ADVERTISEMENT

ವನ್ಯಜೀವಿಗಳಿಗೆ ಕಂಟಕವಾದ ರೈಲು ಮಾರ್ಗ: 21 ಕಾಡುಕೋಣಗಳ ಸಾವು

3 ವರ್ಷಗಳಲ್ಲಿ 21 ಕಾಡುಕೋಣ ಸಾವು

ಪ್ರಜಾವಾಣಿ ವಿಶೇಷ
Published 15 ಜುಲೈ 2024, 21:55 IST
Last Updated 15 ಜುಲೈ 2024, 21:55 IST

ಸಾವನ್ನಪ್ಪಿರುವ ಕಾಡುಕೋಣ

ಸಾವನ್ನಪ್ಪಿರುವ ಕಾಡುಕೋಣ

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ‘ಹೊಸಪೇಟೆ–ವಾಸ್ಕೊ ಹಾಗೂ ಖಾನಾಪುರ–ಮೀರಜ್‌’ ರೈಲ್ವೆ ಮಾರ್ಗದಲ್ಲಿ ಮೂರು ವರ್ಷಗಳಲ್ಲಿ 21 ಕಾಡೆಮ್ಮೆಗಳು ಜೀವ ಕಳೆದುಕೊಂಡಿವೆ. ಪ್ರಸಕ್ತ ವರ್ಷ ಜನವರಿಯಿಂದ ಜುಲೈವರೆಗೂ 13 ಕಾಡುಕೋಣಗಳು ಸಾವನ್ನಪ್ಪಿದ್ದು ಪರಿಸರ ಪ್ರಿಯರಲ್ಲಿ ಆತಂಕ ಹೆಚ್ಚಿದೆ.

ADVERTISEMENT

ಅಳ್ನಾವರ (ಧಾರವಾಡ ಜಿಲ್ಲೆ), ಲೋಂಡಾ–ಖಾನಾಪುರ (ಬೆಳಗಾವಿ ಜಿಲ್ಲೆ) ಹಾಗೂ ತಿನಾಯ್‌ಘಾಟ್‌–ಕ್ಯಾಸಲ್‌ರಾಕ್‌ (ಉತ್ತರ ಕನ್ನಡ ಜಿಲ್ಲೆ) ದಟ್ಟವಾದ ಅರಣ್ಯವಿರುವ 85 ಕಿ.ಮೀ. ರೈಲ್ವೆ ಮಾರ್ಗದಲ್ಲಿ 2014 ರಿಂದ 2021ರವರೆಗೂ ಒಟ್ಟು 60 ವನ್ಯಜೀವಿಗಳು ಮೃತಪಪಟ್ಟಿವೆ. ಅವುಗಳಲ್ಲಿ 49 ಕಾಡುಕೋಣಗಳು ಸತ್ತಿವೆ.

ರೈಲ್ವೆ ಮಾರ್ಗದಲ್ಲಿ ಸಿಲುಕಿ ವನ್ಯಪ‍್ರಾಣಿಗಳು ಜೀವ ಕಳೆದುಕೊಳ್ಳುವ ಘಟನೆಗಳು ಹೆಚ್ಚುತ್ತಿದ್ದು, ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಅರಣ್ಯಾಧಿಕಾರಿಗಳು ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ರೈಲ್ವೆ ಮಾರ್ಗವು ದ್ವಿಪಥ (ಡಬ್ಲಿಂಗ್‌) ಆಗಿದ್ದರಿಂದ ವನ್ಯಜೀವಿಗಳು ಅದನ್ನು ಸಮರ್ಪಕವಾಗಿ ದಾಟುವುದು ಸಾಧ್ಯ ಆಗದಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯದಲ್ಲಿ ಬೇಸಿಗೆ ಕಾಲದ ನೀರಿನ ಕೊರತೆ ಮತ್ತು ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರು ಎಸೆಯುವ ಆಹಾರ ಪದಾರ್ಥಗಳನ್ನು ತಿನ್ನಲು ಬರುವ ವನ್ಯಜೀವಿಗಳ ಪ್ರಾಣಕ್ಕೆ ಎರವಾಗುತ್ತಿರಬಹುದು.

‘ಅರಣ್ಯ ಮಾರ್ಗದಲ್ಲಿ ರೈಲುಗಳು ಅತೀ ವೇಗವಾಗಿ ಸಂಚರಿಸುತ್ತಿರುವುದು ವನ್ಯಜೀವಿಗಳು ಪ್ರಾಣ ಕಳೆದುಕೊಳ್ಳುವುದಕ್ಕೆ ಮುಖ್ಯವಾದ ಕಾರಣ’ ಎಂದು ಅರಣ್ಯ ಅಧಿಕಾರಿಗಳು ಮತ್ತು ಪರಿಸರ ಪ್ರಿಯರು ಹೇಳುತ್ತಾರೆ.

