ಹುಬ್ಬಳ್ಳಿ: ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮದತ್ತ ಅವರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುವಾಗ ತಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತರಲಾಗಿದೆ ಎಂದು ಸೋಮದತ್ತ ಎಂಬ ಮಹಿಳೆ ಹೇಳಿಕೆ ನೀಡಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎಂದರು.
‘ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಸಾರಾಯಿ ಕುಡಿದ ಮಂಗನ ರೀತಿ ಅರೆ ಹುಚ್ಚನಂತೆ ಮಾತನಾಡುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿದಾಗ ಕೆಲವರು ಗದ್ದಲ ಮಾಡಿದ್ದಾರೆ. ಆ ಪ್ರಕರಣದಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾವುದು. ಪೊಲೀಸರು ಮಧ್ಯಪ್ರವೇಶಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ನಡಹಳ್ಳಿ ಅವರೇ ಈಗಾಗಲೇ ಹೇಳಿಕೆ ನೀಡಿದ್ದಾರೆ’ ಎಂದರು.
‘ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿರುವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ನಾನು ರಾಹುಲ್ ಗಾಂಧಿಗೆ ದೂರು ನೀಡಿಲ್ಲ. ಧರ್ಮದ ವಿಷಯವನ್ನು ಚುನಾವಣೆ ಮುಗಿದ ನಂತರ ಮಾತನಾಡುತ್ತೇನೆ. ಈ ಚುನಾವಣೆಯ ವಿಷಯ ಅದಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.