ಹುಬ್ಬಳ್ಳಿ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ, ಬಾಲಾಜಿ ನರರೋಗ ವಿಜ್ಞಾನ ಮತ್ತು ಟ್ರಾಮಾ ಸಂಸ್ಥೆ ವತಿಯಿಂದ, ನಗರದಲ್ಲಿ ಶನಿವಾರ ಪಾರ್ಶ್ವವಾಯು ಜಾಗೃತಿ ವಾಕಥಾನ್ ಜರುಗಿತು. ಮೂರು ಸಾವಿರ ಮಠದ ಜಗದ್ಗುರು ಗಂಗಾಧರ ಪ್ರೌಢಶಾಲೆ ಆವರಣದಲ್ಲಿ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿವಾಕಥಾನ್‌ಗೆ ಚಾಲನೆ ನೀಡಿದರು.
ಸಂಸ್ಥೆಯ ಡಾ. ಕ್ರಾಂತಿಕಿರಣ ಮಾತನಾಡಿ, ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ಅ. 29 ಅನ್ನು ವಿಶ್ವ ಪಾರ್ಶ್ವವಾಯು ದಿನವಾಗಿ ಘೋಷಿಸಿದೆ. ರೋಗಕ್ಕೆ ಚಿಕಿತ್ಸೆ ನೀಡುವ ಜೊತೆಗೆ ಈ ಕುರಿತು ಜನಜಾಗೃತಿಯ ಅಗತ್ಯವಿದೆ ಎಂದರು.
ಅತಿಯಾದ ಒತ್ತಡ, ವ್ಯಾಯಾಮ ರಹಿತ ಜೀವನ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಿದುಳು, ಕೈ-ಕಾಲು ಸೇರಿದಂತೆ ಇತರ ಅಂಗಗಳಿಗೆ ಪಾರ್ಶ್ವವಾಯು ತಲುಪುತ್ತದೆ. ಇತ್ತೀಚೆಗೆ ಈ ರೋಗ ಸಾಮಾನ್ಯವಾಗಿದ್ದು, ಪ್ರತಿ ನಾಲ್ವರ ಪೈಕಿ ಒಬ್ಬರು ಇದರಿಂದ ಬಳಲುತ್ತಿದ್ದಾರೆ. ಹಾಗಾಗಿ, ಜನರು ಈ ಕಾಯಿಲೆಯ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯ ಮಾಡದೆ, ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಶಾಲೆಯ ಆವರಣದಿಂದ ಆರಂಭಗೊಂಡ ವಾಕಥಾನ್ ಮಹಾವೀರ ಗಲ್ಲಿ, ಪೆಂಡಾರ ಗಲ್ಲಿ, ಮೈಸೂರು ಸ್ಟೋರ್ಸ್, ದುರ್ಗದ ಬೈಲ್, ಮರಾಠ ಗಲ್ಲಿ, ಬ್ರಾಡ್ ವೇ, ವಿಕ್ಟೋರಿಯಾ ರಸ್ತೆ, ಪದ್ಮಾ ಟಾಕೀಸ್ ಮಾರ್ಗವಾಗಿ ವಾಪಸ್ ಶಾಲೆ ತಲುಪಿತು.
ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ, ವಿವಿಧ ಸಂಘ- ಸಂಸ್ಥೆ, ಕ್ಲಬ್ ಗಳ ಸದಸ್ಯರು ಹಾಗೂ ಬಿಜೆಪಿ ಸದಸ್ಯರು ಜಾಗೃತಿ ಫಲಕಗಳೊಂದಿಗೆ ಭಾಗವಹಿಸಿದ್ದರು. ಬಿಜೆಪಿ ಮುಖಂಡರಾದ ಪ್ರಭು ನವಲಗುಂದ, ರಂಗಾ ಬದ್ದಿ, ಡಿ.ಕೆ. ಚವಾಣ, ಸಂದೀಪ ಬೂದಿಹಾಳ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.