ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಮಹಿಳಾ ವಿಭಾಗವು ‘ಮಹಿಳಾ ಉದ್ಯಮಿಗಳ ಸಮಾವೇಶ ಅದಿರಾ –2023’ ಅನ್ನು ಏ. 29ರಂದು ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
‘ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸಮಾವೇಶ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ರೇಣುಕಾ ಶುಗರ್ಸ್ ಅಧ್ಯಕ್ಷೆ ಹಾಗೂ ರವೀಂದ್ರ ಎನರ್ಜಿ ಲಿಮಿಟೆಡ್ ಸಹ ಸಂಸ್ಥಾಪಕಿ ಡಾ. ವಿದ್ಯಾ ಮುರ್ಕುಂಬಿ ಭಾಗವಹಿಸಲಿದ್ದಾರೆ’ ಎಂದು ಸಂಸ್ಥೆಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೆಸಿಸಿಐ ಮಹಿಳಾ ವಿಭಾಗದ ಅಧ್ಯಕ್ಷೆ ಅಂಜನಾ ಬಸನಗೌಡರ ಹೇಳಿದರು.
‘ಸಮಾವೇಶದ ಸಂಪನ್ಮೂಲ ವ್ಯಕ್ತಿಗಳಾಗಿ ನೆಕ್ಟರ್ ಫ್ರೆಶ್ ಮತ್ತು ನಮನ್ ಸಂಸ್ಥಾಪಕಿ ಛಾಯಾ ನಂಜಪ್ಪ, ಪ್ರಗತಿಪರ ಕೃಷಿಕರಾದ ಕವಿತಾ ಮಿಶ್ರಾ ಹಾಗೂ ಹಣಕಾಸು ಯೋಜಕಿ ಕಿರಣ್ ತೆಲಂಗ್ ಭಾಗವಹಿಸಲಿದ್ದಾರೆ’ ಎಂದರು.
‘ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉತ್ತರ ಕರ್ನಾಟಕದ ಮೂವರಿಗೆ ‘ವಾಣಿಜ್ಯ ಮಹಿಳಾ ಉದ್ಯಮಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೊತೆಗೆ, ವಿವಿಧ ವೃತ್ತಿಗಳಲ್ಲಿರುವ 10 ಮಹಿಳಾ ಕಾರ್ಮಿಕರನ್ನು ಸನ್ಮಾನಿಸಲಾಗುವುದು. ಸಮಾವೇಶದಲ್ಲಿ ವಿವಿಧ ಉದ್ಯಮಿಗಳ 25 ಮಳಿಗೆಗಳು ಇರಲಿವೆ’ ಎಂದ ತಿಳಿಸಿದರು.
ಕೆಸಿಸಿಐ ಅಧ್ಯಕ್ಷ ವಿನಯ ಜವಳಿ, ಸಹ ಕಾರ್ಯದರ್ಶಿ ಶಂಕರ ಕೋಳಿವಾಡ, ಸಮಾವೇಶದ ಆಯೋಜನೆ ಸಮಿತಿ ಅಧ್ಯಕ್ಷೆ ಸ್ಮಿತಾ ಮಹೇಶ್, ಉಪಾಧ್ಯಕ್ಷೆ ಶ್ರಾವಣಿ ಪವಾರ ಹಾಗೂ ಮಳಿಗೆಗಳ ಸಂಯೋಜಕಿ ತಾರಾಮತಿ ಪೋಲ್ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.