ಧಾರವಾಡ: ‘ಜೀವ ಸಂಕುಲ ರಕ್ಷಿಸುತ್ತಿರುವ ಓಜೋನ್ ಪದರಕ್ಕೆ ಸೂರ್ಯನ ಅತಿನೇರಳೆ ಕಿರಣಗಳಿಂದ ಹಾನಿಯಾಗದಂತೆ ಎಚ್ಚರವಹಿಸಬೇಕಾದ್ದು ಅತಿ ಅವಶ್ಯಕ. ಇಲ್ಲವಾದಲ್ಲಿ ಭೂಮಿ ಮೇಲಿನ ಇಡೀ ಜೀವಸಂಕುಲವೇ ನಾಶವಾಗಲಿದೆ’ ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ. ಕೊಟ್ರೇಶ್ ಆತಂಕ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಮತ್ತು ವೈ.ಬಿ.ಅಣ್ಣಿಗೇರಿ ಕಾಲೇಜಿನ ಸಹಯೋಗದಲ್ಲಿ ಜರುಗಿದ ವಿಶ್ವ ಓಜೋನ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿರುವ ಪರಿಸರ ಮಾಲಿನ್ಯದಿಂದ ಸಾವಿರಾರು ವರ್ಷಗಳಿಂದಿರುವ ಓಜೋನ್ ಪದರ ಹಾನಿಗೀಡಾಗಿ, ತೆಳುವಾಗಿದೆ. ಅಲ್ಲಲ್ಲಿ ರಂಧ್ರಗಳೂ ಬಿದ್ದಿವೆ. ಇದನ್ನು ಸಹಜ ಸ್ಥಿತಿಗೆ ತರುವುದು ಒಂದೆರಡು ದಿನಗಳ ಕೆಲಸವಲ್ಲ. ಸತತ ಹಾಗೂ ಸಾಂಘಿಕ ಪ್ರಯತ್ನದಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.
ಶಂಕರ ಹಲಗತ್ತಿ ಮಾತನಾಡಿ,‘ಯುವ ಪೀಳಿಗೆ ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಂಡು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ. ಬರಲಿರುವ ಅಪಾಯದ ದಿನಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಹಿಸುವುದು ಸೂಕ್ತ. ಪರಿಸರದ ಮೇಲೆ ಆಗುತ್ತಿರುವ ದಾಳಿಯನ್ನು ತಡೆಗಟ್ಟುವುದಕ್ಕೆ ವಿದ್ಯಾರ್ಥಿಗಳು ಸಾಂಘಿಕ ಪ್ರಯತ್ನದೊಂದಿಗೆ ಚಳವಳಿ ನಡೆಸಬೇಕು’ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಶೋಭಾ ಪೋಳ ಮಾತನಾಡಿ, ‘ಮನುಷ್ಯ ನಿಯಂತ್ರಣ ಮೀರಿ ಪರಿಸರ ಬಳಸುತ್ತಿದ್ದಾನೆ. ಇದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಿಸುವ ಕುರಿತು ವಿದ್ಯಾರ್ಥಿಗಳು, ಮಕ್ಕಳಲ್ಲಿ ಚರ್ಚೆ ಮತ್ತು ಪ್ರಯತ್ನ ಹುಟ್ಟುಹಾಕುವ ಪ್ರಯತ್ನ ಆಬೇಕು’ ಎಂದರು.
ಪರಿಸರ ತಜ್ಞ ಶಂಕರ ಕುಂಬಿ ಮಾತನಾಡಿ, ‘ನಿತ್ಯದ ಜೀವನ ಶೈಲಿ ಬದಲಿಸಿಕೊಳ್ಳಬೇಕಿದೆ. ಅಗತ್ಯ ಮೀರಿ ಖರೀದಿಸುವ ಪ್ರವೃತ್ತಿ ಕೈಬಿಡಬೇಕು. ನೀರು, ವಿದ್ಯುತ್, ಪ್ಲಾಸ್ಟಕ್ ಬಳಕೆ ಮಿತವಾಗಿರಬೇಕು’ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಒಡವಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ನಾಗರಾಜ, ಡಾ. ವಿಲಾಸ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.