್ ಮಷಿನ್ ಕಾರ್ಯ ಮಾಡಲಿವೆ. ಅಪಾರ್ಟ್ಮೆಂಟ್‌ಗೆ ನುಗ್ಗುವ ನೀರು ಹೊರ ಹಾಕಲು ಪಾಲಿಕೆಯ ವಲಯವ್ಯಾಪ್ತಿಗೆ ಒಂದರಂತೆ ಒಟ್ಟು 12 ಸಬ್‌ಮರ್ಷಿಬಲ್ ಪಂಪ್ ಖರೀದಿಸಲಾಗುತ್ತಿದೆ. ಇದಕ್ಕೆ ಟೆಂಡರ್ ಕರೆಯಲಾಗಿದೆ. ಪಾಲಿಕೆಯಲ್ಲಿ ಸದ್ಯ 19 ಜೆಟ್ಟಿಂಗ್ ಮಷಿನ್ 1 ಸೂಪರ ಶಕ್ಕರ್ ಇದ್ದು ವಲಯವಾರು 10 ಜೆಸಿಬಿ ಇದ್ದು ಅವು ಕೂಡಾ ನಿರಂತರ ಕಾರ್ಯದಲ್ಲಿ ಇರಲಿವೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಪ್ರತಿ ವಲಯಕ್ಕೆ ಮೂರು ತಂಡ ಮಳೆಯಿಂದ ಅವಳಿನಗರದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಜನರಿಗೆ ಪರಿಹಾರ ಒದಗಿಸಲು ಮಹಾನಗರ ಪಾಲಿಕೆಯಿಂದ ಪ್ರತಿ ವಲಯ ವ್ಯಾಪ್ತಿಯಲ್ಲಿ 3 ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಪೌರ ಕಾರ್ಮಿಕರು ಎಂಜಿನಿಯರ್‌ಗಳು ಅಧಿಕಾರಿಗಳನ್ನು ಒಳಗೊಂಡ 8 ರಿಂದ 9 ಜನರ ತಂಡ ರಚಿಸಲಾಗಿದೆ. ವಲಯ ಸಹಾಯಕ ಆಯುಕ್ತರು ಅಭಿಯಂತರು ಆರೋಗ್ಯ ನಿರೀಕ್ಷಕರು ಹಾಗೂ ಪೌರಕಾರ್ಮಿಕರು 24x7 ಕಾರ್ಯನಿರ್ವಹಿಸುತ್ತಿದ್ದಾರೆ.

‘ಸಮಸ್ಯೆಯಿದ್ದಲ್ಲಿ ತಕ್ಷಣವೇ ಕರೆ ಮಾಡಿ’

ಮಳೆಯಿಂದ ಅವಳಿನಗರದಲ್ಲಿ ಎಂಥದ್ದೇ ಸಮಸ್ಯೆ ತಲೆದೋರಿದರೂ ಸಾರ್ವಜನಿಕರು ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ವಾಟ್ಸ್‌ಆ್ಯಪ್ ಮೂಲಕವೂ ಸಂದೇಶ ಕಳುಹಿಸಿ ಸಮಸ್ಯೆ ವಿವರಿಸಬಹುದು. ಸಹಾಯವಾಣಿ ಸಂಖ್ಯೆ: 8277803778. ದೂರವಾಣಿ ಸಂಖ್ಯೆ: 0836–2213888/2213889 ಅಥವಾ 2213869.

ರಾಜಾನಾಲಾ ಸ್ವಚ್ಛತೆ

ಆನಂದ ನಗರ ಮೇನ್ ರೋಡ ಗುಡಿ ಓಣಿ ಶಿವಾಜಿ ಪ್ಲಾಟ್ ಸ್ಮಶಾನ ಗೌಸಿಯಾ ಟೌನ್‌ ಬ್ರಿಡ್ಜ್ ರಾಜೀವ ಗಾಂಧಿ ಸ್ಕೂಲ್‌ ಎಸ್.ಎಂ ಕೃಷ್ಣಾನಗರ ಪ್ರದೇಶಗಳಲ್ಲಿ 4.08 ಕಿ.ಮೀ ನಾಲಾವನ್ನು 5 ಜೆ.ಸಿ.ಬಿ ಮತ್ತು 7 ಹಿಟ್ಯಾಚಿ ಬಳಸಿ ಸ್ವಚ್ಛಗೊಳಿಸಲಾಗಿದೆ. ಕಾಟನ್ ಮಾರ್ಕೆಟ್ ಮ್ಯಾದಾರ ಓಣಿ ತುಳಜಾಭವಾನಿ ಸರ್ಕಲ್ ದೇಶಪಾಂಡೆ ನಗರ ಕಮರಿಪೇಟ್ ಹಾಗೂ ಜಿ ಅಡ್ಡೆ ಪ್ರದೇಶಗಳಲ್ಲಿ 0.8 ಕಿ.ಮೀನಷ್ಟು ನಾಲಾ ದೋಭಿ ಘಾಟದಿಂದ ಕರ್ಕಿಬಸವೇಶ್ವರ ಬ್ರಿಡ್ಜ್ ರಂಭಾಪುರಿ ರಾಯರ ಮಠದಿಂದ ಶ್ರೀರಾಮ ಕಾಲೊನಿವರೆಗಿನ ಪ್ರದೇಶಗಳಲ್ಲಿ 2.5 ಕಿ.ಮೀ ನಷ್ಟು ನಾಲಾ ಸ್ವಚ್ಛತೆ ಮಾಡಲಾಗಿದೆ. ಶೇ 90ರಷ್ಟು ರಾಜಾ ನಾಲಾ ಸ್ವಚ್ಛತೆ ಮಾಡಲಾಗಿದೆ. ಕಸ ಕಟ್ಟದಂತೆ ನೋಡಿಕೊಳ್ಳಲು ಪಾಲಿಕೆಯ 7 ಸಾವಿರ ಜನ ಪೌರ ಕಾರ್ಮಿಕರನ್ನು ನಾಲಾ ಸ್ವಚ್ಛತೆಗೆ ನಿತ್ಯ ಗಮನ ಹರಿಸುವಂತೆ ಜವಾಬ್ದಾರಿ ವಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.