ಹುಬ್ಬಳ್ಳಿ: ಮಳೆಗಾಲದಲ್ಲಿ ಬಿದ್ದು ಹೋಗಿದ್ದ ಮನೆಗೆ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಸಲ್ಲಿಸಲು ಬಂದಾಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮೃತಪಟ್ಟಿದ್ದಾಳೆ. ಏ. 7ರಂದು ಈ ಘಟನೆ ನಡೆದಿತ್ತು.
ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ಶ್ರೀದೇವಿ ವೀರಣ್ಣ ಕಮ್ಮಾರ ಆತ್ಮಹತ್ಯೆಗೆ ಯತ್ನಿಸಿ ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದಿನ ಮಳೆಗಾಲದಲ್ಲಿ ಶ್ರೀದೇವಿ ಅವರ ಮನೆ ಕುಸಿದು ಬಿದ್ದಿತ್ತು. ಪರಿಹಾರ ಕೋರಿ ಮನವಿ ಸಲ್ಲಿಸಲು ಜೋಶಿ ಅವರ ನಿವಾಸಕ್ಕೆ ಬಂದಿದ್ದರು.
ಮನೆ ಬಿದ್ದಿದ್ದಕ್ಕೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಐದಾರು ತಿಂಗಳಿನಿಂದ ಅಲೆದಾಡಿ ಸಾಕಾಗಿದೆ. ಶಾಸಕ ಅಮೃತ ದೇಸಾಯಿ ಅವರಿಗೆ ಮನವಿ ಕೊಟ್ಟರೆ, ಕೇಂದ್ರ ಸಚಿವ ಜೋಶಿ ಅವರ ಬಳಿಗೆ ಹೋಗಿ ಎನ್ನುತ್ತಾರೆ. ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದಾಗ ಅಮೃತ ದೇಸಾಯಿ ಅವರಿಗೆ ಕರೆ ಮಾಡಿ ತಿಳಿಸುತ್ತೇನೆ, ಭೇಟಿ ಮಾಡಿ ಎಂದಿದ್ದರು. ನಮ್ಮ ಕಷ್ಟ ಹೇಳಿಕೊಂಡರೂ ಯಾರು ಸಹಾಯ ಮಾಡಲಿಲ್ಲ. ಮನನೊಂದು ನಿಮ್ಮ ಮನೆಯಲ್ಲಿಯೇ ವಿಷ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಚಿವ ಜೋಶಿ ಅವರಿಗೆ ಪತ್ರದಲ್ಲಿ ಶ್ರೀದೇವಿ ಬರೆದಿದ್ದಾರೆ.
‘ಪತಿ ವೀರಣ್ಣ ಕಮ್ಮಾರ ಅವರಿಗೆ ಆರಾಮವಿಲ್ಲ. ಮಕ್ಕಳಿಗೂ ತೊಂದರೆಯಾಗಬಾರದು ಎಂದು ಸ್ವತಃ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಪತ್ರದಲ್ಲಿ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.