ADVERTISEMENT

ನವಲಗುಂದ | ನೆರೆ; ಕೃಷಿಭೂಮಿಗೆ ಹಾನಿ

ಸಣ್ಣ ಮಳೆಗೂ ಹೊಲದ ಮೇಲೆ ಹರಿಯುವ ಕಿರು ಹಳ್ಳಗಳು

ಪ್ರಜಾವಾಣಿ ವಿಶೇಷ
Published 24 ಜೂನ್ 2024, 4:46 IST
Last Updated 24 ಜೂನ್ 2024, 4:46 IST
ನವಲಗುಂದ–ರೋಣ ರಸ್ತೆಯಲ್ಲಿರುವ ಹಳ್ಳದಲ್ಲಿ ಜಾಲಿಕಂಟಿಗಳು ಬೆಳೆದು ಪಕ್ಕದಲ್ಲಿರುವ ಬಾಸನಸರುವಿನ ಮೂಲಕ ನೀರು ಹರಿದು ಜಮೀನಿಗೆ ತರೆಳಲು ರಸ್ತೆ ಇಲ್ಲದಂತಾಗಿರುವುದನ್ನು ರೈತರು ತೋರಿಸಿದರು
ನವಲಗುಂದ–ರೋಣ ರಸ್ತೆಯಲ್ಲಿರುವ ಹಳ್ಳದಲ್ಲಿ ಜಾಲಿಕಂಟಿಗಳು ಬೆಳೆದು ಪಕ್ಕದಲ್ಲಿರುವ ಬಾಸನಸರುವಿನ ಮೂಲಕ ನೀರು ಹರಿದು ಜಮೀನಿಗೆ ತರೆಳಲು ರಸ್ತೆ ಇಲ್ಲದಂತಾಗಿರುವುದನ್ನು ರೈತರು ತೋರಿಸಿದರು   

ನವಲಗುಂದ: ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳ ಸಮಸ್ಯೆ ಒಂದೆಡೆಯಾದರೆ ಕಿರು ಹಳ್ಳಗಳ ಪ್ರವಾಹದ ಸಮಸ್ಯೆಯಿಂದಾಗಿ ರೈತರ ಫಲವತ್ತಾದ ಭೂಮಿ ಹಾಗೂ ಒಡ್ದುಗಳು ಒಡೆದು ರೈತರಿಗೆ ನಷ್ಟವುಂಟಾಗುತ್ತಿದೆ. ಪ್ರತಿ ವರ್ಷದ ಈ ಸಮಸ್ಯೆಗೆ ಮುಕ್ತಿ ಯಾವಾಗ ಎಂಬುದು ಈ ಭಾಗದ ರೈತರ ಪ್ರಶ್ನೆಯಾಗಿದೆ.

ದಶಕಗಳಿಂದಲೂ ಬೆಣ್ಣೆ ಹಾಗೂ ತುಪ್ಪರಿಹಳ್ಳಗಳ ನೆರೆ ಹಾವಳಿಯಿಂದಾಗಿ ಸಾವಿರಾರು ಹೆಕ್ಟೇರ್‌ ಪ್ರದೇಶದ ಫಲವತ್ತಾದ ಭೂಮಿ ನೀರು ಪಾಲಗುವುದರ ಜೊತೆಗೆ ರೈತರ ಆರ್ಥಿಕ ಸಂಕಷ್ಟಕ್ಕೂ ಹೊಡೆತ ಬೀಳುತ್ತಲೇ ಬಂದಿದೆ. ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತಿ ವರ್ಷ ಹೊಳೆತ್ತುವ ಕಾಮಗಾರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಲೇ ಬಂದಿದ್ದಾರೆ ಹೊರತು ಶಾಶ್ವತ ಪರಿಹಾರ ದೊರೆತಿಲ್ಲ.