‘ಅರಣ್ಯದಲ್ಲಿ ಹಾಗೂ ಗುಡ್ಡಗಳಿರುವ ಕಡೆ ರೈಲಿನ ವೇಗ ನಿಯಂತ್ರಣ ನಿಯಮಗಳನ್ನು ಪಾಲನೆ ಮಾಡುವಂತೆ ರೈಲ್ವೆ ಎಂಜಿನ್‌ ಚಾಲಕರಿಗೆ ಸೂಚಿಸುವಂತೆ ರೈಲ್ವೆ ಅಧಿಕಾರಿಗಳಿಗೆ ನಿಯೋಗದ ಮೂಲಕ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಈ ರೈಲ್ವೆ ಮಾರ್ಗದಲ್ಲಿ ಪ್ರಾಣಿಗಳು ಸುಲಭವಾಗಿ ದಾಟುವುದಕ್ಕೆ ಕೆಳಸೇತುವೆಗಳು ಅಥವಾ ಸುರಕ್ಷಾ ಬೇಲಿಗಳನ್ನು ಮಾಡದ ಕಾರಣ ಅವಘಡಗಳು ಘಟಿಸುತ್ತಿವೆ’ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

‘ಲೋಂಡಾ–ಕ್ಯಾಸಲ್‌ರಾಕ್‌ನಿಂದ ವಾಸ್ಕೊವರೆಗೂ ರೈಲ್ವೆ ಮಾರ್ಗ ದ್ವಿಪಥ ಕಾಮಗಾರಿ ಈ ವರ್ಷ ಪೂರ್ಣವಾದರೆ ರೈಲುಗಳ ಸಂಖ್ಯೆಯೂ ಹೆಚ್ಚಳವಾಗಿ ಇನ್ನೂ ಅಧಿಕ ಪ್ರಮಾಣದಲ್ಲಿ ವನ್ಯಜೀವಿಗಳು ಆಪತ್ತಿಗೆ ಸಿಲುಕಲಿವೆ’ ಎಂದು ವನ್ಯಜೀವಿ ಕಾರ್ಯಕರ್ತರು ಮತ್ತು ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಲೋಂಡಾ ಮಾರ್ಗದಲ್ಲಿ ಪ್ರತಿದಿನ 12 ಪ್ರಯಾಣಿಕರ ರೈಲುಗಳು ಸಂಚರಿಸುತ್ತಿವೆ. ಆದರೆ ಸರಕು ಸಾಗಿಸುವ ರೈಲುಗಳು ಹಾಗೂ ವಿಶೇಷ ರೈಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ.

ವನ್ಯಜೀವಿ ಕಾರ್ಯಕರ್ತ ಗಿರಿಧರ್‌ ಕುಲಕರ್ಣಿ ಅವರು ಹೈಕೋರ್ಟ್‌ಗೆ ರಿಟ್‌ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ‘ಲೋಂಡಾ–ತಿನಾಯ್‌ಘಾಟ್‌–ಕ್ಯಾಸಲ್‌ರಾಕ್‌–ವಾಸ್ಕೊ ರೈಲು ಮಾರ್ಗವು ದಟ್ಟ ಅರಣ್ಯದೊಳಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಈ ಮಾರ್ಗವು 'ಹುಲಿ ವಲಯ’ (ಟೈಗರ್‌ ಕಾರಿಡಾರ್‌)ವಾಗಿ ಪ್ರಮುಖ್ಯತೆ ಪಡೆದಿದೆ. ಸೂಕ್ಷ್ಮ ಪರಿಸರದಲ್ಲಿ  ವನ್ಯಜೀವಿಗಳು ಸುರಕ್ಷಿತವಾಗಿ ಸಂಚರಿಸುವುದು ಮುಖ್ಯವಾಗಿದೆ. ಈ ಮಾರ್ಗದ ವನ್ಯಜೀವಿಗಳಿಗೆ ಉಂಟಾಗುವ ಒತ್ತಡ ನಿವಾರಣೆಗೆ ಪರ್ಯಾಯ ಮಾರ್ಗವೊಂದನ್ನು ಅಭಿವೃದ್ಧಿ ಮಾಡುವುದು ಅಗತ್ಯವಿದೆ‘ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

‘ಅರಣ್ಯ ಪ್ರದೇಶದಲ್ಲಿ ವೇಗ ನಿಯಂತ್ರಣ ನಿಯಮಗಳು ಅನುಷ್ಠಾನದಲ್ಲಿವೆ. ಧಾರವಾಡ ಮತ್ತು ಕ್ಯಾಸಲ್‌ರಾಕ್‌ ಮಧ್ಯೆ ರೈಲ್ವೆ ದ್ವಿಪಥ ಕಾಮಗಾರಿ ಮುಗಿದಿದ್ದು, ಕುಲೇಂ ಮಾರ್ಗದಲ್ಲಿ ಪ್ರಗತಿಯಲ್ಲಿದೆ. ಅರಣ್ಯ ಮಾರ್ಗದಲ್ಲಿ ಅವಘಡ ತಪ್ಪಿಸಲು ರೈಲ್ವೆ ಇಲಾಖೆಯು ತಾತ್ಕಾಲಿಕ ಮತ್ತು ಶಾಶ್ವತ ವೇಗ ನಿಯಂತ್ರಣ ನಿಯಮಗಳನ್ನು ಪಾಲನೆ ಮಾಡುತ್ತಿದೆ’ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಅಧಿಕಾರಿ ಮಂಜುನಾಥ ಕನಮಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.