ADVERTISEMENT

ಗರಿಗೆದರಿದ ಹಪ್ಪಳ, ಸಂಡಿಗೆ ತಯಾರಿ

ಗ್ರಾಮಾಂತರ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಬಿಡುವಿಲ್ಲದ ಕೆಲಸ

​ಪ್ರಜಾವಾಣಿ ವಾರ್ತೆ
Published 22 ಮೇ 2018, 11:27 IST
Last Updated 22 ಮೇ 2018, 11:27 IST
ಮಹಿಳೆಯೊಬ್ಬರು ಮಾಳಿಗೆ ಮೇಲೆ ಬಿಸಿಲಿನಲ್ಲಿ ಸಂಡಿಗೆ ಒಣಗಿಸುತ್ತಿರುವುದು
ಮಹಿಳೆಯೊಬ್ಬರು ಮಾಳಿಗೆ ಮೇಲೆ ಬಿಸಿಲಿನಲ್ಲಿ ಸಂಡಿಗೆ ಒಣಗಿಸುತ್ತಿರುವುದು   

ರೋಣ: ಬೇಸಿಗೆಯ ರಣ ಬಿಸಿಲಿನ ತಾಪ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದರ ಬೆನ್ನಲ್ಲೇ ಹಳ್ಳಿಗಳಲ್ಲಿ ಹಪ್ಪಳ, ಸಂಡಿಗೆ ತಯಾರಿಸುವ ಕೆಲಸವೂ ಭರದಿಂದ ನಡೆಯುತ್ತಿದೆ. ಹಳ್ಳಿಗಳಲ್ಲಿ ಹೆಣ್ಣುಮಕ್ಕಳ ಕೈಗಳಿಗೆ ಈಗ ಬಿಡುವಿಲ್ಲದ ಕೆಲಸ. ಹಪ್ಪಳ, ಸಂಡಿಗೆ, ಶಾವಿಗೆ ಮಾಡಿ, ಮನೆಯ ಮಾಳಿಗೆ ಮೇಲಿಟ್ಟು ಒಣಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಉತ್ತರ ಕರ್ನಾಟಕದ ಊಟ ಪೂರ್ಣಗೊಳ್ಳಲು ಸಂಡಿಗೆ, ಹಪ್ಪಳ ಇರಬೇಕು. ಮನೆಗೆ ನೆಂಟರು ಬಂದರೆ ಅವರಿಗೆ ಉಣಬಡಿಸುವಾಗ ಎಣ್ಣೆಯಲ್ಲಿ ಕರಿದ ಹಪ್ಪಳ, ಸಂಡಿಗೆ ಇಟ್ಟು ಬಡಿಸಿದರೆನೇ ಮನೆ ಒಡತಿಗೆ ಸಮಾಧಾನ. ಊಟಕ್ಕೆ ಸಾರಿನ ಜತೆಗೆ ಸ್ವಲ್ಪ ಅರಳು ಸಂಡಿಗೆ ಇದ್ದರೆ ಅದರ ರುಚಿಯೇ ಭಿನ್ನ.

ಜಿಲ್ಲೆಯಲ್ಲಿ ಅಕ್ಕಿ ಹಿಟ್ಟು, ಸಾಬುದಾನಿ, ಬೂದು ಕುಂಬಳಕಾಯಿ ಸೇರಿದಂತೆ ವಿವಿಧ ಬಗೆಯ ಸಂಡಿಗೆಗಳನ್ನು ಮಾಡುತ್ತಾರೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು, ಮೊಮ್ಮಕ್ಕಳು ಸಂಡಿಗೆ ಮಾಡಲು ಮನೆಯ ಮಹಿಳೆಯರಿಗೆ ನೆರವಾಗುತ್ತಾರೆ. ಬಿರು ಬಿಸಿಲಿಗೆ ಒಣಗಿದ ಸಂಡಿಗೆಯನ್ನು ಸಂಜೆಯ ಹೊತ್ತಿಗೆ ತೆಗೆದು, ಗಾಳಿಯಾಡದ ಡಬ್ಬದಲ್ಲಿ ಇಟ್ಟು ವರ್ಷಪೂರ್ತಿ ಬಳಸುತ್ತಾರೆ.

