ಯಮಕನಮರಡಿ: ಗ್ರಾಮದಲ್ಲಿ ಜೆಜೆಎಂ ಯೋಜನೆಯಲ್ಲಿ ನಡೆದಿರುವ ಕುಡಿಯುವ ನೀರಿನ ನಳಗಳ ಜೋಡಣೆ ಹಾಗೂ ಪೈಪ್ ಲೈನ್ ಕಾಮಗಾರಿಯು ಕಳಪೆಯಾಗಿದೆ ಎಂದು ಗ್ರಾ.ಪಂ ಎಲ್ಲ ಸದಸ್ಯರು ದೂರಿದರು.
ಬುಧವಾರ ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆ ಹಾಗೂ ಗ್ರಾಮ ನೀರು ನೈರ್ಮಲ್ಯ ಸಮಿತಿ ಸಭೆಯಲ್ಲಿ ಎಲ್ಲ ಸದಸ್ಯರು ಮಾತನಾಡಿ, ಈ ಜೆಜೆಎಂ ಕಾಮಗಾರಿಯನ್ನು ಮರುಪರಿಶೀಲನೆ ಆಗಬೇಕು ಮತ್ತು ಗುಣಮಟ್ಟದ ಕೆಲಸ ಮಾಡಿಸಿ ಇಲ್ಲವಾದರೆ ಗುತ್ತಿಗೆದಾರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಿಡಿಒ ಶಿವಲಿಂಗ ಢಂಗ ಅವರಿಗೆ ಸೂಚಿಸಿದರು.
ರೈತರ ಹೊಲಕ್ಕೆ ಕುಡಿಯುವ ನೀರು
ಹಳೇಗುಡಗನಟ್ಟಿ ಗ್ರಾಮದ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಸರ್ಕಾರಿ ಕೊಳವೆ ಭಾವಿ ಜೆಜೆಎಂ ಯೋಜನೆಯಲ್ಲಿ ಕೊರೆಸಲಾಗಿದ್ದು ಆ ಕೊಳವೆ ಭಾವಿಯ ಕುಡಿಯುವ ನೀರು ಸಾರ್ವಜನಿಕರಿಗೆ ಬಳಕೆಯಾಗದೆ 2ತಿಂಗಳನಿಂದ ರೈತರ ಜಮೀನಿಗೆ ನೀರು ಪೋಲಾಗುತ್ತಿದೆ. ಇತ್ತ ಯಾರು ಗಮನಹರಿಸಿಲ್ಲ ಎಂದು ಗ್ರಾಪಂ ಸದಸ್ಯ ರವಿ ಹಂಜಿ ಆರೋಪಿಸಿದರು.
ಹಳೇಗುಡಗನಟ್ಟಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯು ಕಳಪೆಯಾಗಿದೆ ಮತ್ತು ಕುಡಿಯುವ ನೀರಿನ ಸಮಸ್ಯೆ ಇದ್ದರೂ ಕೂಡ ಕೊಳವೆ ಬಾವಿಯ ನೀರನ್ನು ಜಮೀನಿಗೆ ನೀಡಲಾಗುತ್ತಿದೆ.
ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಉಪಾಧ್ಯಕ್ಷ ಕಿರಣ ರಜಪೂತ ಮಾತನಾಡಿ, ಯಮಕನಮರಡಿ ಗ್ರಾಮದ ಹೊರವಲಯದಲ್ಲಿ ಈಗಾಗಲೇ ಜೆಜೆಎಂ ಯೋಜನೆಯಲ್ಲಿ ಎರಡು ಹೊಸ ಕೊಳವೆ ಭಾವಿ ಕೊರೆಯಲಾಗಿದೆ. ಆದರೆ ನೀರಿನ ಪ್ರಮಾಣ ಕಡಿಮೆ ಆಗಿದ್ದು ಕುಡಿಯುವ ನೀರಿನ ಸಮಸ್ಯೆ ಬರದಂತೆ ಕ್ರಮವಹಿಸಲಾಗುವುದು. ಮನೆ ಕಟ್ಟವರು ಮೊದಲು ಪಂಚಾಯತಿಯಿಂದ ಅನುಮತಿ ಪಡೆಯಬೇಕು ಎಂದರು.
ಸಭೆಯ ಅಧ್ಯಕ್ಷೆ ವಂದನಾ ತುಬಚಿ, ರಾಜು ಕುದುರೆ, ಉದಯ ನಿರ್ಮಳ, ಪ್ರಕಾಶ ಬರಗಾಲಿ, ಕುಶಾಲ ರಜಪೂತ, ಪಿಡಿಒ ಶಿವಲಿಂಗ ಢಂಗ, ಶಾಂತ ಮಲಾಜಿ, ಎಸ್.ಎಸ್.ರಾವುಳ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.