ಗದಗ: ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಬಿಸಿಲಿನ ರುದ್ರ ನರ್ತನ ಮುಂದುವರಿದಿದ್ದು, ಚುನಾವಣಾ ಪ್ರಚಾರಕ್ಕೂ ಇದರ ಬಿಸಿ ನೇರವಾಗಿ ತಟ್ಟಿದೆ. ಬೆಳಿಗ್ಗೆ 9 ಗಂಟೆಯಾಗುತ್ತಿದ್ದಂತೆ ನೆತ್ತಿ ಸುಡುವ ಉಷ್ಣಾಂಶ ಅನುಭವಾಗುತ್ತಿದೆ. ಮಧ್ಯಾಹ್ನವಾಗುತ್ತಿದ್ದಂತೆ ಭೂಮಿ ಕಾದ ಕಾವಲಿಯಂತಾಗುತ್ತಿದೆ. ಉಷ್ಣಗಾಳಿ ಬೀಸಲು ಪ್ರಾರಂಭವಾಗುತ್ತದೆ. ಸಂಜೆ 5 ಗಂಟೆಯವರೆಗೂ ಸೂರ್ಯ ನಿಗಿನಿಗಿ ಕೆಂಡ. ಹೀಗಾಗಿ ಬೆಳಗಿನ ಜಾವ ಮತ್ತು ಸಂಜೆ ಸೂರ್ಯಾಸ್ತದ ನಂತರ ಮತಯಾಚನೆ ನಡೆಯುತ್ತಿದೆ.
ಶುಕ್ರವಾರ ಜಿಲ್ಲೆಯ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ದಾಟಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ನೋಟದ ಪ್ರಕಾರ ಇನ್ನೆರಡು ದಿನಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಲಿದೆ. ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ಇದುವರೆಗೆ ದಾಖಲಾಗಿರುವ ಗರಿಷ್ಠ ಉಷ್ಣಾಂಶ 40.05 ಡಿಗ್ರಿ ಸೆಲ್ಸಿಯಸ್. 2016ರ ಏಪ್ರಿಲ್ 27ರಂದು ಈ ಉಷ್ಣಾಂಶ ದಾಖಲಾಗಿತ್ತು. ಸದ್ಯದ ಬಿಸಿಲಿನ ತೀವ್ರತೆ ನೋಡಿದರೆ ಇನ್ನೆರಡು ದಿನದಲ್ಲೇ ಬಿಸಿಲು ಹೊಸ ದಾಖಲೆ ಬರೆಯುವ ಸಾಧ್ಯತೆಗಳಿವೆ.
ಬಿಸಿಲಿನ ತಾಪ ತಡೆಯಲಾರದೆ ಜಿಲ್ಲೆಯಾದ್ಯಂತ ಹಲವು ಕಡೆ ಜನರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆಗಳು ವರದಿಯಾಗಿವೆ. ಬಿಸಿಲಿನ ಝಳಕ್ಕೆ ಬೆದರಿದ ಜನರು ಮಧ್ಯಾಹ್ನದ ಹೊತ್ತು ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ಬಿಸಿಲಿಗೆ ಬಸವಳಿದ ಪಕ್ಷಗಳ ಕಾರ್ಯಕರ್ತರು ಮಧ್ಯಾಹ್ನದ ಹೊತ್ತು ಪ್ರಚಾರವನ್ನೇ ನಿಲ್ಲಿಸಿದ್ದಾರೆ. ಆಯಾ ಮತಕ್ಷೇತ್ರಗಳ ಪಟ್ಟಣ ವ್ಯಾಪ್ತಿಯಲ್ಲಿ ಬೆಳಗಿನ ಜಾವ 7ರಿಂದ 10 ಗಂಟೆಯ ಒಳಗೆ ಯುವಕರು, ಕಾರ್ಯಕರ್ತರು ಬೈಕ್‌ಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ಮಧ್ಯಾಹ್ನದ ವೇಳೆಗೆ ಪಟ್ಟಣದ ರಸ್ತೆಗಳು, ಬಡಾವಣೆಗಳು ಜನ ಸಂಚಾರ ಇಲ್ಲದೆ ಬಿಕೊ ಎನ್ನುತ್ತಿರುತ್ತವೆ. ಹಳ್ಳಿಗಳಲ್ಲಿ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಮಧ್ಯಾಹ್ನದ ಹೊತ್ತು ಜನರು ಊರ ಮುಂದಿನ ದೇವಸ್ಥಾನ, ಮರಗಳ ನೆರಳಿನಡಿ ಆಶ್ರಯ ಪಡೆಯುತ್ತಿದ್ದಾರೆ. ಅರಳಿಕಟ್ಟೆಯಲ್ಲೇ ಸದ್ಯದ ರಾಜಕೀಯ ವಿದ್ಯಮಾನಗಳ ಕುರಿತು ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.
