ADVERTISEMENT

ವೈಫಲ್ಯ ಮುಚ್ಚಿಹಾಕಲು ಪೊಲೀಸರ ಅಮಾನತು: ಯತ್ನಾಳ

ರಾಜ್ಯದ ಗೃಹಸಚಿವರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮೇ 2024, 16:23 IST
Last Updated 21 ಮೇ 2024, 16:23 IST
ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ಅಂಜಲಿ ಅಂಬಿಗೇರ ಮನೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು
ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ಅಂಜಲಿ ಅಂಬಿಗೇರ ಮನೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು   

ಹುಬ್ಬಳ್ಳಿ: ‘ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವರು ತಮ್ಮ ವೈಫಲ್ಯ ಮುಚ್ಚಿಹಾಕಲು, ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಇಲ್ಲಿನ ವೀರಾಪೂರ ಓಣಿಯಲ್ಲಿರುವ ಅಂಜಲಿ ಅಂಬಿಗೇರ ಮನೆಗೆ ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮದ್ಯದ ದರ ತುಟ್ಟಿಯಾದ ಕಾರಣ ರಾಜ್ಯದಲ್ಲಿ ಗಾಂಜಾ, ಅಫೀಮು ಸೇರಿ ಮಾದಕ ವ್ಯಸ್ತುಗಳ ಮಾರಾಟ ಹಾಗೂ ಸೇವನೆ ರಾಜಾರೋಷವಾಗಿ ನಡೆದಿದೆ. ಇದರಿಂದ ಯುವ ಜನಾಂಗ ದಾರಿ ತಪ್ಪುತ್ತಿದೆ. ಎಲ್ಲ ಅಪರಾಧಗಳಿಗೆ ಇದೇ ಕಾರಣ’ ಎಂದರು.

‘ಘಟನೆ ನಡೆದು ಒಂದು ವಾರದ ನಂತರ ಭೇಟಿ ನೀಡಿದ ಗೃಹ ಸಚಿವರು ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿಲ್ಲ. ಮೃತಳ ಕುಟುಂಬಕ್ಕೆ ಮನೆಯ ಆಸೆ ತೋರಿಸಿ ಹೋಗಿದ್ದಾರೆ. ಪೊಲೀಸ್‌ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಿ, ತಮ್ಮನ್ನು ವಿರೋಧ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಡ ಹೇರಲಾಗುತ್ತಿದೆ’ ಎಂದು ಆಪಾದಿಸಿದರು.

ADVERTISEMENT

ಅಧಿವೇಶನದಲ್ಲಿ ಚರ್ಚೆ: ‘ನೇಹಾ ಹಿರೇಮಠ ಕೊಲೆ ಆದಾಗಲೇ ಇಲ್ಲಿನ ಪೊಲೀಸ್‌ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕಿತ್ತು. ಸಂತ್ರಸ್ತರಿಗೆ ರಕ್ಷಣೆ ನೀಡುವ ಬದಲು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ತಮಗೆ ಬೇಕಾದ ಪೊಲೀಸರನ್ನು ನೇಮಕ ಮಾಡಿಸಿಕೊಳ್ಳುತ್ತಾರೆ. ಈ ಎಲ್ಲಾ ಅರಾಜಕತೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುವೆ’ ಎಂದು ಅವರು ಹೇಳಿದರು.

‘ದೇಶದೆಲ್ಲೆಡೆ ಒಂದೇ ಪೊಲೀಸ್ ಕಾನೂನು ಇದೆ. ಆದರೆ, ಉತ್ತರ ಪ್ರದೇಶದಲ್ಲಿ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಂತೆ ಇಲ್ಲ ಕ್ರಮ ವಹಿಸುತ್ತಿಲ್ಲ. ಜಾತೀಯತೆ ಮಾಡದೆ, ಕಾನೂನು–ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.