ADVERTISEMENT

ಯಡಿಯೂರಪ್ಪ ಅವರನ್ನು ಮುಟ್ಟಿದರೆ ಸುಮ್ಮನಿರಲ್ಲ: ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 12:54 IST
Last Updated 25 ಅಕ್ಟೋಬರ್ 2019, 12:54 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಹುಬ್ಬಳ್ಳಿ: ‘ರಾಜ್ಯದಲ್ಲಿ ಲಿಂಗಾಯತರು ಮುಖ್ಯಮಂತ್ರಿಯಾದಾಗಲೆಲ್ಲ ಅವರಿಗೆ ವಿನಾಕಾರಣ ತೊಂದರೆ ಕೊಡುವ ಪ್ರಯತ್ನಗಳು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಯಡಿಯೂರಪ್ಪ ಅವರಿಗೆ ತೊಂದರೆ ನೀಡಿ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ಸುಮ್ಮನಿರುವುದಿಲ್ಲ’ ಎಂದುಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನವನ್ನು ಕೈಬಿಟ್ಟು ಅವಧಿ ಮುಗಿಯುವ ತನಕ ಸುಮ್ಮನಿರಬೇಕು. ಇಲ್ಲವಾದರೆ ಲಿಂಗಾಯತ ಸಮಾಜದ ಸಮಾನ ಮನಸ್ಕ ಸ್ವಾಮೀಜಿಗಳು ಸೇರಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅಡ್ಡಾಡಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದುಡಿದಿದ್ದಾರೆ. ಈಗ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವು ಕಲ್ಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಸ್ಪಂದನೆ ದೊರೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮಳೆ ಅನಾಹುತದಿಂದ ಚೇತರಿಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕದ ಜನರಿಗೆ ಈಗ ಸುರಿಯುತ್ತಿರುವ ಮಳೆಯಿಂದ ಗಾಯದ ಮೇಲೆ ತುಪ್ಪ ಸವರಿದಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಕೈಬಿಟ್ಟು ಕನಿಷ್ಠ ₹20 ಸಾವಿರ ಕೋಟಿ ಮಧ್ಯಂತರ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.