ಗಜೇಂದ್ರಗಡ: ಇಲ್ಲಿ ಕೋಮು ಸೌಹಾರ್ದತೆಯ ಪ್ರತೀಕವಾದ ‘ಮೊಹರಂ’ ಪ್ರಯುಕ್ತ ಹುಲಿ ಕೈಲಿ ಮಕ್ಕಳನ್ನು ಕೊಡುತ್ತಾರೆ. ಮಕ್ಕಳು ಹೆದರಿ ಅಳುತ್ತಿದ್ದರೆ. ಪೋಷಕರು ನಗುತ್ತಿರುತ್ತಾರೆ!
ಏನಿದು? ನಿಜವಾದ ಹುಲಿಯೇ ಎಂದು ಹೌಹಾರಬೇಡಿ. ಇಲ್ಲಿ ಮೊಹರಂ ಪ್ರಯುಕ್ತ ಪ್ರತಿ ವರ್ಷ ಆಗಮಿಸುವ ಹುಲಿ ಹಾಗೂ ಅಳ್ಳೊಳ್ಳಿ ಬವ್ವಾ ವೇಷಧಾರಿಗಳು ವಿಶಿಷ್ಟ ಭಂಗಿಗಳಿಂದ ಮಕ್ಕಳು ಸೇರಿ ಎಲ್ಲರನ್ನೂ ರಂಜಿಸುತ್ತಾರೆ. ರೋಣ ತಾಲ್ಲೂಕಿನ ಇಟಗಿ, ಸೂಡಿ, ರಾಜೂರ, ಮುಶಿಗೇರಿ, ಪುರ್ತಗೇರಿ, ನಾಗೇಂದ್ರಗಡ, ಗೋಗೇರಿ, ಕೊಡಗಾನೂರ, ಜಿಗೇರಿ, ಬೆನಸಮಟ್ಟಿ, ರಾಮಾಪುರ, ದಿಂಡೂರ, ಕಾಲಕಾಲೇಶ್ವರ, ಮ್ಯಾಕಲ್ ಝರಿ, ಲಕ್ಕಲಕಟ್ಟಿ, ಅಳಗುಂಡಿ, ಚಿಕ್ಕಅಳಗುಂಡಿ, ಗಜೇಂದ್ರಗಡ, ಮಾಟರಂಗಿ ಗ್ರಾಮಗಳಲ್ಲಿ ಈ ವೇಷಧಾರಿಗಳು ಪಂಜಾ (ಮೊಹರಂ ಮೂರ್ತಿಗಳು) ಪ್ರತಿಷ್ಠಾನದ ಮೊದಲ ದಿನದಿಂದ ದೇವರಿಗೆ ಹರಕೆ ತೀರಿಸುತ್ತಾ ಜನರನ್ನು ರಂಜಿಸುತ್ತಾರೆ.
ಹುಲಿ ಬಂತು ಹುಲಿ:ಹಲಗೆ ಬಾರಿಸುವ ಸದ್ದು ಕಿವಿಗೆ ಬೀಳುತ್ತಲೇ ಹುಲಿ ಬಂತು.. ಹುಲಿ...ಎನ್ನುತ್ತಾ ಮಕ್ಕಳು ಮನೆಯಾಚೆ ಬಂದು ಹುಲಿ ವೇಷಧಾರಿಗಳು ಹಾಕುವ ಹೆಜ್ಜೆಯನ್ನು ನೋಡುತ್ತಿದ್ದರೆ, ಮತ್ತೊಂದೆಡೆ ಗೆಜ್ಜೆ ಸಪ್ಪಳ ಕೇಳುತ್ತಲೇ ಅಯ್ಯಯೋ...ಅಳ್ಳೊಳ್ಳಿ ಬವ್ವಾ ಬಂದಾನ ಎಂದು ಭಯದಿಂದ ಓಡುತ್ತಾರೆ. ಜನತೆಯನ್ನು ಆಕರ್ಷಿಸುವ ಉದ್ದೇಶದಿಂದ ಈ ಹುಲಿ ಮತ್ತು ಅಳ್ಳೊಳ್ಳಿ ಬವ್ವಾಗಲು ಮೊಹರಂ ಹಬ್ಬ ಆರಂಭಗೊಂಡ ಐದನೇ ದಿನಕ್ಕೆ ಬಣ್ಣ ಬಳಿಯುವ ಕಲಾವಿದರ ಬಳಿ ತೆರಳಿ ಮೈತುಂಬಾ ಬಣ್ಣದ ಚಿತ್ತಾರಗಳನ್ನು ಬಿಡಿಸಿಕೊಂಡು ಮೊಹರಂ ಸೇವೆ ಸಲ್ಲಿಸುತ್ತಾರೆ. ಕೆಲವರು ಕುಟುಂಬದ ಹಿರಿಕರಿಂದ ಬಳುವಳಿಯಾಗಿ ಬಂದಿರುವ ಈ ಸೇವೆಯನ್ನು ಮುಂದುವರೆಸಿದರೆ, ಮತ್ತೆ ಕೆಲವರು ಇಷ್ಟಾರ್ಥ ಸಿದ್ಧಿಗಾಗಿ ಹುಲಿ ಮತ್ತು ಅಳ್ಳೊಳ್ಳಿ ಬವ್ವಾ ವೇಷಗಳನ್ನು ಧರಿಸಿ ಹರಕೆ ತೀರಿಸುವುದು ಸಂಪ್ರದಾಯ.
