ಹುಬ್ಬಳ್ಳಿ: ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ವಾಣಿಜ್ಯನಗರಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ಯುವಕರಿಗಾಗಿ ಭವ್ಯ ಭವಿಷ್ಯವನ್ನು ನಾವು ರೂಪಿಸಿದ್ದೇವೆ. ಯುವಕರಿಗೆ ರನ್‌ವೇ ಸಿದ್ದವಾಗಿದೆ, ನೀವು ಟೇಕಾಫ್ ಆಗುವುದೊಂದೇ ಬಾಕಿ ಎಂದರು.
ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಯುವ ಶಕ್ತಿ. ನಮ್ಮಲ್ಲಿ ಯುವಕರ ದೊಡ್ಡ ಪಡೆ ಇರುವುದರಿಂದ ನಾವು ಜಾಗತಿಕವಾಗಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದೇವೆ ಎಂದು ಮೋದಿ ಹೇಳಿದರು.
ಎಲ್ಲಾ ರಂಗಗಳಲ್ಲಿಯೂ ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ. ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಹಣ ಹರಿದು ಬರುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ನಮ್ಮ ಗುರಿ ಮೊದಲ 3 ಸ್ಥಾನಗಳಲ್ಲಿರುವುದಾಗಿದೆ. ಆರ್ಥಿಕ ಬೆಳವಣಿಗೆ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ತಂದುಕೊಡಲಿದೆ ಎಂದು ಮೋದಿ ಹೇಳಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಅನುರಾಗ್ ಸಿಂಗ್ ಠಾಕೂರ್, ಪ್ರಾಮಾಣಿಕ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಕೆ.ನಾರಾಯಣಗೌಡ, ಸಿ.ಸಿ. ಪಾಟೀಲ, ಹಾಲಪ್ಪ ಆಚಾರ್, ಶಾಸಕರಾದ ಜಗದೀಶ ಶೆಟ್ಟರ್, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.