ಕಲಘಟಗಿ: ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಿಂದ ರೈತರು ಬೆಳೆದ ಬೆಳೆಯ ಪಸಲಿನ ತೆನೆಗಳು ಕಾಳು ಹಿಡಿಯದೇ ಇಳುವರಿ ಕುಂಠಿತಗೊಂಡು ರೈತ ಸಮುದಾಯ ಸಂಕಷ್ಟದಲ್ಲಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡರಾದ ಉಳವಪ್ಪ ಬಳಿಗೇರ, ಬೆಳೆಹಾನಿ ಸಮೀಕ್ಷೆಗೆ ಬಂದ ರಾಜ್ಯ ತಂಡದ ಬಳಿ ಅಳಲು ತೋಡಿಕೊಂಡರು.
ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಯನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ಹಾಗೂ ಉಡುಪಿಯ ತೋಟಗಾರಿಕೆ ಉಪ ನಿರ್ದೇಶಕಿ ಭುವನೇಶ್ವರಿ ಅವರ ನೇತೃತ್ವದ ತಂಡ ತಾಲ್ಲೂಕಿನ ವಿವಿಧೆಡೆ ಮಂಗಳವಾರ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸುವಾಗ ರೈತರು ಮನವರಿಕೆ ಮಾಡಿದರು.
ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಗೋವಿನ ಜೋಳ, ಸೋಯಾಬಿನ್ ಬೆಳೆ ಬೆಳೆದಿದ್ದು ಅತಿಯಾದ ಮಳೆಯಿಂದ ಸರಿಯಾಗಿ ಕಾಳು ಕಟ್ಟದೆ ರೈತರು ಬಿತ್ತನೆ ಮಾಡಲು ಖರ್ಚು ಮಾಡಿದಷ್ಟು ಕೂಡಾ ಬಾರದ ಪರಿಸ್ಥಿತಿ ಬಂದೋದಗಿದೆ. ಪಸಲು ಬಾರದೇ ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ಬಂದಿದೆ’ ಎಂದರು.
ರೈತರ ಬೆಳೆ ಹಾನಿ ವರದಿ ಸರ್ಕಾರಕ್ಕೆ ಪಾರದರ್ಶಕವಾಗಿ ಸಲ್ಲಿಸಿ ಪರಿಹಾರ ಒದಗಿಸಿ ಎಂದು ತಂಡದ ಬಳಿ ಮನವಿ ಮಾಡಿದರು.
ದುಮ್ಮವಾಡ, ಕಲಘಟಗಿ ಹಾಗೂ ತಬಕದ ಹೊನ್ನಳ್ಳಿ ಹೋಬಳಿಯ ವಿವಿಧ ರೈತರ ಗೋವಿನ ಜೋಳ ಹಾಗೂ ಭತ್ತದ ಜಮೀನಿಗಳಿಗೆ ತೆರಳಿ ಬೆಳೆಹಾನಿ ವೀಕ್ಷಿಸಿದರು.
ತಂಡದ ಮಮತಾ ಮಾತನಾಡಿ, ‘ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಧಾರವಾಡ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆ ಹಾನಿ ದಾಖಲಿಸಿದ್ದು ಐದು ಪ್ರತ್ಯೇಕ ತಂಡ ರಚಿಸಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಲಾಗುತ್ತಿದೆ. ಕೃಷಿ ಹಾಗೂ ತೋಟಗಾರಿಗೆ ಎರಡು ಬೆಳೆ ಹಾನಿ ಕುರಿತು ಸಮೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲೆ ಸುಮಾರು 67 ಸಾವಿರ ಹೆಕ್ಟೇರ್ ಬೆಳೆ ಹಾನಿ ಆದ ವರದಿ ಬಂದಿದೆ. ತಾಲ್ಲೂಕಿನ ಬೆಳೆ ಹಾನಿ ಸಂಭವಿಸಿದ ಕುರಿತು ರೈತರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.
ಧಾರವಾಡ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಹಶೀಲ್ದಾರ್ ವೀರೇಶ ಮುಳುಗುಂದಮಠ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಮರ ನಾಯಕ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ವೈ.ಆಸಂಗಿ, ಪ್ರಭಾರ ಕೃಷಿ ಅಧಿಕಾರಿ ಎಂ.ಸಿ.ಕುಮಚಗಿ, ಕಂದಾಯ ಅಧಿಕಾರಿ ಧ್ರುವಕುಮಾರ ಹೊಸಳ್ಳಿ, ಗ್ರಾಮ ಲೆಕ್ಕಾಧಿಕಾರಿ ಸಂತೋಷ ಲಮಾಣಿ ಇದ್ದರು.
ರೈತರಾದ ಬಸನಗೌಡ ಸಿದ್ದನಗೌಡ್ರ, ಶಿವು ತಡಸ, ಸಹದೇವಪ್ಪ ನೂಲ್ವಿ, ಕಲ್ಲಪ್ಪ ಕುರಟ್ಟಿ, ಜಗದೀಶ ಡೊಳ್ಳಿನ, ಭೀಮಪ್ಪ ಬಂಡಿವಡ್ಡರ, ಶಿವಯ್ಯ ಹಿರೇಮಠ, ಧರ್ಮು ತಡಸ, ಸಿದ್ದಪ್ಪ ಗೋವಿಂದನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.