ಹುಲಿ ಕೈಯಲ್ಲಿ ಮಕ್ಕಳು: ಹುಲಿ ವೇಷಧಾರಿಗಳು ಹೆಜ್ಜೆ ಹಾಕುವಾಗ ಪುಟ್ಟ ಮಕ್ಕಳನ್ನು ಅವರ ಕೈಯಲ್ಲಿ ಕೊಡಬೇಕು. ಮಗುವನ್ನು ಎತ್ತಿಕೊಂಡು ಹುಲಿ ವೇಷಧಾರಿಗಳು ಹೆಜ್ಜೆ ಹಾಕಿದರೆ ಮಕ್ಕಳಿಗೆ ತೊಡಕುಗಳು ಎದುರಾಗುವುದಿಲ್ಲ ಎಂಬ ನಂಬಿಕೆ ಈ ಭಾಗದಲ್ಲಿ ಇಂದಿಗೂ ಉಳಿದುಕೊಂಡಿದೆ.
ಆಕರ್ಷಣೀಯ ಅಳ್ಳೊಳ್ಳಿ ಬವ್ವಾ: ಮುಖಕ್ಕೆ ಕಪ್ಪು ಮಸಿ ಬಳಿದು ಸೊಂಟಕ್ಕೆ ಗೆಜ್ಜೆ ಸರ, ತಲೆಗೆ ಬಣ್ಣದ ಹಾಳೆಗಳಿಂದ ಕೂಡಿದ ಟೋಪಿ ಹಾಕಿಕೊಂಡು ಕೈಯಲ್ಲಿ ಮುದ್ದೆ ಮಾಡಿದ ಬಟ್ಟೆ ಹಿಡಿದು ಜನರನ್ನು ನಗಿಸುತ್ತಾ ಸಾಗುವ ಅಳ್ಳೊಳ್ಳಿ ಬವ್ವಾ ವೇಷಧಾರಿಗಳು ಮೊಹರಂನ ವಿಶೇಷ ಆಕರ್ಷಣೆಯಾಗಿದ್ದಾರೆ. ಅಳ್ಳೊಳ್ಳಿ ಬವ್ವಾ ವೇಷಧಾರಿಗಳು ವೇಷ ಧರಿಸಿ ತಲೆಗೆ ಟೋಪಿ ಹಾಕಿದಾಗ ಮಾತನಾಡುವುದಿಲ್ಲ. ಮೊಹರಂ ಸಂದರ್ಭ ಒಂದು ವಾರ ಅಳ್ಳೊಳ್ಳಿ ಬವ್ವಾ ವೇಷಧರಿಸಿ ಜನರನ್ನು ರಂಜಿಸುತ್ತಾ ಅವರಿಂದ ಕಾಣಿಕೆ ಪಡೆಯುತ್ತೇವೆ. ದಿನಕ್ಕೆ ₨ 400 ರಿಂದ ₨ 500 ಸಂಗ್ರಹವಾಗುತ್ತದೆ ಎನ್ನುತ್ತಾರೆ ಯಂಕಪ್ಪ ಗಂಗರ್.
ನಗರ ಪ್ರದೇಶಗಳಲ್ಲಿ ವಿರಳ:ಆದರೆ, ನಗರ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಈ ವೇಷಧಾರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಈ ಕಲೆ ಇನ್ನೂ ಜೀವಂತವಾಗಿದೆ. ಈ ವೇಷ ಧರಿಸುವ ಜನ ಮೊದಲು ತಮ್ಮ ಕುಟುಂಬದ ಸದಸ್ಯರೊಂದಿಗೆ ಸ್ಥಳೀಯ ಮಸೀದಿಗಳಿಗೆ ತೆರಳಿ ನೃತ್ಯ ಮಾಡಿ ಹರಕೆ ಸಮರ್ಪಿಸುತ್ತಾರೆ. ಐದು ದಿನ ಬೆಳಗ್ಗೆಯಿಂದ ಸಂಜೆವರೆಗೆ ವೇಷಧಾರಿಗಳ ಅಬ್ಬರ ನಡೆಯುತ್ತದೆ. ಸಂಜೆಯಾಗುತ್ತಿದ್ದಂತೆ ಅವರು ಮಸೀದಿಗಳಿಗೆ ತೆರಳಿ ಅಲ್ಲಾ ದೇವರಿಗೆ ಬಟ್ಟೆ, ಸಕ್ಕರೆ, ಲೋಹದ ಕುದುರೆ ಅರ್ಪಿಸಿ ಊದು ಹಾಕಿ, ಓದಿಕೆ ಮಾಡುತ್ತಾರೆ. ಈ ರೀತಿ ಹುಲಿ ವೇಷ ಹಾಕುವವರು ಹಿಂದೂಗಳೇ. ಇವರೆಲ್ಲ ಮಸೀದಿಗೆ ತೆರಳಿ ಕಾಣಿಕೆ ಅರ್ಪಿಸುತ್ತಾರೆ. ನಂತರ ಮುಸ್ಲಿಂ ಬಾಂಧವರ ಜತೆ ಸೇರಿ ಹಬ್ಬವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.