ADVERTISEMENT

ಫಲಿತಾಂಶ ಘೋಷಣೆ ಮೊದಲೇ ವಿಜೇತ ಅಭ್ಯರ್ಥಿ ಪ್ರಮಾಣ ಪತ್ರ ಸಿದ್ಧವಾಗಿತ್ತು: ಮಹೇಶ್

ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2018, 12:01 IST
Last Updated 8 ಸೆಪ್ಟೆಂಬರ್ 2018, 12:01 IST

ಹುಬ್ಬಳ್ಳಿ: ಮತ ಯಂತ್ರದ ಲೋಪ ಹಾಗೂ ವಿಜೇತ ಅಭ್ಯರ್ಥಿ ಘೋಷಣೆಯಲ್ಲಿ ಆದ ಗೊಂದಲವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್‌ಗೆ ಮಾನ್ಯ ಮಾಡಿದ್ದು, ನ್ಯಾಯ ಸಿಗುವ ನಿರೀಕ್ಷೆ ಇದೆ ಎಂದು ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ. ಮಹೇಶ ನಾಲವಾಡ ಹೇಳಿದರು.

ಮತ ಯಂತ್ರ, ಮತ ಖಾತ್ರಿ ಸಾಧನದಲ್ಲಿ (ವಿ.ವಿ. ಪ್ಯಾಟ್) ಲೋಪದೋಷಗಳಿದ್ದವು. ಅಷ್ಟೇ ಅಲ್ಲದೆ ಚುನಾವಣೆಯ ಫಲಿತಾಂಶ ಘೋಷಣೆ ಮಾಡುವ ಮೊದಲೇ ವಿಜೇತ ಅಭ್ಯರ್ಥಿಯ ಪ್ರಮಾಣ ಪತ್ರವನ್ನು ಮುದ್ರಿಸಲಾಗಿತ್ತು. ನಿಯಮದ ಪ್ರಕಾರ ಎಣಿಕೆ ಮುಗಿದು ಅಧಿಕೃತವಾಗಿ ಫಲಿತಾಂಶ ಘೋಷಣೆಯಾದ ನಂತರವಷ್ಟೇ ಪ್ರಮಾಣ ಪತ್ರದ ಮೇಲೆ ವಿಜೇತ ಅಭ್ಯರ್ಥಿಯ ಹೆಸರು ಬರೆಯಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಲಾವಣೆಯಾದ ಮತ ಹಾಗೂ ಎಣಿಕೆಯಾದ ಮತಗಳ ಸಂಖ್ಯೆ ತಾಳೆಯಾಗಲಿಲ್ಲ. ಒಂದು ಮತಗಟ್ಟೆಯ ವಿ.ವಿ. ಪ್ಯಾಟ್‌ನಲ್ಲಿ 204 ಚಿಹ್ನೆಯೇ ಇಲ್ಲದ ಚೀಟಿಗಳು ಸಿಕ್ಕಿದ್ದವು. ಅದನ್ನು ಪ್ರಶ್ನಿಸಿದಕ್ಕೆ, ಮತ ಯಂತ್ರ ಒಮ್ಮೆ ಬಂದ್ (ಆಫ್‌) ಮಾಡಿ ಚಾಲನೆ ಮಾಡಿದರೆ 7 ಖಾಲಿ ಚೀಟಿಗಳು ವಿ.ವಿ. ಪ್ಯಾಟ್‌ ಒಳಗೆ ಬೀಳುತ್ತವೆ ಎಂದು ಸಮಜಾಯಿಷಿ ನೀಡಿದರು. ಅವರ ಲೆಕ್ಕವನ್ನೇ ತೆಗೆದುಕೊಂಡರೂ ಮತ ಯಂತ್ರ 29.1 ಬಾರಿ ಬಂದ್ ಆಗಿದೆ, ಇದು ಹೇಗೆ ಸಾಧ್ಯ? ಮತದಾನಕ್ಕೆ ಸಂಜೆ 6 ಗಂಟೆಯ ವರೆಗೆ ಸಮಯ ಇತ್ತು, ಆದರೆ 5.45 ಮತ ಯಂತ್ರ ಬಂದ್ ಆಗಿದೆ ಎಂದು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

‌ಮತಗಟ್ಟೆಯಿಂದ ಮತ ಎಣಿಕೆ ಕೇಂದ್ರಕ್ಕೆ ಮತ ಯಂತ್ರಗಳನ್ನು ಕೊಂಡೊಯ್ದಿರುವ ವಾಸ್ತವ ಸಮಯ ಹಾಗೂ ದಾಖಲೆಯಲ್ಲಿರುವ ಸಮಯಕ್ಕೆ ವ್ಯತ್ಯಾಸ ಇದೆ. ಎಲ್ಲ ವಿ.ವಿ. ಪ್ಯಾಟ್‌ಗಳ ಮತ ಚೀಟಿಗಳನ್ನು ಎಣಿಕೆ ಮಾಡಿದ ನಂತರವೇ ಫಲಿತಾಂಶ ಘೋಷಣೆ ಮಾಡಿ ಎಂಬ ಮನವಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿ ಪುರಸ್ಕರಿಸಲಿಲ್ಲ. ಈ ಎಲ್ಲ ವಿಷಯಗಳನ್ನು ಅರ್ಜಿಯಲ್ಲಿ ತಿಳಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.