ADVERTISEMENT

ಸಂಡಿಗೆ ತಯಾರಿಸುವ ಕಷ್ಟ ಅರಿತ ಸಾಕಷ್ಟು ಮಹಿಳೆಯರು ಅದರ ಗೋಜಿಗೆ ಹೋಗುವುದಿಲ್ಲ. ಮಾರುಕಟ್ಟೆಯಲ್ಲಿ ಲಭಿಸುವ ಸಿದ್ಧ ಸಂಡಿಗೆ ತಂದು ಬಳಸುತ್ತಾರೆ. ಆದರೆ, ಈಗಲೂ ಕೆಲವರು ರೂಢಿಗತ ಪದ್ಧತಿಗೆ ಮೊರೆ ಹೋಗುತ್ತಾರೆ.

‘ನಮ್ಮ ಪೂರ್ವಜರು ನಮಗೆ ಕಲಿಸಿದಂಥ ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು ನಾವು ಉಳಿಸಿಕೊಂಡು ಹೋಗಬೇಕಿದೆ. ಅಂಗಡಿಗಳಲ್ಲಿ ಹಲವು ವೈವಿಧ್ಯದ ಸಂಡಿಗೆ, ಹಪ್ಪಳ ಸಿಕ್ಕರೂ, ನಮಗೆ ಅವು ಅಷ್ಟೊಂದು ರುಚಿಸಲ್ಲ. ಮನೆಯಲ್ಲಿ ತಯಾರಿಸಿದರೆ, ಉತ್ತಮ ಗುಣಮಟ್ಟ ಹೊಂದಿರುತ್ತವೆ. ನಾವೇ ಕೈಯಾರೆ ತಯಾರಿಸಿದ ಸಂಡಿಗೆ –ಹಪ್ಪಳಗಳ ರುಚಿ ಹೆಚ್ಚು. ಜೊತೆಗೆ ಯಾವುದೇ ರಾಸಾಯನಿಕ ಪದಾರ್ಥಗಳ ಬಳಕೆಯೂ ಇರುವುದಿಲ್ಲ. ಹೀಗಾಗಿ ಅವುಗಳನ್ನು ನಾವು ಮನೆಯಲ್ಲೇ ತಯಾರಿಸುತ್ತೇವೆ’ ಎನ್ನುತ್ತಾರೆ ಮಹಿಳೆ ಮುತ್ತಕ್ಕ ಕೊಪ್ಪದ.

ಮರೆಯಾದ ಶಾವಿಗೆ: ತಾಲ್ಲೂಕಿನಲ್ಲಿ ಸಂಡಿಗೆ ಹಾಕುವ ದೃಶ್ಯಗಳು ಕಂಡಷ್ಟು ಶಾವಿಗೆ ಮಾಡುವವರ ದೃಶ್ಯಗಳು ಕಾಣುವುದಿಲ್ಲ. ಬೇಸಿಗೆ ಬಂತೆಂದರೆ ಮನೆ ಮುಂದಿನ ಕಟ್ಟೆಯಲ್ಲಿ ಸಾಲಾಗಿ ಕುಳಿತು ಶಾವಿಗೆ ಹೊಸೆಯುತ್ತಿದ್ದ ದೃಶ್ಯ ಬಹುತೇಕ ಮರೀಚಿಕೆ ಆಗಿವೆ. ಆದರೂ, ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಹಳೇ ಕಾಲದ ಮಹಿಳೆಯರು ಶಾವಿಗೆ ಮಾಡುವುದನ್ನು ಬಿಟ್ಟಿಲ್ಲ.

**
ಬಿಡುವಿಲ್ಲದ ಕೆಲಸಗಳಿಂದ ಸಂಡಿಗೆ–ಹಪ್ಪಳದಂತಹ ಪದಾರ್ಥ ಮನೆಯಲ್ಲಿ ತಯಾರಿಸು ವುದೇ ಕಷ್ಟ. ಎಲ್ಲವೂ ರೆಡಿಮೇಡ್ ಸಿಗುವುದರಿಂದ ಅದನ್ನೆ ಕೊಳ್ಳುತ್ತಾರೆ
ಸುನಂದಾ.ಎಸ್.ಕೆ, ಗೃಹಿಣಿ 

–ಬಸವರಾಜ ಪಟ್ಟಣಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.