ಅಳ್ನಾವರ: ರಾಜ್ಯ ಸರ್ಕಾರ ಆರಂಭಿಸಿರುವ ’ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಈ ಬಾರಿ ಇಲ್ಲಿಗೆ ಸಮೀಪದ ಅರವಟಗಿ ಗ್ರಾಮದಲ್ಲಿ ನಡೆಯಲಿದೆ. ಇದಕ್ಕಾಗಿ ಸಿದ್ಧತೆಯೂ ಪೂರ್ಣಗೊಂಡಿದೆ.
ಹಲವಾರು ಸಮಸ್ಯೆಗಳಿರುವ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ ಸ್ಥಳೀಯರದಲ್ಲಿ ಹೊಸ ಆಶಾಭಾವ ಮೂಡಿದಿದೆ. ಮಲೆನಾಡಿನ ಸೆರಗಿನ ಗ್ರಾಮದಲ್ಲಿ ನಾಲ್ಕು ದಶಕಗಳ ಹಿಂದೆ ಕಟ್ಟಿದ ಗ್ರಾಮ ಪಂಚಾಯ್ತಿ ಕಟ್ಟಡವಿದೆ.
ಶನಿವಾರ ಬೆಳಿಗ್ಗೆ ಬರಲಿರುವ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಅವರನ್ನು ಸ್ವಾಗತಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಸಾಂಪ್ರದಾಯಿಕ ಸ್ವಾಗತ ಕೋರಲಿದ್ದಾರೆ. ಚಕ್ಕಡಿ ಮೂಲಕ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಯಲಿದೆ. ಡೊಳ್ಳಿನ ಮಜಲು ಇರಲಿದೆ ಎಂದು ಅರವಟಗಿ ಗ್ರಾಮ ಪಂಚಾಯ್ತಿ ಪಿಡಿಒ ಅಪ್ಪಯ್ಯ ಬೀಡಿಮಠ ತಿಳಿಸಿದ್ದಾರೆ.
ಸಿದ್ದಾರೂಢ ಮಠದ ಬೀದಿಯಲ್ಲಿ ಗ್ರಾಮ ಒನ್ ಕೇಂದ್ರದ ಉದ್ಘಾಟನೆ, ನ್ಯಾಯಬೆಲೆ ಅಂಗಡಿಗೆ ಭೇಟಿ, ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ ಕಾಮಗಾರಿ ಪರಿಶೀಲನೆ, ಬೋರವೆಲ್ ಉದ್ಘಾಟನೆ, ಎಸ್‌ಸಿ ಎಸ್‌ಟಿ ಕಾಲೊನಿಗೆ ಭೇಟಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಿಗದಿ ಮಾಡಲಾಗಿದೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಅಮರೇಶ ಪಮ್ಮಾರ ’ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ. ಫಲಾನುಭವಿಗಳಿಗೆ ಮಂಜೂರಾದ ಸರ್ಕಾರದ ಯೋಜನೆಗಳ ಆದೇಶ ಪ್ರತಿ ವಿತರಣೆ ಮಾಡಲಾಗುವುದು’ ಎಂದಿದ್ದಾರೆ.
ಕುಂಬಾರಕೊಪ್ಪ ಗ್ರಾಮದ ಟೆನೆಂಟ್ ಕೋ ಅಪರೇಟಿವ್ ಸೊಸೈಟಿಯ 284 ರೈತರಿಗೆ ಸರ್ಕಾರಿ ಸೌಲಭ್ಯ ಒದಗಿಸಬೇಕು, ಗ್ರಾಮ ಪಂಚಾಯ್ತಿಗೆ ಹೊಸದಾಗಿ ಕಟ್ಟಡ ನಿರ್ಮಿಸಬೇಕು, ಸರ್ಕಾರಿ ಕನ್ನಡ ಪ್ರೌಢಶಾಲೆ ಮಂಜೂರು ಮಾಡಬೇಕು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನ ವಾಸಮಾಡುವ ಬಡಾವಣೆಗೆ ಮೂಲ ಸೌಕರ್ಯ ಒದಗಿಸಬೇಕು ಎನ್ನುವುದು ಸೇರಿದಂತೆ ವಿವಿಧ ವಿಷಯಗಳನ್ನು ಜಿಲ್ಲಾಧಿಕಾರ ಅವರ ಗಮನಕ್ಕೆ ತರಲು ಸ್ಥಳೀಯರು ನಿರ್ಧರಿಸಿದ್ದಾರೆ. ಶುಕ್ರವಾರ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ತೀರ್ಮಾನಕ್ಕೆ ಬರಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಮೀನಾಬೇಗಂ ಲಾಲಸಾಬ ಕಾಶಿನಕುಂಟಿ, ಉಪಾಧ್ಯಕ್ಷ ಅಶೋಕ ಜೊಡಟ್ಟಿ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ ಭೂಮಣ್ಣವರ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.