‘ಬೆಳಿಗ್ಗೆ 7ರಿಂದ 10ಗಂಟೆಯೊಳಗೆ ಮನೆ ಮನೆಗೆ ಪ್ರಚಾರ ಕಾರ್ಯ ಮುಗಿಸುತ್ತೇವೆ. ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ನಂತರ ಪ್ರಚಾರ ನಡೆಸುವುದಿಲ್ಲ. ಸಂಜೆ 5 ಗಂಟೆ ನಂತರ ಮತ್ತೆ ಪ್ರಚಾರ, ಸಭೆಗಳು ನಡೆಯುತ್ತವೆ’ ಎಂದು ಗದಗ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರು ಹೇಳಿದರು.
‘ಈ ವರ್ಷ ಬಿಸಿಲು ಭಾಳ ಐತ್ರೀ, ನೀರಿಗೂ ಸಮಸ್ಯೆ ಆಗೈತಿ, ಮಧ್ಯಾಹ್ನ ಮನಿ ಬಿಟ್ಟು ಹೊರಗ ಬರಾಕ ಆಗವಲ್ದು’ ಎಂದು ತಾಲ್ಲೂಕಿನ ಎಚ್.ಎಸ್. ವೆಂಕಟಾಪುರದ ರೈತ ಹನಮಂತಪ್ಪ ನಡುವಿನಮನಿ ಹೇಳಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆಗೆ ಪ್ರಚಾರಕ್ಕೆ ತೆರಳುವ ಕಾರ್ಯಕರ್ತರಿಗಾಗಿ ನೀರು, ಮಜ್ಜಿಗೆ ಪ್ಯಾಕೆಟ್‌ಗಳನ್ನು ವಾಹನಗಳಲ್ಲಿ ಪೂರೈಸಲಾಗುತ್ತಿದೆ.ಕಬ್ಬಿನ ಹಾಲು, ಕಲ್ಲಂಗಡಿ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.
ಹಳ್ಳಿಗಳಲ್ಲಿ ತೋಟದ ಮನೆಗಳಲ್ಲಿ, ಮರಗಳ ನೆರಳಿನಲ್ಲಿ ಪ್ರಚಾರ ಸಭೆಗಳು ನಡೆಯುತ್ತಿವೆ. ನಗರ ಪ್ರದೇಶದಲ್ಲಿ ಸಂಜೆಯ ವೇಳೆ ಟೆರೇಸ್ ಮೇಲೆ, ಅಥವಾ ಮನೆಯ ಕೊಠಡಿಯಲ್ಲೇ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಗಳು ನಡೆಯುತ್ತಿವೆ.
‘ಏಪ್ರಿಲ್ 25ರಂದು ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ಇದೆ. ಜಾತ್ರೆ ನಂತರ ಪ್ರಚಾರ ಇನ್ನಷ್ಟು ಚುರುಕುಗೊಳಿಸಬೇಕು ಎಂದುಕೊಂಡಿದ್ದೆವು. ಆದರೆ, ವಿಪರೀತ ಬಿಸಿಲು ಇದೆ. ರೋಣ ಮತಕ್ಷೇತ್ರ ಜಿಲ್ಲೆಯಲ್ಲೇ ಅತಿ ದೊಡ್ಡ ಕ್ಷೇತ್ರ. 90ಕ್ಕೂ ಹೆಚ್ಚು ಹಳ್ಳಿಗಳು ಇದರ ವ್ಯಾಪ್ತಿಗೆ ಬರುತ್ತವೆ’ ಎಂದು ರೋಣ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.
**
ಜಿಲ್ಲೆಯಾದ್ಯಂತ ವಿಪರೀತ ಬಿಸಿಲು ಇದೆ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಮಾತ್ರ ಮನೆಮನೆಗೆ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದೇವೆ. ಪ್ರಚಾರಕ್ಕೇನೂ ಹಿನ್ನಡೆ ಆಗಿಲ್ಲ – ಸಿ.ಸಿ ಪಾಟೀಲ,ನರಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
**
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.