ಹುಬ್ಬಳ್ಳಿ: ‘ನಮ್ಮ ದೇಶದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಇವೆ. ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಾಜದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಕ್ಕೆ ಯುವಕರು ಮುಂದಾಗಬೇಕು’ ಎಂದುಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಶೆಟ್ಟರ್ ಹೇಳಿದರು.
ಕೇಂದ್ರ ಶಿಕ್ಷಣ ಸಚಿವಾಲಯದ ಆವಿಷ್ಕಾರ ಕೋಶ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ವತಿಯಿಂದ ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್– 2022’ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
‘ಯುವ ಶಕ್ತಿ ನಮ್ಮ ದೇಶದ ಆಸ್ತಿ. ದೇಶವು ಯುವ ಶಕ್ತಿಯ ಕಡೆಗೆ ಆಶಾಭಾವದಿಂದ ನೋಡುತ್ತಿದೆ. ಕೇಂದ್ರ ಸರ್ಕಾರವು ಇಡೀ ದೇಶದಲ್ಲೇ ಅತಿ ದೊಡ್ಡ ಸ್ಪರ್ಧೆ ಆಯೋಜಿಸುವ ಮೂಲಕ ಯುವಕರಿಗೆ ಉತ್ತಮ ಅವಕಾಶ ಕಲ್ಪಿಸಿದೆ’ ಎಂದರು.
‘ಶಾಲಾ ಶಿಕ್ಷಣದಲ್ಲಿರುವ ಸಮಸ್ಯೆಗಳ ನಿವಾರಣೆ ಈ ವರ್ಷದ ಸ್ಪರ್ಧೆಯ ವಿಷಯ. ಐದು ವರ್ಷಗಳಿಂದ ಹ್ಯಾಕಥಾನ್ ಸ್ಪರ್ಧೆ ನಡೆಯುತ್ತಿದ್ದು, ಬಿವಿಬಿ ಕಾಲೇಜು ಇದಕ್ಕೆ ಆತಿಥ್ಯ ವಹಿಸುತ್ತಾ ಬಂದಿದೆ. ಈ ಬಾರಿ 15ಕ್ಕೂ ಹೆಚ್ಚು ರಾಜ್ಯಗಳ ವಿವಿಧ ಕಾಲೇಜುಗಳಿಂದ 27 ತಂಡಗಳಲ್ಲಿ 185 ಸ್ಪರ್ಧಿಗಳು ಭಾಗವಹಿಸಿದ್ದಾರೆ. 48 ಗಂಟೆ ಸ್ಪರ್ಧೆ ನಡೆಯಲಿದೆ’ ಎಂದು ಹೇಳಿದರು.
‘ಶಿಕ್ಷಣ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಸಮಸ್ಯೆಗಳು, ಸವಾಲುಗಳು ಇವೆ. ಶಾಲಾ ಶಿಕ್ಷಣ ಗ್ರಾಮೀಣ ಭಾಗದಲ್ಲಿ ಇನ್ನೂ ಸುಧಾರಿಸಬೇಕಿದೆ. ಅದಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು’ ಎಂದು ಹೇಳಿದರು.
ಎಕಸ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ಡಾ.ರವಿ ಗುತ್ತಲ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.