‘ಇನ್ನೂ ಕಿರು ಹಳ್ಳಗಳ ಒತ್ತುವರಿಯಿಂದಾಗಿ ಹಳ್ಳಗಳು ಚಿಕ್ಕದಾಗಿ ಜಾಲಿಕಂಟಿ ಬೆಳೆದ ಪರಿಣಾಮ ಸಣ್ಣ ಮಳೆಯಾದರು ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೆ ಜಮೀನಿನ ಮೇಲೆ ಹರಿದು ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುವುದರ ಜೊತೆಗೆ ಒಡ್ದುಗಳು ಒಡೆದು ಈ ವರ್ಷ ಸಾವಿರಾರು ಹೆಕ್ಟೇರ್‌ ಪ್ರದೇಶ ಭೂಮಿ ಬರಡಾಗಿ ನಿಂತಿದೆ. ಜೊತೆಗೆ ಈಗ ತಾನೇ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಹೆಸರು, ಉದ್ದು ಹತ್ತಿ, ಗೋವಿನಜೋಳ, ಮೊಳಕೆಯೊಡೆದ ಬೆಳೆಗಳು ನಾಶವಾಗಿದೆ’ ಎಂಬುದು ರೈತರ ಅಳಲಾಗಿದೆ.    

ADVERTISEMENT

‘ಅಣ್ಣಿಗೇರಿ ರಸ್ತೆಯಲ್ಲಿರುವ ಹೋಲಿ ಹಳ್ಳವನ್ನು ಡಿಬಿಪಿಎಲ್ ( ಧಾರವಾಡ ಬಯೋ ಎನರ್ಜಿ ಪ್ರೈವೇಟ್ ಲಿಮಿಟೆಡ್ ) ಕಂಪನಿಯವರು ಅತಿಕ್ರಮಿಸಿಕೊಂಡಿರುವ ಕಾರಣ ನೀರು ಹರಿದು ಹೋಗಲು ಜಾಗವಿಲ್ಲದಂತಾಗಿ ಸುತ್ತಮುತ್ತಲಿನ ನೂರಾರು ಹೆಕ್ಟೇರ್‌ ಪ್ರದೇಶದ ಜಮೀನಗಳಿಗೆ ಹಾನಿಯುಂಟಾಗುವುದರ ಜೊತೆಗೆ ಹೊಲರಸ್ತೆಗಳು ಕೊಚ್ಚಿಕೊಂಡು ಹೋಗಿ ಕೃಷಿ ಚಟುವಟಿಕೆಗೆ ದಾರಿ ಇಲ್ಲದಂತಾಗಿದೆ’ ಎಂದು ರೈತರಾದ ಶೇಖರಯ್ಯ ಹಿರೇಮಠ, ರಾಜಪ್ಪ ಇಂಗಳಹಳ್ಳಿ ಆರೋಪಿಸಿದರು.

‘ರೋಣ ರಸ್ತೆಯಲ್ಲಿರುವ ಅಂಬಲಿ ಹಳ್ಳದುದ್ದಕ್ಕೂ ಜಾಲಿಕಂಟಿಗಳು ಬೆಳೆದು ಹಳ್ಳ ಚಿಕ್ಕದಾಗಿ ನೆರೆಹಾವಳಿ ಉಂಟಾಗುತ್ತಿರುವ ಕಾರಣ ಹೊಲ ರಸ್ತೆಗಳು ಕಿತ್ತುಹೋಗಿವೆ. ಪಕ್ಕದಲ್ಲಿಯೇ ಇರುವ ಬಾಸನಸರವಿಗೆ ಸಿಡಿ ನಿರ್ಮಾಣ ಮಾಡಿ ರಸ್ತೆ ದುರಸ್ತಿ ಮಾಡಿ ಈ ಭಾಗದ ರೈತರ ಜಮೀನಿಗೆ ತರಳಲು ಶಾಸಕ ಎನ್.ಎಚ್.ಕೋನರಡ್ಡಿ ಅನುವು ಮಾಡಿ ಕೊಡಲಿ’ ಎಂದು ಪ್ರಗತಿಪರ ರೈತ ಮಂಜುನಾಥ್ ಗಡ್ಡಿ ಆಗ್ರಹಿಸಿದರು. 

ನವಲಗುಂದ–ರೋಣ ರಸ್ತೆಯಲ್ಲಿರುವ ಹಳ್ಳದಲ್ಲಿ ಜಾಲಿಕಂಟಿಗಳು ಬೆಳೆದು ಪಕ್ಕದಲ್ಲಿರುವ ಬಾಸನಸರುವಿನ ಮೂಲಕ ನೀರು ಹರಿದು ಜಮೀನಿಗೆ ತರೆಳಲು ರಸ್ತೆ ಇಲ್ಲದಂತಾಗಿರುವುದನ್ನು ರೈತರು ತೋರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.